ಜಿಲ್ಲೆ

ಹೆಚ್ಚಿದ ಬೀದಿನಾಯಿ ಹಾವಳಿ

 ಕ್ರಮವಹಿಸದ ಚಿ.ನಾ.ಹಳ್ಳಿ ಪುರಸಭೆ, ಕ್ಯಾರೆ ಎನ್ನದ ಜನಪ್ರತಿನಿಧಿಗಳು

ಚಿಕ್ಕನಾಯಕನಹಳ್ಳಿ: -ಪಟ್ಟಣದಲ್ಲಿ ಬೀದಿನಾಯಿಗಳ ಹಾವಳಿಯಿಂದಾಗಿ ವೃದ್ಧರು,ಮಕ್ಕಳು, ನಾಗರಿಕರು ಭಯದ ವಾತಾ ವರಣದಲ್ಲಿ ಬದುಕುವಂತಾಗಿದೆ.

ಪಟ್ಟಣದ ಎಲ್ಲ 23ವಾರ್ಡ್​ಗಳಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದೆ. ಶುಕ್ರವಾರ ಒಂದೇ ದಿನ ಸುಮಾರು ಐದಾರು ಮಂದಿಗೆ ಹಾಗೂ ಒಂದು ಮಗುವಿಗೆ ಕಚ್ಚಿ ಗಾಯಗೊಳಿಸಿವೆ. ಇದೇ ರೀತಿ ದಿನ ಬೆಳಗಾದರೂ ನಾಯಿ ದಾಳಿಗಳು ವರದಿಯಾಗುತ್ತಲೇ ಇವೆ. ಈ ಬಗ್ಗೆ ಸಾರ್ವಜನಿಕರು ಪುರಸಭೆಗೆ ಮನವಿ

ಮಾಡಿದರೂ ಈವರೆಗೆ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಪಟ್ಟಣವಾಸಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಪಟ್ಟಣದಲ್ಲಿ ಸುಮಾರು 400ಕ್ಕೂ ಹೆಚ್ಚು ಬೀದಿನಾಯಿಗಳಿದ್ದು, ನಾಗರಿಕರ ಮೇಲೆ ಪದೇಪದೆ ದಾಳಿಮಾಡುತ್ತಿವೆ. ಸಣ್ಣ ಮಕ್ಕಳನ್ನು ಮನೆಯಿಂದ ಹೊರಗೆ ಬಿಡುವುದೇ ಕಷ್ಟವಾಗಿದೆ. ನಾಯಿಗಳ ಹಾವಳಿಗೆ ಕಡಿವಾಣ ಹಾಕುವುದಿರಲಿ ಕನಿಷ್ಠ ಪಕ್ಷ ದಾಳಿಗೊಳಗಾದವರಿಗೆ ಸಾಂತ್ವನ ಹೇಳಲೂ ಪುರಸಭೆ ರ್ನಿಲಕ್ಷ$್ಯ ತೋರುತ್ತಿದೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ. ಖಾಸಗಿ ಬಸ್​ನಿಲ್ದಾಣದ ಹಿಂಭಾಗದಲ್ಲಿ ಕೋಳಿ ಅಂಗಡಿಗಳಿದ್ದು, ಅಲ್ಲಿನ ತ್ಯಾಜ್ಯದ ಸವಿ ಕಂಡ ನಾಯಿಗಳು ಪಟ್ಟಣದ ಜನಸಂದಣಿ ಇರುವಂತಹ ಪ್ರದೇಶಗಳಲ್ಲಿ ಜನರ ಮೇಲೆ ನೇರವಾಗಿ ದಾಳಿ ಮಾಡುತ್ತಿವೆ ಎಂಬ ಆರೋಪ ಕೇಳಿ ಬರುತ್ತಿದೆ.

2 ವರ್ಷದ ಮಗು ಮೇಲೆ ದಾಳಿ: ತುಮಕೂರು: ತಾಲೂಕಿನ ಹೆಗ್ಗೆರೆ ಗ್ರಾಮದಲ್ಲಿ ಮನೆಯ ಮುಂದೆ ಆಟವಾಡುತ್ತಿದ್ದ ಎರಡು ವರ್ಷದ ಹನಿಜಾ ಖಾನಂ ಹೆಣ್ಣು ಮಗುವಿನ ಮೇಲೆ ಬೀದಿ ನಾಯಿ ದಾಳಿ ಮಾಡಿದ್ದು, ಮಗುವಿನ ಕಣ್ಣು, ತಲೆ ಭಾಗಕ್ಕೆ ನಾಯಿ ಕಚ್ಚಿದೆ. ಮಗುವಿನ ಎಡಗಣ್ಣಿಗೆ ಗಂಭೀರ ಗಾಯವಾಗಿದೆ. ತಕ್ಷಣ ಮಗುವನ್ನು ಸ್ಥಳಿಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.

ನಾಯಿಗಳನ್ನು ಈ ಹಿಂದೆ ಹಿಡಿದು ಸಾಯಿಸಲಾಗುತ್ತಿತ್ತು. ಆದರೆ, ನ್ಯಾಯಾಲಯದ ಆದೇಶದಂತೆ ಅವುಗಳನ್ನು ಕೊಲ್ಲುವಂತಿಲ್ಲ. ಆದರೆ, ಅವುಗಳ ಸಂತತಿ ಹೆಚ್ಚಾಗದಂತೆ ಸಂತಾನಶಕ್ತಿ ಹರಣ ಚಿಕಿತ್ಸೆ ನೀಡಲು ಆದೇಶವಿದೆ. ಅದರಂತೆ ಈ ಕಾರ್ಯಕ್ಕೆ ಈಗಾಗಲೇ ಎರಡು ಬಾರಿ ಟೆಂಡರ್​ ಕರೆದಿದ್ದು, ಇದುವರೆಗೆ ಯಾವುದೇ ಗುತ್ತಿಗೆದಾರರು ಟೆಂಡರ್​ ಹಾಕಿಲ್ಲ. ಮತ್ತೊಮ್ಮೆ ಟೆಂಡರ್​ ಕರೆದು ಮುಂದಿನ ಕ್ರಮಕೈಗೊಳ್ಳಲಾಗುವುದು.

| ಮಂಜುಳಮ್ಮ ಮುಖ್ಯಾಧಿಕಾರಿ ಪುರಸಭೆ

ನಾಯಿಗಳ ಹಾವಳಿಗೆ ಕಡಿವಾಣ ಹಾಕುವಂತೆ ಅನೇಕಬಾರಿ ಪುರಸಭೆ ಹಾಗೂ ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ದೇವೆ. ಆದರೂ, ಯಾವುದೇ ಪ್ರಯೋಜನವಾಗಿಲ್ಲ. ಇನ್ನಾದರು ಇಂತಹ ದುರ್ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಬೇಕು.

| ಕೆ.ಜಿ.ಕೃಷ್ಣೇಗೌಡ ಆರೋಗ್ಯ ಸಮಿತಿ ಸದಸ್ಯ, ಸಾರ್ವಜನಿಕ ಆಸ್ಪತ್ರೆ