ಹನೂರು: ರೈತರಿಗೆ ಅಗತ್ಯಕ್ಕೆ ತಕ್ಕಂತೆ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಅಳವಡಿಸಬೇಕು. ವಾಲಿರುವ ಕಂಬ, ಜೋತು ಬಿದ್ದಿರುವ ವಿದ್ಯುತ್ ತಂತಿಗಳನ್ನು ಅಳವಡಿಸಬೇಕು. ವಸತಿ ಗೃಹಗಳಲ್ಲಿ ಲೈನ್‌ಮನ್ ವಾಸ್ತವ್ಯವಿರಬೇಕು. ತೋಟದ ಮನೆಗಳಿಗೆ ನಿರಂತರ ಜ್ಯೋತಿ ಸೌಕರ್ಯ ಕಲ್ಪಿಸಬೇಕು. ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು.
ಇದು ಹನೂರಿನ ಸೆಸ್ಕ್ ಉಪವಿಭಾಗೀಯ ಕಚೇರಿ ಆವರಣದಲ್ಲಿ ಬುಧವಾರ ವಿದ್ಯುತ್ ಸಮಸ್ಯೆ ಸಂಬಂಧ ಆಯೋಜಿಸಿದ್ದ ಜನಸಂಪರ್ಕ ಸಭೆಯಲ್ಲಿ ರೈತರು ಹಾಗೂ ಸಾರ್ವಜನಿಕರಿಂದ ಕೇಳಿ ಬಂದ ಒತ್ತಾಯಗಳು.
ಈ ವೇಳೆ ರೈತ ಸಂಘದ ಹನೂರು ಘಟಕಾಧ್ಯಕ್ಷ ಚಂಗಡಿ ಕರಿಯಪ್ಪ ಮಾತನಾಡಿ, ತಾಲೂಕಿನಲ್ಲಿ ರೈತರ ಜಮೀನುಗಳಿಗೆ ಸಂಪರ್ಕ ಕಲ್ಪಿಸಿರುವ ಬಹುತೇಕ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಸಾಮರ್ಥ್ಯಕ್ಕಿಂತ ಹೆಚ್ಚು ಕಾರ್ಯನಿರ್ವಹಿಸುತ್ತಿವೆ. ಪರಿಣಾಮ ಆಗಾಗ್ಗೆ ದುರಸ್ತಿಗೊಳ್ಳುತ್ತಿವೆ. ಇದರಿಂದ ರೈತರು ತುಂಬಾ ತೊಂದರೆ ಪಡುವಂತಾಗಿದೆ. ಆದ್ದರಿಂದ ಹೆಚ್ಚುವರಿ ಟಿಸಿಗಳನ್ನು ಅಳವಡಿಸಬೇಕು. ಇನ್ನು ಇಂಡಿಗನತ್ತ ಹಾಗೂ ತುಳಸಿಕೆರೆ ಗ್ರಾಮದಲ್ಲಿ ಅಳವಡಿಸಿರುವ ಸೋಲಾರ್ ಸಮರ್ಪಕವಾಗಿ ಕಾರ್ಯನಿರ್ವಹಿಸುವಂತೆ ಅಗತ್ಯ ಕ್ರಮ ವಹಿಸಬೇಕು. ತೋಟದ ಮನೆಗಳಿಗೆ ನಿರಂತರ ಜ್ಯೋತಿ ಸೌಕರ್ಯ ಒದಗಿಸಿ ಅನುಕೂಲ ಕಲ್ಪಿಸಬೇಕು. ಜತೆಗೆ ಲೈನ್‌ಮನ್‌ಗಳು ವಸತಿ ಗೃಹದಲ್ಲಿ ವಾಸ್ತವ್ಯ ಹೂಡದ ಪರಿಣಾಮ ವಿದ್ಯುತ್ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಲೈನ್‌ಮನ್‌ಗಳು ವಸತಿ ಗೃಹಗಳಲ್ಲಿ ತಂಗುವಂತಾಗಬೇಕು ಎಂದು ಒತ್ತಾಯಿಸಿದರು.
ಹೂಗ್ಯಂ ಗ್ರಾಮದ ವಿಜಯೇಂದ್ರ ಮಾತನಾಡಿ, ಹೂಗ್ಯಂ ಭಾಗದಲ್ಲಿ ಒಂದು ಟಿಸಿಯನ್ನು 10 ಜಮೀನುಗಳ ಕೊಳವೆ ಬಾವಿಗಳಿಗೆ ಸಂಪರ್ಕ ನೀಡಲಾಗಿದೆ. ಇದರಿಂದ ಸಮರ್ಪಕ ನೀರು ಪೂರೈಕೆಯಾಗುತ್ತಿಲ್ಲ. ಟಿಸಿ ಅಳವಡಿಸುವಂತೆ ಶುಲ್ಕ ಪಾವತಿಸಿ 4 ತಿಂಗಳು ಕಳೆದಿದೆ. ಆದರೆ, ಯಾವುದೇ ಕ್ರಮವಾಗಿಲ್ಲ. ಈ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದ್ದರೂ ಪ್ರಯೋಜನವಾಗಿಲ್ಲ ಎಂದು ದೂರಿದರು.
ಇನ್ನು ನೆರೆದಿದ್ದ ಸಾರ್ವಜನಿಕರು ಮಾತನಾಡಿ, ಇತ್ತೀಚೆಗೆ ತಾಲೂಕಿನ ಕೆಲವು ಕಡೆಗಳಲ್ಲಿ ಗಾಳಿ, ಮಳೆಗೆ ವಿದ್ಯುತ್ ಕಂಬಗಳು ವಾಲಿದ್ದು, ತಂತಿಗಳು ಜೋತು ಬಿದ್ದಿವೆ. ಇದನ್ನು ಸರಿಪಡಿಸುವಲ್ಲಿ ಲೈನ್‌ಮನ್‌ಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಇದರಿಂದ ಜನರಲ್ಲಿ ಭಯದ ವಾತವರಣ ಮನೆ ಮಾಡಿದೆ. ಆದ್ದರಿಂದ ಈ ಬಗ್ಗೆ ಗಮನಹರಿಸಬೇಕು. ಇನ್ನು ಜನಸಂಪರ್ಕ ಸಭೆ ನೆಪಮಾತ್ರಕ್ಕಷ್ಟೇ. ಯಾವುದೇ ಸಮಸ್ಯೆಗಳು ಬಗೆಹರಿಯುತ್ತಿಲ್ಲ. ಆದ್ದರಿಂದ ಈ ಸಭೆಯಲ್ಲಿ ಸ್ವೀಕರಿಸಿದ ಸಾರ್ವಜನಿಕ ದೂರುಗಳನ್ನು ಶೀಘ್ರ ಬಗೆಹರಿಸಬೇಕು ಎಂದು ಒತ್ತಾಯಿಸಿದರು.
ಬಳಿಕ ಸೆಸ್ಕ್ ಇಇ ಸಾಹೀದಾ ಬೇಗಂ ಮಾತನಾಡಿ, ಅಗತ್ಯ ಟಿಸಿಗಳ ಅಳವಡಿಕೆ, ವಸತಿ ಗೃಹಗಳಲ್ಲಿ ಸಿಬ್ಬಂದಿ ಇರುವಿಕೆ, ವಾಲಿರುವ ಕಂಬಗಳ ಸರಿಪಡಿಸುವಿಕೆ ಸೇರಿದಂತೆ ಇನ್ನಿತರೆ ವಿದ್ಯುತ್ ಸಮಸ್ಯೆಯ ಬಗ್ಗೆ ಅಗತ್ಯ ಕ್ರಮವಹಿಸಿ ಇತ್ಯರ್ಥ ಪಡಿಸುವಂತೆ ಎಇಇ ಶಂಕರ್ ಅವರಿಗೆ ಸೂಚಿಸಿದರು.