ಜಿಲ್ಲೆ

ಹೆಣ್ಣು ಮಕ್ಕಳಿಗೆ ಶಿಕ್ಷಣ ಅತ್ಯಂತ ಅವಶ್ಯಕ

ಮಂಜುನಾಥ ತಿಮ್ಮಯ್ಯ

ಮೈಸೂರು: ಮಹಿಳೆ ಸದೃಢವಾಗಿ ಆತ್ಮವಿಶ್ವಾಸದಿಂದ ಇದ್ದಾಗ ಯಾವುದೇ ಸಾಧನೆ ಸುಲಲಿತವಾಗಿ ಮಾಡಬಹುದು ಎಂದು ಮೈಸೂರು ವಿಶ್ವವಿದ್ಯಾಲಯದ ಸಮಾಜಕಾರ್ಯ ಅಧ್ಯಯನ ವಿಭಾಗ ಪ್ರಾಧ್ಯಾಪಕಿ ಡಾ.ಎಚ್.ಪಿ.ಜ್ಯೋತಿ ಹೇಳಿದರು.

ಶ್ರೀ ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ಸಾಂಸ್ಕೃತಿಕ ಮತ್ತು ಕ್ರೀಡಾ ವೇದಿಕೆ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇಂದಿನ ಸ್ಪರ್ಧಾತ್ಮಕ ಪ್ರಪಂಚದಲ್ಲಿ ಹೆಣ್ಣು ಮಕ್ಕಳಿಗೆ ಶಿಕ್ಷಣವು ಅತ್ಯಂತ ಅವಶ್ಯಕ. ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿನಿಯರು ಹೆಚ್ಚು ಭಾಗವಹಿಸಿದಾಗ ಮಾತ್ರ ಅವರಲ್ಲಿ ಕ್ರಿಯಾಶೀಲತೆ ಅಧಿಕವಾಗುತ್ತದೆ ಎಂದರು.

ಮಹಿಳೆಯರು ಹಿಂಜರಿಕೆಯ ಸ್ವಭಾವ ಹೊಂದಿರಬಾರದು. ಮಹಿಳೆ ಸದೃಢವಾಗಿ ಆತ್ಮವಿಶ್ವಾಸದಿಂದ ಇದ್ದಾಗ ಯಾವುದೇ ಸಾಧನೆ ಮಾಡಬಹುದು. ಅದಕ್ಕಾಗಿ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಮತ್ತು ಕಲ್ಪನಾ ಚಾವ್ಲಾ, ಭಾರತೀಯ ಸೇನಾಧಿಕಾರಿ ಕರ್ನಲ್ ಸೋಫಿಯಾ ಖುರೇಷಿ ಸ್ಫೂರ್ತಿಯಾಗಬೇಕು ಎಂದರು.

ವಿದ್ಯಾರ್ಥಿಗಳು ಸಾಮಾಜಿಕ ಮಾಧ್ಯಮಗಳನ್ನು ತಮ್ಮ ಅಭಿವೃದ್ಧಿಗೆ ಬಳಸಿಕೊಳ್ಳಬೇಕು. ಸಂಸ್ಕಾರ ಭರಿತವಾದ ಜೀವನ ರೂಢಿಸಿಕೊಳ್ಳಬೇಕು. ಬೇರೆಯವರ ಮೇಲೆ ಅವಲಂಬಿತರಾಗದೇ ನಾವು ಸ್ವಾಭಿಮಾನಿಗಳಾಗಿ ಜೀವನ ಎದುರಿಸಬೇಕು ಎಂದರು.

ಕಲಾವಿದ ಶ್ರೀಧರ್ ಜೈನ್ ಮಾತನಾಡಿ, ಹೆಣ್ಣು ಮಕ್ಕಳಲ್ಲಿ ಸಹನ ಶಕ್ತಿ ಹೆಚ್ಚಿರುವುದರಿಂದ ಜೀವನದಲ್ಲಿ ಏನು ಬೇಕಾದರೂ ಸಾಧಿಸಬಹುದಾಗಿದೆ. ಜೀವನದಲ್ಲಿ ಸೋತಾಗ ಎದೆಗುಂದದೆ ಸೋಲನ್ನೇ ಗೆಲುವನ್ನಾಗಿ ಮಾಡಿಕೊಳ್ಳಬೇಕು ಎಂದರು.

