ಜಿಲ್ಲೆ

ಹೆಚ್ಚುವರಿ ಬಸ್ ನಿಯೋಜನೆಗೆ ಆಗ್ರಹಿಸಿ ಪ್ರತಿಭಟನೆ

ರವಿಕುಮಾರ್ ಪಿ. ಕೆ

ಶ್ರೀರಂಗಪಟ್ಟಣ: ತಾಲೂಕಿನ ಗ್ರಾಮೀಣ ಭಾಗದ ಮಾರ್ಗಗಳಲ್ಲಿ ಸಾರಿಗೆ ಬಸ್‌ಗಳು ನಿಗದಿತ ವೇಳೆಗೆ ಆಗಮಿಸದ ಹಿನ್ನೆಲೆಯಲ್ಲಿ ಸಾರಿಗೆ ಸಂಸ್ಥೆ ಬಸ್‌ಗಳನ್ನು ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಅಡ್ಡಗಟ್ಟಿ ಪ್ರತಿಭಟನೆ ನಡೆಸಿದರು.


ತಾಲೂಕಿನ ಪೀಹಳ್ಳಿ ಗ್ರಾಮ ಮುಂಭಾಗದಲ್ಲಿ ಮಂಡ್ಯ- ಅರಕೆರೆ ಮಾರ್ಗವಾಗಿ ಜನದಟ್ಟಣೆ ಕೂಡಿದ, ತಡವಾಗಿ ಆಗಮಿಸಿದ ಬಸ್‌ಗಳನ್ನು ಗುರುವಾರ ಅಡ್ಡಗಟ್ಟಿದ ವಿದ್ಯಾರ್ಥಿಗಳು, ರಾಜ್ಯ ಸರ್ಕಾರ ಹಾಗೂ ಮಂಡ್ಯ ವಿಭಾಗದ ಸಾರಿಗೆ ಇಲಾಖೆ ವಿರುದ್ಧ ಆಕ್ರೋಶ ಹೊರಹಾಕಿದರು.


ಅರಕೆರೆಯ ಪಾಲಿಟೆಕ್ನಿಕ್ ಹಾಗೂ ಮಂಡ್ಯ ಕಡೆಗೆ ತೆರಳಲು ಬಸ್ಸಿಗೆ ಕಾದು ಹೈರಾಣಾದ ವಿದ್ಯಾರ್ಥಿಗಳು ಗ್ರಾಮದ ರಸ್ತೆಯಲ್ಲಿ ಜಮಾವಣೆಗೊಂಡಿದ್ದು, ಗ್ರಾಮಸ್ಥರು ಸಹ ವಿದ್ಯಾರ್ಥಿಗಳೊಂದಿಗೆ ಸೇರಿ ಸುಮಾರು ಅರ್ಧ ತಾಸುಗಳ ಕಾಲ ಅಡ್ಡಗಟ್ಟಿದರು.


ವಿಷಯ ತಿಳಿದು ಸಾರಿಗೆ ಸಂಸ್ಥೆಯ ಅಧಿಕಾರಿ ಪುಷ್ಪಲತಾ ಸ್ಥಳಕ್ಕೆ ಆಗಮಿಸಿ ಸಮಸ್ಯೆ ಆಲಿಸಿದರು. ಈ ಮಾರ್ಗದಲ್ಲಿ ಹೆಚ್ಚುವರಿ ಬಸ್‌ಗಳನ್ನು ನಿಯೋಜಿಸಲು ತೀರ್ಮಾನಿಸಿದ್ದು, ಸೋಮವಾರದಿಂದಲೇ ಸಂಚಾರ ಆರಂಭಿಸಲಿವೆ. ನಮ್ಮ ಸಿಬ್ಬಂದಿಗೂ ತಾಳ್ಮೆ ಕಾಯ್ದಕೊಳ್ಳುವಂತೆ ಸೂಚನೆ ನೀಡಲಾಗುವುದು. ಹೀಗಾಗಿ ಗ್ರಾಮೀಣ ಜನ ಹಾಗೂ ಮುಖ್ಯವಾಗಿ ವಿದ್ಯಾರ್ಥಿಗಳು ಸಂಯಮದಿಂದ ಸಾರಿಗೆ ನಿಗಮದೊಂದಿಗೆ ಸಹಕಾರ ನೀಡಿ ಎಂದು ಮನವಿ ಮಾಡಿದ ಬಳಿಕ ಪ್ರತಿಭಟನೆ ಕೈಬಿಡಲಾಯಿತು.


ಪೀಹಳ್ಳಿ ಗ್ರಾಮದ ಮುಖಂಡರಾದ ಪೀಹಳ್ಳಿ ರಮೇಶ್ ವಿದ್ಯಾರ್ಥಿಗಳಾದ ದಿಲೀಪ್, ಅರುಣ್ ಕುಮಾರ್, ಶಶಾಂಕ್ ಸೇರಿದಂತೆ ನೂರಾರು ಜನರು ಸ್ಥಳದಲ್ಲಿ ಹಾಜರಿದ್ದರು.