ಜಿಲ್ಲೆ

ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ

ಹನೂರು: ಪಟ್ಟಣದ ಕ್ರಿಸ್ತರಾಜ ವಿದ್ಯಾಸಂಸ್ಥೆಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿ ಸಂಸ್ಥೆಗೆ ಕೀರ್ತಿ ತಂದು ಕೊಟ್ಟ ವಿದ್ಯಾರ್ಥಿಗಳನ್ನು ಶನಿವಾರ ಸನ್ಮಾನಿಸಲಾಯಿತು.

ವಾಣಿಜ್ಯ ವಿಭಾಗದಲ್ಲಿ 575 ಅಂಕವನ್ನು ಗಳಿಸುವುದರ ಜತೆಗೆ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿ ಎಚ್.ಪಿ ಸಾನಿಕಾ, 574 ಅಂಕ ಗಳಿಸಿ ದ್ವಿತೀಯ ಸ್ಥಾನ ಪಡೆದ ಎಸ್.ಪ್ರೀತಮ್ ಹಾಗೂ 569 ಅಂಕವನ್ನು ಗಳಿಸಿ ತಾಲೂಕಿಗೆ ತೃತೀಯ ಸ್ಥಾನ ಪಡೆದ ಲಕ್ಷ್ಮೀ ಸೇರಿದಂತೆ ಅತ್ಯುನ್ನತ ಶ್ರೇಣಿಯಲ್ಲಿ ಪಾಸಾದ ವಿದ್ಯಾರ್ಥಿಗಳ ಜತೆಗೂಡಿದ ಸಂಸ್ಥೆಯ ವ್ಯವಸ್ಥಾಪಕ ಫಾದರ್ ರೋಷನ್ ಹಾಗೂ ಉಪನ್ಯಾಸಕ ವರ್ಗ ಕೇಕ್ ಕತ್ತರಿಸಿ ಸಿಹಿ ತಿನಿಸಿದರು. ಶಾಲು ಹೊದಿಸಿ ಹಾರ ಹಾಕಿ ಸನ್ಮಾನಿಸಿದರು.

ಫಾದರ್ ರೋಷನ್ ಮಾತನಾಡಿ, ವಿದ್ಯಾರ್ಥಿಗಳ ಹಾಗೂ ಉಪನ್ಯಾಸಕರ ಪರಿಶ್ರಮದಿಂದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಾಲೇಜಿಗೆ ಶೇಕಡ 93.65ರಷ್ಟು ಫಲಿತಾಂಶ ದೊರಕಿದ್ದು, ಇದರಲ್ಲಿ 38 ಅತ್ಯುನ್ನತ ಶ್ರೇಣಿ, 117 ಪ್ರಥಮ ಹಾಗೂ 11 ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಪಡೆದು ಕಾಲೇಜಿಗೆ ಕೀರ್ತಿ ತಂದಿರುವುದು ಸಂತಸದ ಸಂಗತಿ. ಉನ್ನತ ಶಿಕ್ಷಣದಲ್ಲೂ ಓದಿಗೆ ಹೆಚ್ಚಿನ ಒತ್ತು ನೀಡಿ ಸಾಧನೆ ಮಾಡಬೇಕು. ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.