ಸಿರಗುರ ಗ್ರಾಮ ಸಮೀಪದ ತೋಟವೊಂದರಲ್ಲಿ ಕಾಡಾನೆಗಳು ಬಿಡು ಬಿಟ್ಟಿರುವುದು. 
ಜಿಲ್ಲೆ

ಹೆಚ್ಚಿದ ಕಾಡಾನೆಗಳ ಉಪಟಳ

ಬೇಲೂರು: ಮಲೆನಾಡು ಭಾಗದ ಸಿರಗುರ, ನೇರಲಮಕ್ಕಿ, ಕುಂಬಾರಹಳ್ಳಿ ಸೇರಿದಂತೆ ಅಕ್ಕಪಕ್ಕದ ಗ್ರಾಮಗಳ ರೈತರು, ಕಾಫಿ ಬೆಳೆಗಾರರು, ಕೂಲಿ ಕಾರ್ಮಿಕರು ನಿತ್ಯ ಕಾಡಾನೆಗಳ ಉಪಟಳದಿಂದ ಬೇಸತ್ತಿದ್ದು, ನರಕಯಾತನೆ ಅನುಭವಿಸುವಂತಾಗಿದೆ.

ತಾಲೂಕಿನ ಅರೇಹಳ್ಳಿ ಹೋಬಳಿಯ ಶಿರಗುರ ಸೇರಿದಂತೆ ಸಾಕಷ್ಟು ಗ್ರಾಮಗಳಲ್ಲಿ ಮೂರು ವರ್ಷಗಳಿಂದ ಕಾಡಾನೆಗಳ ಹಾವಳಿ ಮಿತಿ ಮೀರಿದೆ. ಕೆಲ ತಿಂಗಳು ಕಣ್ಮರೆಯಾಗಿದ್ದ ಕಾಡಾನೆಗಳು, ಎರಡು ಮೂರು ತಿಂಗಳಿಂದ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಬೀಡು ಬಿಟ್ಟಿವೆ.

ಗ್ರಾಮಗಳ ಆಸುಪಾಸಿನ ಮನೆಗಳ ಸಮೀಪದಲ್ಲೇ ವಾಸ್ತವ್ಯ ಹೂಡಿದ್ದು, ಇದರಿಂದಾಗಿ ಈ ಭಾಗದ ಸಣ್ಣಪುಟ್ಟ ರೈತರು, ಬೆಳೆಗಾರರು ಮತ್ತು ಕೂಲಿಕಾರ್ಮಿಕರು ನಷ್ಟ ಅನುಭವಿಸುವಂತಾಗಿದೆ. ಅಲ್ಲದೆ ಎಲ್ಲಿ, ಯಾವ ಸಂದರ್ಭದಲ್ಲಿ ಆನೆಗಳು ದಾಳಿ ಮಾಡುತ್ತವೆಯೋ ಎಂಬ ಜೀವಭಯದಲ್ಲೇ ಜೀವನ ನಡೆಸುವಂತಾಗಿದೆ. ಜಮೀನು ಮತ್ತು ತೋಟಗಳಲ್ಲಿ ಕಾಫಿ, ಅಡಕೆ, ಮೆಣಸು ಸೇರಿದಂತೆ ಇತರ ಬೆಳೆ ನಾಶವಾಗುತ್ತಿರುವುದು ಒಂದೆಡೆಯಾದರೆ, ಮತ್ತೊಂದೆಡೆ ಕಾಡಾನೆಗಳ ಹಾವಳಿಯಿಂದ ಕೂಲಿಕಾರ್ಮಿಕರು ಕೆಲಸಕ್ಕೆ ಹೋಗದ ಹಿನ್ನೆಲೆಯಲ್ಲಿ ಸಾಕಷ್ಟು ನಷ್ಟ ಉಂಟಾಗುತ್ತಿದೆ.

ಸಿರಗುರ ಗ್ರಾಮದ ಅಕ್ಕಪಕ್ಕದ ಕಾಫಿ ತೋಟದಲ್ಲಿ ಆನೆಗಳ ಹಾವಳಿಗೆ ಕಾಫಿ, ಅಡಕೆ ಸೇರಿದಂತೆ ಇತರ ಗಿಡಗಳು ಮುರಿದು ಬಿದ್ದಿವೆ. ಇದರೊಂದಿಗೆ ತೋಟಗಳ ಸಮೀಪವಿರುವ ಮನೆಗಳ ಬಳಿಯೇ ಕೆಲ ದಿನಗಳಿಂದ 7ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ಬೀಡು ಬಿಟ್ಟಿದೆ. ಪರಿಣಾಮ ಓಡಾಡಲು ಭಯಪಡುವ ಸ್ಥಿತಿ ನಿರ್ಮಾಣವಾಗಿದೆ.

