*ಶಾಸಕ ಎಚ್.ಕೆ.ಸುರೇಶ್ ಭರವಸೆ
ವಿಜಯವಾಣಿ ಸುದ್ದಿಜಾಲ ಬೇಲೂರು
ತಾಲೂಕಿನ ಮಲೆನಾಡು ಭಾಗಕ್ಕೆ ಹೆಚ್ಚಿನ ಅನುದಾನವನ್ನು ತಂದು ಅಭಿವೃದ್ಧಿಪಡಿಸಿ ಎಲ್ಲ ಸೌಲಭ್ಯಗಳನ್ನು ಒದಗಿಸಿ ಕೊಡಲಾಗುವುದು ಎಂದು ಶಾಸಕ ಎಚ್.ಕೆ.ಸುರೇಶ್ ಭರವಸೆ ನೀಡಿದರು.
ತಾಲೂಕಿನ ಸಿದ್ದರಹಳ್ಳಿ ಗ್ರಾಮದಲ್ಲಿ ಕಾವೇರಿ ನೀರಾವರಿ ನಿಗಮದಿಂದ ಮಂಜೂರಾಗಿರುವ ಒಂದು ಕೋಟಿ ರೂ. ವೆಚ್ಚದ ರಸ್ತೆ ಡಾಂಬರೀಕರಣ ಮತ್ತು ಚರಂಡಿ ಕಾಮಗಾರಿಗೆ ಶನಿವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಬೇಲೂರು ತಾಲೂಕಿನ ಮಲೆನಾಡು ಭಾಗಕ್ಕೆ ಈ ಇಂದಿನಿಂದಲೂ ಅಭಿವೃದ್ಧಿ ವಿಚಾರದಲ್ಲಿ ತಾರತಮ್ಯ ನಡೆಯುತ್ತಿರುವುದು ಶೋಚನೀಯ ಸಂಗತಿಯಾಗಿದೆ. ನಾನು ಶಾಸಕನಾದ ನಂತರದ ದಿನಗಳಲ್ಲಿ ಮಲೆನಾಡಿನ ಸಂಪೂರ್ಣ ಎಲ್ಲ ಗ್ರಾಮಗಳಿಗೂ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಯನ್ನು ಪರಿಶೀಲಿಸಿ ಕಾಮಗಾರಿಗಳು ಹಾಗೂ ಇನ್ನಿತರ ಸಮಸ್ಯೆಗಳ ಬಗ್ಗೆ ಪಟ್ಟಿ ಮಾಡಿಕೊಂಡು ಸರ್ಕಾರಕ್ಕೆ ಈಗಾಗಲೇ ಕೋಟ್ಯಂತರ ರೂ. ಪ್ರಸ್ತಾವನೆ ಸಲ್ಲಿಸಲಾಗಿದೆ. ಎಲ್ಲಿ ಅವಶ್ಯಕತೆ ಇದೆಯೋ ಅಲ್ಲಿಗೆ ಪ್ರಾಧಾನ್ಯತೆ ಮೇಲೆ ಕೆಲಸ ಮಾಡಿಸಲಾಗುತ್ತಿದೆ. ಈಗ 13 ಕೋಟಿ ರೂ.ವಿವಿಧ ಕಾಮಗಾರಿಗೆ ಅನುದಾನ ಬಿಡುಗಡೆಯಾಗಿದ್ದು, ಶೀಘ್ರದಲ್ಲೇ ಭೂಮಿಪೂಜೆ ಮೂಲಕ ಚಾಲನೆ ನೀಡಲಾಗುವುದು. ಜತೆಗೆ ಕಾವೇರಿ ನೀರಾವರಿ ನಿಗಮದಿಂದ 1 ಕೋಟಿ ರೂ. ಕಾಮಗಾರಿಯಲ್ಲಿ ಸಿದ್ದರಹಳ್ಳಿ ಗ್ರಾಮದಲ್ಲಿ ರಸ್ತೆ ಡಾಂಬರೀಕರಣ ಹಾಗೂ ಚರಂಡಿ ಕಾಮಗಾರಿಗೆ ಚಾಲನೆ ನೀಡಿದ್ದು, ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿಗೆ ಒತ್ತು ನೀಡಬೇಕು. ಬೇಲೂರು ಕ್ಷೇತ್ರದಲ್ಲಿ ಈಗಾಗಲೇ 200 ಕೋಟಿ ರೂ.ಗೂ ಹೆಚ್ಚಿನ ಅನುದಾನದಲ್ಲಿ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ. ಇದರೊಂದಿಗೆ ನೂರಾರು ಕೋಟಿ ರೂ. ಕಾಮಗಾರಿಗೆ ಅನುದಾನ ತರಲು ಸರ್ಕಾರಕ್ಕೆ ಮನವಿ ಮಾಡಿದ್ದೇನೆ ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಲಕ್ಷ್ಮೀ, ಗ್ರಾಮಸ್ಥರಾದ ಸುರೇಶ್, ಹಾಲಪ್ಪಶೆಟ್ಟಿ, ಚಂದ್ರಶೇಖರ್ ಉಮೇಶ್, ರುಕ್ಮಿಣಿ, ವಿಕ್ರಂ ಕೌರಿ, ರಘು, ಶಶಿ, ಕಾವೇರಿ ನೀರಾವರಿ ನಿಗಮದ ಅಧಿಕಾರಿ ರಾಮಕೃಷ್ಣ, ಗ್ರಾಪಂ ಅಭಿವೃದ್ಧಿ ಅಧಿಕಾರಿ ಸರಸ್ವತಿ ಇದ್ದರು.