ಜಿಲ್ಲೆ

ಹೆಡ್ ಕಾನ್ಸ್‌ಟೇಬಲ್ ಸಾವು, ಆತ್ಮಹತ್ಯೆ ಶಂಕೆ

ಹಾಸನ: ನಗರದ ಎನ್.ಆರ್.ವೃತ್ತದ ಬಳಿಯಿರುವ ಪ್ರವಾಸಿಮಂದಿರದ ಹಿಂಭಾಗ ಭಾನುವಾರ ರಾತ್ರಿ ಕೆಎಸ್‌ಆರ್‌ಪಿ. ಹೆಡ್ ಕಾನ್ಸ್‌ಟೇಬಲ್ ಒಬ್ಬರು ಮೃತಪಟ್ಟಿದ್ದು, ಆತ್ಮಹತ್ಯೆ ಶಂಕೆ ವ್ಯಕ್ತವಾಗಿದೆ.

ಕೆಎಸ್‌ಆರ್‌ಪಿ 11ನೇ ಬೆಟಾಲಿಯನ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಎಚ್.ಕೆ.ರಾಜೇಂದ್ರ (56) ಮೃತರು. ಕಳೆದ 2 ವರ್ಷಗಳಿಂದ ಹಾಸನ ಕೆಎಸ್‌ಆರ್‌ಪಿ ಘಟಕದಲ್ಲಿ ಕೆಲಸ ಮಾಡುತ್ತಿದ್ದರು. ಭಾನುವಾರ ಪ್ರವಾಸಿ ಮಂದಿರದಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದರು. ರಾತ್ರಿ ವೇಳೆ ಕಟ್ಟಡದ ಹಿಂಭಾಗದಲ್ಲಿ ಟೆಲಿಫೋನ್ ಕೇಬಲ್‌ನಲ್ಲಿ ಕುತ್ತಿಗೆ ಬಿಗಿದುಕೊಳ್ಳಲಾಗಿದೆ. ಈ ವೇಳೆ ಕೇಬಲ್ ವೈರ್ ತುಂಡಾಗಿದೆ. ಬಳಿಕ ಕಟ್ಟಡದ ಮೇಲಿಂದ ಕೆಳಗೆ ಬಿದ್ದಿದ್ದಾರೆ. ತಲೆಗೆ ಗಂಭೀರ ಪೆಟ್ಟು ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಥಳದಲ್ಲಿ ಡೆತ್ ನೋಟ್ ಸಿಕ್ಕಿದ್ದು, ಪ್ರಾಥಮಿಕ ತನಿಖೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಹೇಳಲಾಗಿದೆ.

ಎಚ್.ಕೆ.ರಾಜೇಂದ್ರ ಅವರು ಈ ಹಿಂದೆ ರಾಜ್ಯ ಗುಪ್ತಚರ ವಿಭಾಗ ಬೆಂಗಳೂರು ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ನಂತರ ಹಾಸನಕ್ಕೆ ವರ್ಗವಾಗಿ ಬಂದಿದ್ದರು. ಮಾನಸಿಕ ಖಿನ್ನತೆಗೆ ಒಳಗಾದ ಇವರು ನಿಮ್ಹಾನ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಸೋಮವಾರ ಬೆಳಿಗ್ಗೆ ಮೃತದೇಹ ಪತ್ತೆಯಾಗಿದ್ದು ವಿಷಯ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮೃತದೇಹವನ್ನು ಶವಾಗಾರಕ್ಕೆ ಸಾಗಿಸಿದರು. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.