ಸಕಲೇಶಪುರ: ವಿದ್ಯಾವಂತರ ಸಂಖ್ಯೆ ಹೆಚ್ಚಿದಂತೆ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯವೂ ಹೆಚ್ಚುತ್ತಿರುವುದು ಕಳವಳಕಾರಿ ಬೆಳವಣಿಗೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಧನಲಕ್ಷ್ಮೀ ಹೇಳಿದರು.
ಪಟ್ಟಣದ ಸಂತ ಜೋಸೆಫರ ಶಾಲೆಯಲ್ಲಿ ತಾಲೂಕು ಕಾನೂನು ಸಮಿತಿ ವತಿಯಿಂದ 75ನೇ ಸ್ವಾತಂತ್ರೃ ಅಮೃತ ಮಹೋತ್ಸವದ ಅಂಗವಾಗಿ ಸೋಮವಾರ ಆಯೋಜಿಸಿದ್ದ ಕಾನೂನು ಮಾಹಿತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಆಧುನಿಕತೆ ಹೆಸರಲ್ಲಿ ಇತ್ತೀಚಿನ ದಿನಗಳಲ್ಲಿ ಅಪ್ರಾಪ್ತ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಹೆಚ್ಚುತ್ತಿದೆ. ಈ ಬಗ್ಗೆ ವಿದ್ಯಾರ್ಥಿಗಳು ಅರಿವು ಹೊಂದುವುದು ಮುಖ್ಯ. ಲೈಂಗಿಕ ದೌರ್ಜನ್ಯ ನಡೆದಲ್ಲಿ ಪಾಲಕರು ಅಥವಾ ಸಂಬಂಧಪಟ್ಟ ಶಿಕ್ಷಕರಲ್ಲಿ ವಿಚಾರ ಹಂಚಿಕೊಳ್ಳುವುದು ಅಗತ್ಯ. ಕಾನೂನಿನ ಬಗ್ಗೆ ಮಾಹಿತಿ ಕೊರತೆ ಇರುವ ಸಾರ್ವಜನಿಕರು ನ್ಯಾಯಾಲಯದ ಅವರಣದಲ್ಲಿರುವ ಕಾನೂನು ಸೇವಾ ಶಿಬಿರದ ಸೌಲಭ್ಯವನ್ನು ಉಚಿತವಾಗಿ ಪಡೆದುಕೊಳ್ಳಬಹುದಾಗಿದೆ ಎಂದರು.
ಉಪವಿಭಾಗಾಧಿಕಾರಿ ಪ್ರತೀಕ್ ಬಯಾಲ್ ಮಾತನಾಡಿ, ವಿದ್ಯಾರ್ಥಿಗಳು ಸಂವಿಧಾನ ಕಲ್ಪಿಸಿರುವ ಹಕ್ಕುಗಳು ಹಾಗೂ ಕರ್ತವ್ಯಗಳ ಬಗ್ಗೆ ಅರಿವು ಮೂಡಿಸಿಕೊಳ್ಳುವುದು ಅಗತ್ಯ. ಸಂವಿಧಾನ ಕಲ್ಪಿಸಿರುವ ಹಕ್ಕುಗಳನ್ನು ಚಲಾಯಿಸುವುದರೊಂದಿಗೆ ಕರ್ತವ್ಯಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯವಾಗಲಿದೆ ಎಂದರು.
ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಮಾತನಾಡಿ, ವಿದ್ಯಾರ್ಥಿಗಳಿಗೆ ಪೊಲೀಸ್ ವ್ಯವಸ್ಥೆ ಹಾಗೂ ಕಾನೂನಿನ ಬಗ್ಗೆ ಅರಿವು ಮೂಡಿಸುವ ಅಗತ್ಯವಿದೆ. ಪೊಲೀಸ್ ಠಾಣೆಗಳಲ್ಲಿ ತೆರೆದ ಮನೆ ಕಾರ್ಯಕ್ರಮ ನಡೆಸುವ ಯೋಜನೆ ಇದ್ದು, ಇದನ್ನು ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಶೀಘ್ರವೇ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು ಎಂದರು.
ತಹಸೀಲ್ದಾರ್ ಜಯಕುಮಾರ್, ಬಿಇಒ ಶಿವಾನಂದ್, ವಕೀಲರ ಸಂಘದ ಅಧ್ಯಕ್ಷ ಶಿವಪ್ರಕಾಶ್, ನ್ಯಾಯವಾದಿ ಸುದೀರ್, ಸರ್ಕಾರಿ ಅಭಿಯೋಜಕರಾದ ಪ್ರೇಮಕುಮಾರ್, ಶಿಲ್ಪ ಮುಂತಾದವರಿದ್ದರು.