ಶುಭಕಾರ್ಯ, ಹಬ್ಬ ಹರಿದಿನಗಳಿಗೂ ಸಂಬಂಧಿಕರು, ಸ್ನೇಹಿತರು ಬಾರದಂತಾಗಿದೆ ಎಂಬ ಕೊರಗು ಗ್ರಾಮಸ್ಥರನ್ನು ಕಾಡುತ್ತಿದೆ. ಇದೆಲ್ಲದರ ನಡುವೆ ಕಾಡಾನೆಯೊಂದು ಒಂಟಿಯಾಗಿ ಹಗಲು-ರಾತ್ರಿ ಎನ್ನದೆ ಎಲ್ಲೆಂದರಲ್ಲಿ ಓಡಾಡುತ್ತಿದ್ದು, ಗ್ರಾಮಸ್ಥರಲ್ಲಿ ಆತಂಕ ಹೆಚ್ಚಿಸಿದೆ. ಜನರನ್ನು ಕಂಡರೆ ಸಾಕು ಆನೆ ಕಿವಿ ನಿಮಿರಿಸಿಕೊಂಡು ಜನರತ್ತ ಧಾವಿಸುತ್ತದೆ. ಕತ್ತಲಾದ ಸಮಯದಲ್ಲಿ ಮನೆಗಳ ಕಿಟಕಿ ತೆಗೆದು ದವಸ ಧಾನ್ಯಗಳನ್ನು ತಿನ್ನುತ್ತಿವೆ.

ಈ ಸಂಬಂಧ ಗ್ರಾಮಸ್ಥರು, ವಿವಿಧ ಸಂಘ ಸಂಸ್ಥೆಗಳಿಂದ ಸರ್ಕಾರ ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂಬ ಕೊರಗು ಬೆಳೆಗಾರರು ಮತ್ತು ಕಾರ್ಮಿಕರನ್ನು ಕಾಡುತ್ತಿದೆ. ಈ ಎಲ್ಲ ಬೆಳವಣಿಗೆಗಳಿಂದ ಬೇಸತ್ತ ಗ್ರಾಮಸ್ಥರು, ಕಾಡಾನೆಗಳಿಂದ ನಮಗೆ ಶಾಶ್ವತ ಮುಕ್ತಿ ನೀಡಬೇಕು ಅಥವಾ ನಮ್ಮ ಜಮೀನು, ಮನೆಗಳನ್ನು ಸರ್ಕಾರವೇ ವಶಕ್ಕೆ ಪಡೆದು, ಪರಿಹಾರ ನೀಡಿ ಎಲ್ಲರಿಗೂ ಬೇರೆಡೆ ಬದುಕಲು ಅವಕಾಶ ಮಾಡಿಕೊಡಲಿ ಎಂದು ಒತ್ತಾಯಿಸುತ್ತಿದ್ದಾರೆ.

ನಮ್ಮ ಗ್ರಾಮದಲ್ಲಿ ಎರಡು-ಮೂರು ವರ್ಷಗಳಿಂದ ಕಾಡಾನೆಗಳು ಬೀಡು ಬಿಡುತ್ತಲೇ ಇವೆ. ಅರಣ್ಯ ಇಲಾಖೆಯವರು ಬಂದು ಕೆಲ ಆನೆಗಳನ್ನು ಬೇರೆಡೆಗೆ ಓಡಿಸುತ್ತಾರೆ. ಅವುಗಳು ಹೋಗಿ ಒಂದೇ ದಿನಕ್ಕೆ ವಾಪಸ್ ಬಂದು ಇಲ್ಲೇ ವಾಸ್ತವ್ಯ ಹೂಡುತ್ತಿವೆ. ಇದಿರಿಂದಾಗಿ ನಾವು ಜೀವ ಭಯದಲ್ಲೇ ಬದುಕು ಸಾಗಿಸುವಂತಾಗಿದೆ. ನಮಗೆ ಕಾಡಾನೆಗಳಿಂದ ಶಾಶ್ವತ ಪರಿಹಾರ ನೀಡಬೇಕು ಅಥವಾ ನಮ್ಮ ಜಮೀನು-ಮನೆಗಳನ್ನು ಸರ್ಕಾರವೇ ವಶಕ್ಕೆ ಪಡೆದು ಪರಿಹಾರ ನೀಡಬೇಕು. ಇಲ್ಲವಾದಲ್ಲಿ ಇಲ್ಲಿಂದ ಬೇರೆಡೆಗೆ ತೆರಳುವುದಕ್ಕೆ ಅವಕಾಶ ಕಲ್ಪಿಸಲಿ.
ಸಿದ್ದೇಶ್, ಸಿರುಗುರ ಗ್ರಾಮಸ್ಥ ಬೇಲೂರು ತಾಲೂಕು

