ವಿಜಯವಾಣಿ ಸುದ್ದಿಜಾಲ ಶಿರಸಿ: ಒಂದೆಡೆ ನಗರದ ಬೀದಿಗಳು ಬಿಕೋ ಎನ್ನುತ್ತಿದ್ದರೆ ಇನ್ನೊಂದೆಡೆ ಶಿರಸಿ ಪ್ರತ್ಯೇಕ ಜಿಲ್ಲೆಯ ಕಾವು ಹೆಚ್ಚಿತ್ತು. ಹೋರಾಟ ಸಮಿತಿ ಕರೆ ನೀಡಿದ್ದ ಶಿರಸಿ ಬಂದ್ ಹೊಸ ಇತಿಹಾಸ ಸೃಷ್ಟಿಸಿತ್ತು.
ಬುಧವಾರ ಶಿರಸಿ ಪ್ರತ್ಯೇಕ ಜಿಲ್ಲೆಗೆ ಆಗ್ರಹಿಸಿ ಸಾವಿರಾರು ಜನರು ಬೀದಿಗೆ ಬಂದು ಹೋರಾಟ ನಡೆಸಿದರು. ಪ್ರಸಕ್ತ ಸಾಲಿನ ಬಜೆಟ್ನಲ್ಲಿ ಬೇಡಿಕೆ ಈಡೇರದಿದ್ದರೆ ಉಗ್ರ ಸ್ವರೂಪದ ಹೋರಾಟ ಎದುರಿಸಲು ಸರ್ಕಾರ ಸಿದ್ಧವಾಗುವಂತೆ ಎಚ್ಚರಿಕೆ ಕೂಡ ನೀಡಿದರು. ಬಂದ್ ಕರೆಗೆ ನಗರದ ಅಂಗಡಿಕಾರರು, ಹೋಟೆಲ್, ಉದ್ಯಮಿಗಳು, ಮಾರುಕಟ್ಟೆ, ಸಹಕಾರಿ ಸಂಸ್ಥೆಗಳ ಮಾಲೀಕರು ಬೆಂಬಲ ಸೂಚಿಸಿ ಸ್ವಯಂ ಪ್ರೇರಿತವಾಗಿ ಮಳಿಗೆಗಳಿಗೆ ಬಾಗಿಲು ಹಾಕಿದ್ದರು. ಸಾವಿರಕ್ಕೂ ಹೆಚ್ಚು ಜನರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಸಾಥ್ ನೀಡಿದವರು: ತಾಲೂಕು ಸಿವಿಲ್ ಗುತ್ತಿಗೆದಾರರ ಸಂಘ, ಆಟೊ, ಟೆಂಪೋ, ಲಾರಿ ಚಾಲಕ-ಮಾಲೀಕರ ಸಂಘ, ಲಯನ್ಸ್, ಕರವೇ, ಸವಿತಾ ಸಮಾಜ, ಮಾರುಕಟ್ಟೆ ವ್ಯಾಪಾರಸ್ಥರ ಸಂಘ, ಹೋಟೆಲ್ ಮಾಲೀಕರ ಸಂಘ, ಮೀನು, ಮಾಂಸ ಮಾರಾಟಗಾರರ ಸಂಘ, ಬಾರ್ ಬೆಂಡಿಂಗ್ ಅಸೋಸಿಯೇಶನ್ ಸೇರಿ 50ಕ್ಕೂ ಹೆಚ್ಚು ಸಂಘಟನೆಗಳ ಸದಸ್ಯರು ಬಂದ್ಗೆ ಬೆಂಬಲ ಸೂಚಿಸಿದರು.
