ಜಿಲ್ಲೆ

ಹೆಚ್ಚಿನ ಅನುದಾನ ತಂದು ಕ್ಷೇತ್ರ ಅಭಿವೃದ್ಧಿಗೊಳಿಸಲು: ಮಾಜಿ ಶಾಸಕ ಪ್ರೀತಂ ಜೆ ಗೌಡ

ಹಾಸನ: ಕ್ಷೇತ್ರದ ಜನರ ಹಿತದೃಷ್ಟಿಯಿಂದ ನೂತನವಾಗಿ ಆಯ್ಕೆಯಾಗಿರುವ ಶಾಸಕರು ಸರ್ಕಾರದಿಂದ ಹೆಚ್ಚಿನ ಅನುದಾನವನ್ನು ತಂದು ಕ್ಷೇತ್ರದ ಅಭಿವೃದ್ಧಿ ಮಾಡುವ ಕೌಶಲತೆ ಬೆಳೆಸಿಕೊಳ್ಳಲಿ ಎಂದು ಮಾಜಿ ಶಾಸಕ ಪ್ರೀತಂ ಗೌಡ ಶಾಸಕ ಸ್ವರೂಪ್ ಅವರಿಗೆ ಸಲಹೆ ನೀಡಿದರು.

ಚುನಾವಣೆ ಮುಗಿದು ಮೂರು ತಿಂಗಳು ಕಳೆದಿವೆ. ಹನಿಮೂನ್ ಸಮಯ ಮುಕ್ತಾಯವಾಗಿದೆ. ಇನ್ನೂ ಮೂರು ತಿಂಗಳ ಕಾಲಾವಕಾಶ ನೀಡೋಣ. ಅಷ್ಟರೊಳಗೆ ನಗರದಲ್ಲಿ ಇರುವಂತಹ ಹಲವು ಸಮಸ್ಯೆಗಳ ಬಗ್ಗೆ ಗಂಭೀರವಾಗಿ ಚಿಂತಿಸಿ ಸರ್ಕಾರದೊಂದಿಗೆ ಸಮನ್ವಯ ಸಾಧಿಸಿ ಹೆಚ್ಚಿನ ಅನುದಾನ ತಂದು ಕ್ಷೇತ್ರವನ್ನು ಅಭಿವೃದ್ಧಿಪಡಿಸಲಿ ಎಂದು ಕ್ಷೇತ್ರದ ಜನರ ಪರವಾಗಿ ಮನವಿ ಮಾಡುತ್ತೇನೆ ಎಂದು ಸೋಮವಾರ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ನಗರಸಭೆಗೆ ಸೇರ್ಪಡೆಯಾಗಿರುವ 25 ಗ್ರಾಮಗಳ ಹಲವು ಸಮಸ್ಯೆಗಳನ್ನು ಪರಿಹರಿಸುವಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ನೂತನ ಶಾಸಕರು ವಿಫಲರಾಗಿದ್ದಾರೆ. ತಕ್ಷಣವೇ ಅವರು ಇದರ ಬಗ್ಗೆ ಗಮನಹರಿಸಬೇಕು. ಅದನ್ನು ಬಿಟ್ಟು ವಿನಾಃಕಾರಣ ಆರೋಪ ಮಾಡುತ್ತಾ ಸಮಯಹರಣ ಮಾಡಬಾರದು. ನಮ್ಮ ಸರ್ಕಾರ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ನಾನು ಶಾಸಕನಾಗಿದ್ದಾಗ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿದ್ದೇನೆ. ಅವರು ಈಗ ನನಗಿಂತ 10 ಹೆಜ್ಜೆ ಮುಂದೆ ಹೋಗಿ ಕೆಲಸ ಮಾಡಲಿ ಎಂದರು.

ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿದರೂ ಕೂಡ ಜನರು ನಾನು ಐದು ವರ್ಷ ರೆಸ್ಟ್ ತೆಗೆದುಕೊಳ್ಳಲಿ ಎಂದು ತಿರಸ್ಕಾರ ಮಾಡಿದರು. ಈಗ ನೂತನವಾಗಿ ಆಯ್ಕೆಯಾಗಿರುವ ಶಾಸಕರಿಗೆ ಅಧಿಕಾರ ನೀಡಿದ್ದಾರೆ. ಅವರು ಜನರ ಮತ್ತು ಕ್ಷೇತ್ರದ ಕೆಲಸ ಮಾಡಲಿ. ರಾಜಕೀಯದ ಕುಟುಂಬದ ಹಿನ್ನೆಲೆ ಇರುವ ಅವರಿಗೆ ಹೆಚ್ಚು ಕೆಲಸ ಮಾಡುವ ಶಕ್ತಿ ಇದೆ. ಆ ನಂಬಿಕೆ ನನಗೆ ಇದೆ. ಅದಕ್ಕೆ ನಮ್ಮ ಸಂಪೂರ್ಣ ಸಹಕಾರವಿರುತ್ತದೆ ಎಂದು ಹೇಳಿದರು.