ನಮ್ಮ ಗ್ರಾಮದ ಆಸುಪಾಸಿನಲ್ಲೇ ಏಳಕ್ಕೂ ಹೆಚ್ಚು ಕಾಡಾನೆಗಳಿದ್ದು, ಅದರಲ್ಲಿ ಒಂದು ಆನೆ ಮಾತ್ರ ರಸ್ತೆಗಿಳಿದು ದಾಂಧಲೆ ಮಾಡುತ್ತಿದೆ. ದಿಢೀರೆಂದು ರಸ್ತೆಗೆ ಧಾವಿಸುವ ಆನೆಯಿಂದಾಗಿ ಸಾಕಷ್ಟು ಜನರು ಬಿದ್ದು ಎದ್ದು ಓಡಿ ಹೋಗಿ ಗಾಯಗೊಂಡಿದ್ದಾರೆ. ವಾಹನಗಳು ಬಂದರೆ ಏನು ಮಾಡುತ್ತದೆಯೋ ಎಂಬ ಭಯದಲ್ಲಿ ನಾವು ಹಿಂದಕ್ಕೆ ಸರಿದು, ಅದು ಹೋದ ನಂತರ ಊರಿಗೆ ಹೋಗುವಂತಾಗಿದೆ. ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ತಕ್ಷಣವೇ ಕಾಡಾನೆಗಳನ್ನು ಶಾಶ್ವತವಾಗಿ ಕಾಡಿಗಟ್ಟುವ ಕೆಲಸ ಮಾಡಬೇಕಿದೆ.
ಶರತ್, ಸಿರಗುರ

ಸಿರಗುರ ಗ್ರಾಮದ ಆಸುಪಾಸಿನಲ್ಲಿ ಬಾಳೆ, ಬೈನೆ ಮರಗಳಿರುವುದರಿಂದ ಇಲ್ಲಿಂದ ಓಡಿಸಿದ್ದ ಆನೆಗಳು ಮತ್ತೆ ವಾಪಸ್ ಇಲ್ಲಿಗೆ ಬರುತ್ತಿವೆ. ನಮ್ಮ ಸಿಬ್ಬಂದಿ ಸಾಧ್ಯವಾದಷ್ಟು ಕಾಡಾನೆಗಳನ್ನು ಓಡಿಸುತ್ತಲೇ ಇದ್ದರೂ ಅವು ಮತ್ತೆ ಬರುತ್ತಿವೆ. ಇಲ್ಲಿನ ಏಳು ಕಾಡಾನೆಗಳ ಜತೆಗೆ ಮೂಡಿಗೆರೆ ಕಡೆಯಿಂದ ಮತ್ತೆರಡು ಆನೆಗಳು ಬಂದಿದ್ದು, ಇದರಲ್ಲಿ ಒಂದು ಆನೆ ಸಾರ್ವಜನಿಕರಿಗೆ ಉಪಟಳ ನೀಡುತ್ತಿರುವ ಬಗ್ಗೆ ತಿಳಿದಿದೆ. ಆದಷ್ಟು ಬೇಗ ಇವುಗಳನ್ನು ಕಾಡಿಗಟ್ಟುವ ಕೆಲಸ ಮಾಡಲಿದ್ದೇವೆ.
ವಿನಯ್ ಕುಮಾರ್, ವಲಯ ಅರಣ್ಯಾಧಿಕಾರಿ ಬೇಲೂರು