ಹೊಳೆಹೊನ್ನೂರು: ಶಿವಮೊಗ್ಗ-ಹೊಳಲೂರು ಮಾರ್ಗವಾಗಿ ಆನವೇರಿ ಭಾಗಕ್ಕೆ ಹೆಚ್ಚುವರಿ ಸರ್ಕಾರಿ ಬಸ್ ಬಿಡುವಂತೆ ಆಗ್ರಹಿಸಿ ಮಂಗೋಟೆ ಗ್ರಾಮಸ್ಥರು ಮಂಗಳವಾರ ದಿಢೀರ್ ರಸ್ತೆತಡೆ ನಡೆಸಿದರು.
ಸಾರಿಗೆ ಅಧಿಕಾರಿ ಗ್ರಾಮಕ್ಕೆ ಬಂದು ಗ್ರಾಮಸ್ಥರ ಸಮಸ್ಯೆಯನ್ನು ಆಲಿಸುವವರೆಗೆ ಬಸ್‌ಗಳನ್ನು ಮುಂದಕ್ಕೆ ಬಿಡುವುದಿಲ್ಲ ಎಂದು ಪಟ್ಟುಹಿಡಿದರು. ಬಸ್‌ನ ಚಾಲಕರು, ನಿರ್ವಾಹಕರು ಮನವೊಲಿಸಿದರೂ ಪಟ್ಟು ಸಡಿಲಿಸಲಿಲ್ಲ. ಆನವೇರಿ, ಮಂಗೋಟೆ ಭಾಗದಿಂದ ನೂರಾರು ವಿದ್ಯಾರ್ಥಿಗಳು ಶಿವಮೊಗ್ಗಕ್ಕೆ ಹೋಗುತ್ತಾರೆ. ಶಾಲಾಕಾಲೇಜು ಸಮಯಕ್ಕೆ ಒಂದೆರಡು ಹೆಚ್ಚುವರಿ ಬಸ್ ಬಿಡುವಂತೆ ಹತ್ತಾರು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಕೆಲ ಸರ್ಕಾರಿ ಬಸ್‌ಗಳಲ್ಲಿ ಪಾಸ್ ಹೊಂದಿರುವ ವಿದ್ಯಾರ್ಥಿಗಳನ್ನು ಹತ್ತಿಸುವುದಿಲ್ಲ. ಪಾಸ್ ಪಡೆದ ವಿದ್ಯಾರ್ಥಿಗಳ ಗೋಳು ಕೇಳುವವರಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸ್ಥಳಕ್ಕೆ ಡಿಪೋ ಮ್ಯಾನೇಜರ್ ಬಂದು ಸಮಸ್ಯೆ ಬಗೆಹರಿಸುವವರೆಗೆ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಪಟ್ಟುಹಿಡಿದರು. ನಂತರ ಶಿವಮೊಗ್ಗ ಡಿಪೋ ಮ್ಯಾನೇಜರ್ ಸ್ಥಳಕ್ಕೆ ಬಂದು ಗ್ರಾಮಸ್ಥರ ಸಮಸ್ಯೆ ಆಲಿಸಿದರು. ನಾಳೆಯಿಂದ ಒಂದೆರಡು ಹೆಚ್ಚುವರಿ ಬಸ್ ಬಿಡುವುದಾಗಿ ಮತ್ತು ಎಲ್ಲ ಬಸ್‌ಗಳಲ್ಲೂ ವಿದ್ಯಾರ್ಥಿಗಳನ್ನು ಹತ್ತಿಸಿಕೊಳ್ಳಲು ಕ್ರಮ ಕೈಗೊಳುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆದರು.
ಗ್ರಾಪಂ ಸದಸ್ಯ ರವಿ ಗೌಡ, ಮಾಳಿಗೆ ಚನ್ನೇಶ್, ದಾನೇಶ್, ಬಸವರಾಜ್, ಕೋಟಿ ನಾಗಪ್ಪ, ವಿದ್ಯಾರ್ಥಿಗಳು ಇದ್ದರು.