ಜಿಲ್ಲೆ

ಹೆಣ್ಣಿನ ಮನಸ್ಸು, ಗಂಡಿನ ಶಕ್ತಿ

ಕಲಬುರಗಿ: ಲೈಂಗಿಕ ಅಲ್ಪಸಂಖ್ಯಾತರು ಹೆಣ್ಣಿನ ಮನಸ್ಸು, ಗಂಡಿನ ಶಕ್ತಿ ಉಳ್ಳವರಾಗಿದ್ದು, ಎಲ್ಲ ಕೆಲಸಗಳನ್ನು ಅತ್ಯಂತ ಅಚ್ಚುಕಟ್ಟಾಗಿ, ಪರಿಪೂರ್ಣವಾಗಿ ಮಾಡುತ್ತಾರೆ. ಅವರಿಗೆ ಕೈಗಾರಿಕೆ, ಹೊಟೇಲ್, ಅಂಗಡಿಗಳು ಸೇರಿ ಎಲ್ಲ ಕ್ಷೇತ್ರದಲ್ಲಿ ಉದ್ಯೋಗವಕಾಶ ನೀಡಬೇಕು ಎಂದು ಕಲಾವಿದೆ ಮಂಜಮ್ಮ ಜೋಗತ್ತಿ ಹೇಳಿದರು.
ನಗರದ ಮಹಾದೇವಪ್ಪ ರಾಂಪುರೆ ವೈದ್ಯಕೀಯ ಕಾಲೇಜಿನಲ್ಲಿ ಭಾರತೀಯ ಮನೋವೈದ್ಯರ ಸಂಘ, ಕಲ್ಯಾಣ ಕರ್ನಾಟಕ ಸೈಕೈಯಾಟ್ರಿಕ್ ಗಿಲ್ಡ್ನಿಂದ ಶನಿವಾರ ಆಯೋಜಿಸಿದ್ದ ೩೪ನೇ ವಾರ್ಷಿಕ ಸಮ್ಮೇಳನ, ವರ್ತನಾ ವ್ಯಸನ, ಮಾನಸಿಕ ಆರೋಗ್ಯ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಚಿಕ್ಕ ಮಕ್ಕಳನ್ನು ಹಿಡಿದುಕೊಂಡು ಹೋಗ್ತಾರೆ ಅನ್ನೋ ಭಯ ಬಿಡಿಸಿ, ಕರೆದು ಊಟ ಕೊಡಿ, ಪ್ರೀತಿಯಿಂದ ಮಾತನಾಡಿಸಿ. ಪ್ರಾಥಮಿಕ ಹಂತದಲ್ಲೇ ಮಕ್ಕಳಿಗೆ ಲೈಂಗಿಕ ಅಲ್ಪಸಂಖ್ಯಾತರ ಬಗ್ಗೆ ಭಯ ದೂರವಿರಿಸಿದರೆ ಸಮಾನತೆಯ ಶಕ್ತಿ ಎಲ್ಲೆಡೆ ಮೂಡುತ್ತದೆ. ಕೆಲ ವರ್ಷಗಳ ಹಿಂದೆ ಲೈಂಗಿಕ ಅಲ್ಪಸಂಖ್ಯಾತರನ್ನು ವೈದ್ಯರೂ ಕೈಯಿಂದ ಮುಟ್ಟುತ್ತಿರಲಿಲ್ಲ. ಕಾವಲುಗಾರನು ಒಳಗೆ ಬಿಡುತ್ತಿರಲಿಲ್ಲ. ಆದರೆ ಪ್ರಸ್ತುತ ವೈದ್ಯರ ಬೃಹತ್ ಸಮಾವೇಶವನ್ನು ಏರ್ಪಡಿಸಿ ಸಮಾನತೆಯನ್ನು ಮೂಡಿಸುತ್ತಿರುವುದು, ಮೌಢ್ಯವನ್ನು ದೂರ ಮಾಡುತ್ತಿದ್ದಾರೆ. ಕಾಲ ಬದಲಾಗಿದೆ. ಸಮಾನತೆಯ ಅವಶ್ಯಕತೆ ಇದೆ ಎಂದರು.
