ಜಿಲ್ಲೆ

ಹೆಚ್ಚಾಯ್ತು ಕರೊನಾ ಎರಡನೇ ಅಲೆ, ಸಾರ್ವಜನಿಕ ಆಸ್ಪತ್ರೆ, ಇಸ್ತೂರು ಕೋವಿಡ್ ಆಸ್ಪತ್ರೆ ಭರ್ತಿ ತಾಲೂಕು ಆಡಳಿತದಿಂದ ಸಮರೋಪಾದಿ ಕೆಲಸ

ವೆಂಕಟರಾಜು ಎಸ್. ದೊಡ್ಡಬಳ್ಳಾಪುರ

ಕರೊನಾ ಎರಡನೇ ಅಲೆ ಆರ್ಭಟ ಹೆಚ್ಚಾಗಿದ್ದು, ತಾಲೂಕು ಆಡಳಿತ ಕರೊನಾ ನಿಯಂತ್ರಣಕ್ಕೆ ಸಮರೋಪಾದಿಯಲ್ಲಿ ಕಾರ್ಯೋನ್ಮುಖವಾಗಿದೆ. ಐದಾರು ದಿನಗಳಿಂದ ತಾಲೂಕಿನಲ್ಲಿ ದಿನಂಪ್ರತಿ ಸರಾಸರಿ 100 ಮಂದಿ ಕರೊನಾ ಸೊಂಕಿಗೆ ತುತ್ತಾಗುತ್ತಿದ್ದಾರೆ.

ಈ ಭಾಗದ ಜನತೆ ಪ್ರತಿ ಕೆಲಸ, ವ್ಯವಹಾರಕ್ಕೂ ಬೆಂಗಳೂರು ನಗರವನ್ನೇ ಅವಲಂಬಿಸಿರುವುದರಿಂದ ಪ್ರತಿನಿತ್ಯ ಸಾವಿರಾರು ಮಂದಿ ಬೆಂಗಳೂರಿಗೆ ಪ್ರಯಾಣ ಮಾಡುತ್ತಾರೆ. ಹೀಗಾಗಿ ತಾಲೂಕಿನಲ್ಲಿ ದಿನೇದಿನೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ತಾಲೂಕು ವೈದ್ಯಾಧಿಕಾರಿ ಪರಮೇಶ್ವರ ವಿಜಯವಾಣಿಗೆ ತಿಳಿಸಿದ್ದಾರೆ.

ಆಸ್ಪತ್ರೆಗಳು ಭರ್ತಿ: ತಾಲೂಕಿನಲ್ಲಿರುವ ಸಾರ್ವಜನಿಕ ಆಸ್ಪತ್ರೆಯಲ್ಲಿನ 63 ಬೆಡ್ ಹಾಗೂ ಇಸ್ತೂರು ಕೋವಿಡ್ ಆಸ್ಪತ್ರೆಯಲ್ಲಿನ 40 ಬೆಡ್‌ಗಳು ಸೋಂಕಿತರಿಂದ ಭರ್ತಿಯಾಗಿದ್ದು, ಬೆಡ್‌ಗಳ ಕೊರತೆ ಕಾಡುತ್ತಿದೆ. ಹೀಗಾಗಿ ಮತ್ತೆ ಇಸ್ತೂರಿನಲ್ಲಿ 20 ಬೆಡ್ ಹೆಚ್ಚಿಸುವ ಜತೆಗೆ ದೊಡ್ಡಬೆಳವಂಗಲದ ಮಾಡೇಶ್ವರದಲ್ಲಿ 100 ಬೆಡ್‌ಗಳ ಕೋವಿಡ್ ಕೇಂದ್ರ ತೆರೆಯಲು ತಾಲೂಕು ಆಡಳಿತ ಸಿದ್ಧತೆ ನಡೆಸಿದೆ. ನಗರದ ಹೊರಭಾಗದಲ್ಲಿನ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಕೇಂದ್ರದಲ್ಲಿ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತ ವ್ಯಕ್ತಿಗಳ ಚಿಕಿತ್ಸೆ ಹಾಗೂ ಕ್ವಾರಂಟೈನ್ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ಸ್ಮಶಾನಕ್ಕಾಗಿ ಜಾಗ ಗುರುತು: ಜಿಲ್ಲೆಯಲ್ಲಿ ಕರೊನಾದಿಂದ 198 ಮಂದಿ ಸಾವನ್ನಪ್ಪಿದ್ದು, ಅಂತ್ಯಕ್ರಿಯೆಗಾಗಿ ಬೆಂಗಳೂರಿನ ಚಿತಾಗಾರವನ್ನೇ ಅವಲಂಬಿಸಬೇಕಾಗಿದೆ. ಇದರಿಂದ ಎಚ್ಚೆತ್ತಿರುವ ಸಿಬ್ಬಂದಿ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಎರಡು ಎಕರೆ ಹಾಗೂ ದೇವನಹಳ್ಳಿಯಲ್ಲಿ ಮೂರು ಎಕರೆ ಜಾಗವನ್ನು ಗುರುತಿಸಿ ಸ್ಮಶಾನಕ್ಕಾಗಿ ವ್ಯವಸ್ಥೆ ಮಾಡಿಕೊಂಡಿದ್ದಾರೆ.

ಆಕ್ಸಿಜನ್ ಪೂರೈಕೆಗೆ ಎರಡು ಖಾಸಗಿ ಸಂಸ್ಥೆಗಳ ಜತೆಗೆ ಮಾತುಕತೆ ಮಾಡಲಾಗಿದೆ. ಆಕ್ಸಿಜನ್ ಅಗತ್ಯಕ್ಕೆ ತಕ್ಕಂತೆ ಪೂರೈಕೆಯಾಗಲಿದೆ. ಇನ್ಮುಂದೆ ಆಕ್ಸಿಜನ್ ಸಮಸ್ಯೆ ಎದುರಾಗುವುದಿಲ್ಲ. ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್, ಪರಸ್ಪರ ಅಂತರ, ಸ್ಯಾನಿಟೈಸರ್ ಬಳಕೆ ಜತೆಗೆ ಸರ್ಕಾರದ ಮಾರ್ಗ ಸೂಚಿ ಪಾಲನೆ ಮಾಡಲೇಬೇಕಿದೆ. ನಮ್ಮ ಜೀವ ನಮ್ಮ ಕೈಲಿದೆ. ಅರುಳ್ ಕುಮಾರ್ ಉಪವಿಭಾಗಾಧಿಕಾರಿ ತಾಲೂಕಿನಲ್ಲಿ ಕರೊನಾ ಸೋಂಕಿತರ ಸಂಖ್ಯೆ ಏರಿಕೆ ಆಗುತ್ತಿದೆ. ಯಾವುದೇ ರೋಗಿಗಳಿಗೆ ತೊಂದರೆಯಾಗದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಕೋವಿಡ್ ಕೇರ್ ಆಸ್ಪತ್ರೆ ತೆರೆಯಲಾಗಿದೆ. ಕರೊನಾ ನಿಯಂತ್ರಣಕ್ಕೆ ಈಗಾಗಲೇ ಕಠಿಣ ಕ್ರಮ ತೆಗೆದುಕೊಳ್ಳಲಾಗಿದೆ. ಟಿ.ಎಸ್ ಶಿವರಾಜು ತಹಸೀಲ್ದಾರ್