ಕಂಪ್ಲಿ: ತಾಲೂಕು ಆಡಳಿತದಿಂದ ಕರ್ನಾಟಕ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ತಹಸೀಲ್ದಾರ್ ಜೂಗಲ ಮಂಜುನಾಯಕ ಹೇಳಿದರು.
ತಹಸಿಲ್ ಕಚೇರಿ ಸಭಾಂಗಣದಲ್ಲಿ ಪೂರ್ವಭಾವಿ ಸಭೆಯಲ್ಲಿ ಗುರುವಾರ ಮಾತನಾಡಿದರು. ನ.1ರಂದು ಬೆಳಗ್ಗೆ 8.30ಕ್ಕೆ ತಹಸಿಲ್ ಕಚೇರಿ ಆವರಣದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಲಾಗುವುದು. ಐತಿಹಾಸಿಕ ಸೋಮಪ್ಪ ದೇವಸ್ಥಾನದಿಂದ ಶ್ರೀ ಭುವನೇಶ್ವರಿದೇವಿ ಭಾವಚಿತ್ರ ಮೆರವಣಿಗೆ ಆರಂಭಿಸಲಾಗುವುದು. ಮೆರವಣಿಗೆಯಲ್ಲಿ ಜನಪದ ಕಲಾವಿದರು, ಕನ್ನಡ ಪರ ಸಂಘಟನೆ ಪದಾಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ. ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಕನ್ನಡ ಭಾಷೆಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಲಾಗುವುದು ಎಂದರು.
ಕನ್ನಡಪರ ಸಂಘಟನೆಗಳ ಪ್ರಮುಖರು ಮಾತನಾಡಿ, ಪಟ್ಟಣದಲ್ಲಿ ಕನ್ನಡೇತರ ಭಾಷೆಯ ನಾಮಫಲಕ, ಬ್ಯಾನರ್‌ಗಳ ಅಳವಡಿಕೆಯನ್ನು ನಿರ್ಬಂಧಿಸಬೇಕು. ಸಂಪೂರ್ಣ ಕನ್ನಡ ಭಾಷೆಯ ನಾಮಫಲಕ, ಬ್ಯಾನರ್‌ಗಳನ್ನು ಅಳವಡಿಸಲು ಪುರಸಭೆ, ತಹಸಿಲ್ ಕಚೇರಿಯವರು ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.
ಪ್ರಮುಖರಾದ ಬೂದಗುಂಪಿ ಅಂಬಣ್ಣ, ಅರವಿ ಬಸವನಗೌಡ, ಬುರೆ ವಿರೂಪಾಕ್ಷಿ, ಕರೇಕಲ್ ಮನೋಹರ, ಹಾದಿಮನಿ ಕಾಳಿಂಗವರ್ಧನ, ಬಿ.ಮಂಜುಳಾ, ಹುಲಿಗೆಮ್ಮ, ಕೆ.ಶಬ್ಬೀರ್, ತಾಲೂಕು ಮಟ್ಟದ ಅಧಿಕಾರಿಗಳಿದ್ದರು.