:ಹುಣಸೂರು ನಗರದ ಅರಣ್ಯ ಇಲಾಖೆ ಕಚೇರಿ ಮುಂಭಾಗ ದಿನಗೂಲಿ ನೌಕರರ ಸಂಘದ ಸದಸ್ಯರು ಪ್ರತಿಭಟನೆ ನಡೆಸಿದರು. ನಾಗರಾಜು, ನಟೇಶ್, ನಾಗೇಶ್, ಶೇಖರ್, ಶಂಕರ್ ಇದ್ದರು.  
ಜಿಲ್ಲೆ

ಹೆಚ್ಚುವರಿ ವೇತನ ಬಿಡುಗಡೆ ಮಾಡಿ

ಹುಣಸೂರು: ಅರಣ್ಯ ಇಲಾಖೆಯ ದಿನಗೂಲಿ ನೌಕರ (ಪಿಸಿಪಿ)ರಿಗೆ ಬಾಕಿಯಿರುವ ಹೆಚ್ಚುವರಿ ವೇತನ ಬಿಡುಗಡೆ ಮಾಡುವುದು ಸೇರಿದಂತೆ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅರಣ್ಯ ಇಲಾಖೆಯ ದಿನಗೂಲಿ ನೌಕರರ ಸಂಘದ ಸದಸ್ಯರು ಮಂಗಳವಾರದಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಿಸಿದರು.

ನಗರದ ಅರಣ್ಯ ಇಲಾಖೆಯ ಪ್ರಾದೇಶಿಕ ವಿಭಾಗ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ ಸದಸ್ಯರು, ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಘೋಷಣೆಗಳನ್ನು ಮೊಳಗಿಸಿದರು.
ರಾಜ್ಯ ಅರಣ್ಯ ಇಲಾಖೆ ದಿನಗೂಲಿ ನೌಕರರ ಸಂಘದ ಅಧ್ಯಕ್ಷ ಎ.ಎಂ.ನಾಗರಾಜು ಮಾತನಾಡಿ, ದಿನಗೂಲಿ ನೌಕರರಿಗೆ ನೀಡಬೇಕಿದ್ದ 2000 ರೂ.ಗಳ ಹೆಚ್ಚವರಿ ವೇತನವನ್ನು ಅಧಿಕಾರಿಗಳು ನೀಡುತ್ತಿಲ್ಲ. ಇಲಾಖೆಯ ಸಸ್ಯಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಹಿಳಾ ನೌಕರರಿಗೆ ಕಡಿಮೆ ಮಜೂರಿ ನೀಡುವ ಮೂಲಕ ಅನ್ಯಾಯವೆಸಗಲಾಗುತ್ತಿದೆ. ಜ್ಯೋತಿ ಎನ್ನುವ ಮಹಿಳೆ 15 ವರ್ಷಗಳಿಂದ ಸೇವೆ ಸಲ್ಲಿಸಿದ್ದರೂ ಕಾಯಂಗೊಳಿಸಿಲ್ಲ ಎಂದು ಕಿಡಿಕಾರಿದರು.

ಕೆ.ಆರ್.ನಗರ ತಾಲೂಕಿನಲ್ಲಿ ಪಿಸಿಪಿ ನೌಕರರಿಗೆ ಒಂದೂವರೆ ವರ್ಷಗಳಿಂದ ವೇತನ ನೀಡಿಲ್ಲ. ಕೆಲವೆಡೆ ದಿನಗೂಲಿ ನೌಕರರನ್ನು ಹೊರಗುತ್ತಿಗೆ ನೌಕರರೆಂದು ಪರಿಗಣಿಸಿ ವೇತನ ನೀಡುತ್ತಿದ್ದು, ಈ ರೀತಿಯಲ್ಲಿ ಮೂಲಹುದ್ದೆಯನ್ನು ವ್ಯತ್ಯಾಸ ಮಾಡಲು ಕಾರಣವೇನೆಂದು ತಿಳಿಸಿಲ್ಲ. ವಿವಿಧ ವಲಯಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರಿಗೆ 8 ತಿಂಗಳಿನಿಂದ ವೇತನ ನೀಡಿಲ್ಲ. ಇಲಾಖೆಯ ಇಂತಹ ತಾರತಮ್ಯ ಮತ್ತು ನೌಕರವಿರೋಧಿ ನೀತಿಯನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದು, ಅಧಿಕಾರಿಗಳು ಸ್ಥಳಕ್ಕೆ ಬಂದು ಸಮಸ್ಯೆ ಪರಿಹರಿಸುವ ತನಕ ಪ್ರತಿಭಟನೆ ಮುಂದುವರಿಸುತ್ತೇವೆಂದು ಎಚ್ಚರಿಸಿದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಡಿಸಿಎಫ್ ಪಿ.ಎ.ಸೀಮಾ, ಬೇಡಿಕೆಗಳ ಕುರಿತು ಹಿರಿಯ ಅಧಿಕಾರಿಗಳಲ್ಲಿ ಮಾತನಾಡುವುದಾಗಿ ಭರವಸೆ ನೀಡಿದರಾದರೂ ಪ್ರತಿಭಟನೆ ಮುಂದುವರಿದಿದೆ. ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾಧ್ಯಕ್ಷ ನಟೇಶ್, ಪಿರಿಯಾಪಟ್ಟಣ ತಾಲೂಕು ಅಧ್ಯಕ್ಷ ಶಂಕರ್, ಕಾರ್ಯದರ್ಶಿ ಗಣೇಶ್, ಹರೀಶ್, ಶೇಖರ್ ಮುಂತಾದವರು ಹಾಜರಿದ್ದರು.