ಲೋಕಸಭೆಗೆ ಸ್ಪರ್ಧಿಸಲ್ಲ

ಜಿಲ್ಲೆಯಲ್ಲಿ ಬಿಜೆಪಿ ಸದೃಢವಾದೆ. ಮುಂಬರುವ ಲೋಕಸಭಾ ಚುನಾವಣೆಗೆ ಇನ್ನೂ ಹೆಚ್ಚಿನ ರೀತಿಯಲ್ಲಿ ಪಕ್ಷ ಸಂಘಟನೆ ಮಾಡಲಾಗುತ್ತಿದೆ. ನಾನು ಯಾವುದೇ ಕಾರಣಕ್ಕೂ ಹಾಸನ ವಿಧಾನಸಭಾ ಕ್ಷೇತ್ರ ಬಿಟ್ಟು ಲೋಕಸಭೆಗೆ ಹೋಗುವುದಿಲ್ಲ. ನನ್ನ ಮುಂದಿನ ಗುರಿ 2028ರ ವಿಧಾನಸಭಾ ಚುನಾವಣೆ ಮಾತ್ರ. ಈಗಾಗಲೇ ಲೋಕಸಭೆಗೆ ಹಲವು ಆಕಾಂಕ್ಷಿಗಳಿದ್ದು ಅವರಲ್ಲಿ ಮಾಜಿ ಶಾಸಕ ಎ.ಟಿ. ರಾಮಸ್ವಾಮಿ, ಪಕ್ಷದ ಮುಖಂಡರಾದ ಸಿದ್ದೇಶ್ ನಾಗೇಂದ್ರ, ಕೃಷ್ಣ ಗ್ರೂಪ್ ಮಾಲೀಕ ಕಿರಣ್ ಹಾಗೂ ಸಂತೋಷ್ ಕೆಂಚಾಂಬ ಇದ್ದಾರೆ, ಇನ್ನೂ ಹಲವರಿದ್ದು ಪಕ್ಷ ಯಾರಿಗೆ ಟಿಕೆಟ್ ನೀಡಿದರೂ ಕೂಡ ಗೆಲ್ಲುವ ವಿಶ್ವಾಸವಿದೆ ಎಂದು ಹೇಳಿದರು.

ಜೆಡಿಎಸ್ ಮೈತ್ರಿಯಾದರೂ ಬಿಜೆಪಿಗೆ ಟಿಕೆಟ್

ಬಿಜೆಪಿ- ಜೆಡಿಎಸ್ ಮೈತ್ರಿ ವಿಷಯವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಪ್ರೀತಂ ಅವರು, ಮೈತ್ರಿ ವಿಷಯವಾಗಿ ವರಿಷ್ಠರು ತೀರ್ಮಾನ ತೆಗೆದುಕೊಳ್ಳುತ್ತಾರೆ. ಬಿಜೆಪಿ ಅತೀ ದೊಡ್ಡ ಪಕ್ಷ. ಜೆಡಿಎಸ್‌ಗೆ ಬಿಜೆಪಿಯ ಅಗತ್ಯವಿದೆ. ಹಾಗೆನಾದರೂ ಮೈತ್ರಿಯಾದರೆ ಹಾಸನದಲ್ಲಿ ಬಿಜೆಪಿ ಅಭ್ಯರ್ಥಿ ಪರ ಜೆಡಿಎಸ್ ಕೆಲಸ ಮಾಡಲಿದೆ ಎಂದು ಹೇಳುವ ಮೂಲಕ ಹಾಸನದಲ್ಲಿ ಜೆಡಿಎಸ್‌ಗೆ ಟಿಕೆಟ್ ನೀಡುವುದಿಲ್ಲ ಎಂದು ಪರೋಕ್ಷವಾಗಿ ಹೇಳಿದರು.

ಕಸ ಸಂಗ್ರಹ ನಿಲ್ಲಿಸಿದ್ದೇನೆ

2014 ರಿಂದ ನಗರದಲ್ಲಿ ಕಸ ಸಂಗ್ರಹವನ್ನು ಮಾಡಿಕೊಂಡು ಬಂದಿದ್ದೇನೆ. ಆದರೆ ನೂತನ ಶಾಸಕರು ಮತ್ತು ಅವರ ಬೆಂಬಲಿಗರು ನಮ್ಮ ತಂಡ ಕಸ ಸಂಗ್ರಹ ಮಾಡದಂತೆ ತಡೆ ಹಿಡಿಯುತ್ತಿದ್ದರು. ಆದ್ದರಿಂದ ಕಸ ಸಂಗ್ರಹವನ್ನ ನಿಲ್ಲಿಸಿದ್ದೇನೆ. ಶಾಸಕರೇ ಸಂಪೂರ್ಣವಾಗಿ ನಗರದ ಎಲ್ಲಾ ವಾರ್ಡ್‌ಗಳು ಮತ್ತು ಇತ್ತೀಚಿಗೆ ಸೇರ್ಪಡೆಯಾಗಿರುವ ಗ್ರಾಮಗಳಲ್ಲಿ ಕೂಡ ಕಸ ಸಂಗ್ರಹಣೆ ಮಾಡುವ ನಿರ್ಧಾರ ಕೈಗೊಂಡಿದ್ದಾರೆ. ಅವರಿಗೆ ಅಭಿನಂದನೆಗಳು ಎಂದು ಪ್ರೀತಂ ಗೌಡ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ನಗರಸಭೆ ಅಧ್ಯಕ್ಷ ಮೋಹನ್, ನಗರದ ಪ್ರಾಧಿಕಾರದ ಮಾಜಿ ಅಧ್ಯಕ್ಷ ಲಲಾಟ ಮೂರ್ತಿ, ಬಿಜೆಪಿ ನಗರ ಮಂಡಲದ ಅಧ್ಯಕ್ಷ ವೇಣುಗೋಪಾಲ್ ಉಪಸ್ಥಿತರಿದ್ದರು.