ವಾದಿರಾಜ ವ್ಯಾಸಮುದ್ರ ಕಲಬುರಗಿ
ನಗರದಲ್ಲಿ ಕರೊನಾ ತನ್ನ ಕದಂಬಬಾಹು ಚಾಚುತ್ತಿದೆ. ಸೋಂಕಿತರ ಸಂಖ್ಯೆ ಬುಧವಾರ 52ಕ್ಕೇರುವ ಮೂಲಕ ಆತಂಕ ಸೃಷ್ಟಿಯಾಗಿದೆ. ಲಾಕ್ಡೌನ್ ಎರಡನೇ ಹಂತ (ಮೇ 3 ರವರೆಗೆ) ಮುಗಿಯುವ ಹೊತ್ತಿಗೆ ಈ ಮಹಾಮಾರಿಯಿಂದ ಮುಕ್ತಿ ