ಚಿತ್ರದುರ್ಗ: ಜಿಲ್ಲೆಗೆ ಹೆಚ್ಚುವರಿ ಏಕಲವ್ಯ ವಸತಿ ಶಾಲೆ ಮಂಜೂರಿಗೆ ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವರಿಗೆ ಶಿಫಾರಸು ಮಾಡುವಂತೆ ಸಂಸದ ಗೋವಿಂದ ಎಂ. ಕಾರಜೋಳ ಅವರು ಬುಧವಾರ ದೆಹಲಿಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಜೆ.ಪಿ.ನಡ್ಡಾ ಅವರಿಗೆ ಮನವಿ ಸಲ್ಲಿಸಿದರು.
ಚಿತ್ರದುರ್ಗ ಜಿಲ್ಲೆಯಲ್ಲಿ ನಾಲ್ಕು ಲಕ್ಷಕ್ಕೂ ಅಧಿಕ ಸಂಖ್ಯೆಯ ಪರಿಶಿಷ್ಟ ಪಂಗಡಗಳ ಜನರಿದ್ದು, ಚಳ್ಳಕೆರೆ ಹಾಗೂ ಮೊಳಕಾಲ್ಮೂರು ತಾಲೂಕುಗಳಲ್ಲಿ ಸಂಖ್ಯೆ ಅತಿ ಹೆಚ್ಚಿದೆ. ಅವರ ಮಕ್ಕಳು ಗುಣಮಟ್ಟದ ಶಿಕ್ಷಣ ಪಡೆದು ಮುಖ್ಯ ವಾಹಿನಿಗೆ ಬರಬೇಕೆಂಬುದು ನನ್ನ ಸದಾಶಯ. ಈಗಿರುವ ಒಂದು ಏಕಲವ್ಯ ವಸತಿ ಶಾಲೆಯಿಂದ ಬೇಡಿಕೆ ಪೂರೈಸಲಾಗುತ್ತಿಲ್ಲ. ಹೀಗಾಗಿ ಹೆಚ್ಚುವರಿ ಶಾಲೆ ಅಗತ್ಯವನ್ನು ಮನವರಿಕೆ ಮಾಡಿರುವುದಾಗಿ ತಿಳಿಸಿದರು.
ಹೆಚ್ಚುವರಿ ಶಾಲೆಗೆ ಅಗತ್ಯವಿರುವ 15 ಎಕರೆ ಜಮೀನನ್ನು ಗುರುತಿಸಲು ಈಗಾಗಲೇ ಕ್ರಮ ಕೈಗೊಂಡಿರುವುದಾಗಿ ಸಂಸದರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಎಂಎಲ್‌ಸಿಗಳಾದ ಕೆ.ಎಸ್.ನವೀನ್, ಎನ್.ರವಿಕುಮಾರ್ ಈ ಸಂದರ್ಭದಲ್ಲಿ ಇದ್ದರು.