ವಿಧಾನ ಪರಿಷತ್ ಸದಸ್ಯ, ಎಚ್‌ಕೆಇ ಅಧ್ಯಕ್ಷ ಶಶೀಲ ನಮೋಶಿ ಮಾತನಾಡಿ, ಕೋವಿಡ್ ನಂತರ ಆರೋಗ್ಯದ ಬಗ್ಗೆ ಎಲ್ಲರೂ ಎಚ್ಚರಿಕೆ ವಹಿಸುತ್ತಿದ್ದು, ಹೆಚ್ಚು ಅರಿವು ಮೂಡಿದೆ. ದೈಹಿಕ ಆರೋಗ್ಯದ ಜತೆಗೆ ಮಾನಸಿಕ ಆರೋಗ್ಯವೂ ಮಹತ್ವದಾಗಿದೆ. ನಿತ್ಯ ಒತ್ತಡ, ಸವಾಲುಗಳ ಮಧ್ಯೆ ಕಾರ್ಯನಿರ್ವಹಿಸುತ್ತಿದ್ದು, ಹಲವು ಸಮಸ್ಯೆಗಳು ಎದುರಾಗುತ್ತಿವೆ ಎಂದರು.
ಮನೋವೈದ್ಯರಿಗೆ ಸೂಕ್ತ ಸೌಲಭ್ಯಗಳು ದೊರೆಯಬೇಕು. ಲೈಂಗಿಕ ಅಲ್ಪಸಂಖ್ಯಾತರು, ಮನೋವೈದ್ಯಕೀಯ ಸಮಸ್ಯೆಗಳ ಬಗ್ಗೆ ಚರ್ಚೆಗೆ ವೇದಿಕೆ ದೊರಕಿರುವುದು ಉತ್ತಮ ನಡೆಯಾಗಿದೆ. ಸ್ವಸ್ಥ ಮಾನಸಿಕ ಸ್ಥಿತಿಯಿಂದ ಮಾತ್ರ ಸ್ವಸ್ಥ ಆರೋಗ್ಯ ರೂಪಿಸಬಹುದು ಎಂದು ಹೇಳಿದರು.
ಕರ್ನಾಟಕ ಮನೋವೈದ್ಯರ ಸಂಘದ ಕಾರ್ಯದರ್ಶಿ ಡಾ.ಹರ್ಷಾ ಜಿ.ಟಿ.ಮಾತನಾಡಿ, ಸಮಾಜದಿಂದ ದೂರ ಇರುವವರು, ವಿದ್ಯಾರ್ಥಿಗಳು, ಶಿಕ್ಷಕರಲ್ಲಿ ಮನೋರೋಗ, ಮನಸ್ಸಿನ ಸಮಸ್ಯೆಗಳ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಎಲ್ಲೆಡೆ ಮನೋವೈದ್ಯರು ಶ್ಲಾಘನೀಯ ಕಾರ್ಯ ಮಾಡುತ್ತಿದ್ದಾರೆ. ಸಂಘಟನೆಯಿಂದ ಮನೋವೈದ್ಯರ ಆರೋಗ್ಯ, ಸಂಘಟನೆಗೆ ಶ್ರಮಿಸಲಾಗುತ್ತಿದೆ. ಸದಸ್ಯತ್ವ ಹೆಚ್ಚಳ ಮಾಡಲಾಗಿದೆ ಎಂದರು.
ಡಾ.ಡಿ.ವಿ.ಪತಂಗೆ, ಡಾ.ವಿ.ಎ.ಮಾಲಿಪಾಟೀಲ್, ಡಾ.ಎನ್.ಜಿ.ಘನಾತೆ, ಡಾ.ಶಿವಶಂಕರ ಬೈರಾವಡಗಿ, ಡಾ.ಅಲೋಕ ಘನಾತೆ, ಡಾ.ಮನೋಹರ ಪತ್ತಾರ, ಡಾ.ಅಮೋಲ ಪತಂತೆ, ಡಾ.ರಾಹುಲ್ ಮಂದಕನಹಳ್ಳಿ, ಡಾ.ಅಜಯಕುಮಾರ ಢಗೆ, ಡಾ.ಎಂ.ಇರ್ಫಾನ್ ಮಹಾಗಾವಿ ಇತರರಿದ್ದರು.