ಪ್ರಸ್ತುತ ಶಿಕ್ಷಣ ವ್ಯವಸ್ಥೆಯಲ್ಲಿ ಕನ್ನಡ ಮತ್ತು ಇಂಗ್ಲೀಷ್ ಮಾಧ್ಯಮದ ನಡುವೆ ಹೋರಾಟ ನಡೆಯುತ್ತಿದೆ. ಆದರೆ ನನ್ನ ಅನುಭವದಲ್ಲಿ ಕನ್ನಡ ಮಾಧ್ಯಮವೇ ಸರ್ವಶ್ರೇಷ್ಠವಾಗಿದ್ದು, ಕನ್ನಡದಲ್ಲಿ ಮಾತನಾಡುವುದೆಂದರೆ ಕಳೆ, ಸಂಭ್ರಮ, ಶಕ್ತಿ, ಜೀವನದಲ್ಲಿ ಉತ್ಸಾಹವನ್ನು ತಂದು ಕೊಡುತ್ತದೆ. ಹೀಗಾಗಿ ಕೀಳರಿಮೆಯನ್ನು ಬಿಟ್ಟು ಸ್ವಾಭಿಮಾನದ ಬದುಕನ್ನು ಕಟ್ಟಿಕೊಳ್ಳಬೇಕು. ಜೀವನದಲ್ಲಿ ನೊಂದವರಿಗೆ ಆಶ್ರಯವನ್ನು ನೀಡಬೇಕು ಎಂದು ತಿಳಿಸಿದರು.

ಶ್ರೀ ನಟರಾಜ ಶಿಕ್ಷಣ ಸಂಸ್ಥೆಯ ವಿಶೇಷಾಧಿಕಾರಿ ಪ್ರೊ.ಎಸ್.ಶಿವರಾಜಪ್ಪ ಮಾತನಾಡಿ, ವಿದ್ಯಾರ್ಥಿಗಳಿಗೆ ಜಾತಿ ಧರ್ಮಕ್ಕಿಂತ ದೇಶ ದೊಡ್ಡದು ಎಂಬ ಮನೋಭಾವ ಬೆಳೆಯಬೇಕು. ಕ್ಷಣ ಕ್ಷಣಕ್ಕೂ ನಾವು ಸ್ಪರ್ಧಾತ್ಮಕ ಜಗತ್ತಿಗೆ ತಯಾರಾಗಬೇಕು. ಅದಕ್ಕಾಗಿ ಪಠ್ಯದ ಜತೆಗೆ, ಪಠ್ಯೇತರ ಚಟುವಟಿಕೆಗಳಿಗೆ ಸಾಧನೆ ಮಾಡಿರುವ ನಾಯಕರು ನಮಗೆ ಆದರ್ಶ ವ್ಯಕ್ತಿಗಳಾಗಿರಬೇಕು ಎಂದರು.

ಪ್ರಾಂಶುಪಾಲೆ ಡಾ.ಎಂ.ಶಾರದಾ, ಸಾಂಸ್ಕೃತಿಕ ವೇದಿಕೆ ಸಂಚಾಲಕಿ ಎಂ.ಎಸ್.ಸಂಧ್ಯಾರಾಣಿ, ಕ್ರೀಡಾ ವೇದಿಕೆಯ ಸಂಚಾಲಕಿ ಕೆ.ಎಂ.ಹೇಮಾವತಿ ಇನ್ನಿತರರಿದ್ದರು.

ವಿವಿಧ ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿನಿಯರಿಗೆ ಬಹುಮಾನ ವಿತರಿಸಲಾಯಿತು.