ಮನವಿ ಸಲ್ಲಿಕೆ: ನಗರದ ಹಳೇ ಬಸ್ ನಿಲ್ದಾಣ ವೃತ್ತದಿಂದ ಆರಂಭ ಕಂಡ ಪ್ರತಿಭಟನಾ ಮೆರವಣಿಗೆ ಡೊಳ್ಳು, ನಗಾರಿ ಸದ್ದುಗಳ ನಡುವೆ ಮಾರಿಕಾಂಬಾ ದೇವಾಲಯ ತಲುಪಿತು. ಅಲ್ಲಿ ದೇವಿಗೆ ಪೂಜೆ ಸಲ್ಲಿಸಿ ನಂತರ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಉಪವಿಭಾಗಾಧಿಕಾರಿ ಕಚೇರಿ ತಲುಪಿತು. ಸಾವಿರಾರು ಪ್ರತಿಭಟನಾನಿರತರು ಉಪವಿಭಾಗಾಧಿಕಾರಿ ಆಕೃತಿ ಬನ್ಸಾಲ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿ, ಪ್ರತ್ಯೇಕ ಜಿಲ್ಲೆಗಾಗಿ ಹಕ್ಕೊತ್ತಾಯ ಮಾಡಿದರು. ಈ ವೇಳೆ ಸಮಿತಿ ಪ್ರಮುಖರಾದ ಉಪೇಂದ್ರ ಪೈ, ಎಂ.ಎಂ.ಭಟ್ಟ, ನಂದಕುಮಾರ ಜೋಗಳೇಕರ, ರಘು ಕಾನಡೆ, ಪರಮಾನಂದ ಹೆಗಡೆ, ಅರ್ಚನ ಶಿರಾಲಿ, ಈಶ್ವರ ನಾಯ್ಕ, ವೆಂಕಟೇಶ ನಾಯ್ಕ, ಮಂಜು ಮೊಗೇರ, ಅಶೋಕ ಭಟ್ಟ, ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ಉಪಾಧ್ಯಕ್ಷೆ ವೀಣಾ ಶೆಟ್ಟಿ, ಸದಸ್ಯ ಮಧುಕರ ಬಿಲ್ಲವ, ಖಾದರ್ ಆನವಟ್ಟಿ, ಎಸ್.ಎನ್.ನಾಯ್ಕ, ಚಂದ್ರ ದೇವಾಡಿಗ, ಶಿವಾಜಿ ಬನವಾಸಿ, ಉದಯಕುಮಾರ ಕಾನಳ್ಳಿ ಹಾಗೂ ಇತತರು ಇದ್ದರು.
ಪರದಾಟ: ಹೊರ ಊರುಗಳಿಂದ ನಗರಕ್ಕೆ ಆಗಮಿಸಿದ್ದ ಕೆಲ ಜನರು ತಿಂಡಿ, ನೀರು ಇಲ್ಲದೆ ಪರದಾಡಿದರು. ಹಳೇ ಬಸ್ ನಿಲ್ದಾಣ ವೃತ್ತದಲ್ಲಿ ಪ್ರತಿಭಟನೆ ನಡೆದ ಕಾರಣ ಬಸ್ ಸಂಚಾರ ಸ್ಥಗಿತ ಮಾಡಲಾಗಿತ್ತು. ಹೀಗಾಗಿ ಪ್ರಯಾಣಿಕರು ಕೆಲಕಾಲ ಪರದಾಡಿದರು.
ಪ್ರತ್ಯೇಕ ಜಿಲ್ಲೆಯ ಹೋರಾಟಕ್ಕೆ ಘಟ್ಟದ ಮೇಲಿನ ಎಲ್ಲ ಜನಪ್ರತಿನಿಧಿಗಳು, ಧಾರ್ವಿುಕ ಮುಖಂಡರು ಹಾಗೂ ಸಂಘ ಸಂಸ್ಥೆಗಳ ಸಹಕಾರ ಕೋರಲಾಗಿದೆ. ಪ್ರಸಕ್ತ ಬಜೆಟ್ನಲ್ಲಿ ಶಿರಸಿ ಜಿಲ್ಲೆಯನ್ನಾಗಿ ಘೊಷಣೆ ಮಾಡದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು. | ಉಪೇಂದ್ರ ಪೈ ಶಿರಸಿ ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