ನೆಲಮಂಗಲ: ಪ್ರತಿಯೊಬ್ಬ ಕಾರ್ಯಕರ್ತ ಹಾಗೂ ಮುಖಂಡರು ಕಾಂಗ್ರೆಸ್‌ಗೆ ಅತಿಹೆಚ್ಚು ಸದಸ್ಯರು ನೋಂದಣಿ ಆಗುವಂತೆ ಮಾಡಬೇಕು. ತನ್ಮೂಲಕ ಪಕ್ಷವನ್ನು ಮತ್ತಷ್ಟು ಬಲಪಡಿಸಬೇಕು ಎಂದು ವಿಧಾನಪರಿಷತ್ ಸದಸ್ಯ ಎಸ್. ರವಿ ತಿಳಿಸಿದರು.
ನಗರದ ಪರಮಣ್ಣ ಬಡಾವಣೆ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಬ್ಲಾಕ್ ಕಾಂಗ್ರೆಸ್ ಡಿಜಿಟಲ್ ಸದಸ್ಯತ್ವ ಅಭಿಯಾನ ಕಾರ್ಯಾಗಾರ ಕುರಿತು ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದರು.
ಕಾಂಗ್ರೆಸ್‌ನ ಅಧಿಕಾರಾವಧಿಯಲ್ಲಿ ಅನುಷ್ಠಾನಗೊಳಿಸಿದ ಜನಪರ ಕಾರ್ಯಕ್ರಮಗಳನ್ನು ಜನಸಾಮಾನ್ಯರಿಗೆ ತಲುಪಿಸಲು ಪಕ್ಷ ಅವಕಾಶ ನೀಡಿದೆ. ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳ ಆಡಳಿತದಲ್ಲಿ ಬಡವರು, ರೈತರು ಮತ್ತು ಕೂಲಿಕಾರ್ಮಿಕರಿಗೆ ಆಗುತ್ತಿರುವ ಅನ್ಯಾಯದ ಅರಿವು ಜನರಲ್ಲಿದೆ. ಜೆಡಿಎಸ್ ತೊರೆಯುತ್ತಿರುವ ಸಾಕಷ್ಟು ನಾಯಕರು ಕಾಂಗ್ರೆಸ್ ಸೇರುತ್ತಿದ್ದಾರೆ. ಮುಂಬರುವ ಜಿಪಂ ಹಾಗೂ ತಾಪಂ ಹಾಗೂ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ಪಕ್ಷವನ್ನು ಸಂಘಟಿಸಬೇಕಾಗಿದೆ. ಆದ್ದರಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಪಕ್ಷವನ್ನು ಮತ್ತಷ್ಟು ಬಲಪಡಿಸಲು ಸದಸ್ಯತ್ವ ಅಭಿಯಾನ ಹಮ್ಮಿಕೊಂಡಿದ್ದಾರೆ. ನಗರಸಭೆ ಸೇರಿ ತಾಲೂಕಿನ 5 ಜಿಪಂ ಕ್ಷೇತ್ರಗಳಲ್ಲಿ ತಲಾ 3 ಮಂದಿ ಮುಖ್ಯ ನೋಂದಣಿಗಾರರನ್ನು ನೇಮಿಸಬೇಕು. ಮಾ.30ರೊಳಗೆ ಅಭಿಯಾನವನ್ನು ಪೂರ್ಣಗೊಳಿಸಬೇಕು ಎಂದರು.
ಬಹುಮಾನ ವಿತರಣೆ: ಈಗಾಗಲೇ ಬೆಂಗಳೂರಿನ ಮಹಿಳಾ ಕಾಂಗ್ರೆಸ್‌ನ ಸದಸ್ಯೆಯೊಬ್ಬರು ಒಂದೇ ದಿನದಲ್ಲಿ 202 ಮಂದಿಯ ಸದಸ್ಯತ್ವ ನೋಂದಣಿ ಮಾಡಿಸಿದ್ದಾರೆ. ಅದ್ದರಂತೆ ತಾಲೂಕಿನಾದ್ಯಂತ ಅತಿಹೆಚ್ಚು ಸದಸ್ಯರನ್ನು ನೋಂದಣಿ ಮಾಡುವ ತಂಡಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಬಹುಮಾನ ನೀಡಲಿದ್ದಾರೆ ಎಂದು ರವಿ ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಬಿಎಂಎಲ್ ಕಾಂತರಾಜು ಅವರು ಕಾಂಗ್ರೆಸ್ ಸೇರಿದ್ದಾರೆ. ತಾಲೂಕಿನಲ್ಲಿ ಅವರ ನೂರಾರು ಬೆಂಬಲಿಗರು ಕಾಂಗ್ರೆಸ್ ಸೇರಲು ತುದಿಗಾಲಿನಲ್ಲಿ ನಿಂತಿದ್ದಾರೆ. ಮೊದಲು ಅವರ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮ ಮಾಡಿದಲ್ಲಿ, ಸದಸ್ಯತ್ವ ಅಭಿಯಾನ ಮತ್ತಷ್ಟು ಚುರುಕು ಪಡೆದುಕೊಳ್ಳುತ್ತದೆ ಎಂದು ಬೂದಿಹಾಲ್ ಗ್ರಾಪಂ ಮಾಜಿ ಅಧ್ಯಕ್ಷ ನಾಗರಾಜು ಸಲಹೆ ನೀಡಿದರು.
ಕಸಬಾ ಹೋಬಳಿ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಸಿ.ಎಂ. ಗೌಡ. ಗ್ರಾಪಂ ಅಧ್ಯಕ್ಷ ಮುನಿರಾಜು, ತಾಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ರಂಗನಾಥ್, ಯುವಕಾಂಗ್ರೆಸ್ ಅಧ್ಯಕ್ಷ ನಾರಾಯಣಗೌಡ, ಮುಖಂಡ ಎಚ್.ಪಿ. ಚಲುವರಾಜು, ದೀಪಕ್‌ಕಿರಣ್, ಚೌಡಯ್ಯ, ಸಪ್ತಗಿರಿಶಂಕರ್‌ನಾಯಕ್, ಕೆ.ಕೆ. ಕೃಷ್ಣಪ್ಪ, ಕೆ. ನಾಗರಾಜು, ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ಘಟಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕನಕರಾಜು, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ನಾಗರತ್ನಮ್ಮ, ಗ್ರಾಪಂ ಮಾಜಿ ಸದಸ್ಯೆ ಹನುಮಂತಮ್ಮ, ಪುರಸಭೆ ಮಾಜಿ ಸದಸ್ಯ ಎನ್.ಎಸ್, ಮೂರ್ತಿ, ಗೋಪಿ ಮತ್ತಿತರರು ಇದ್ದರು.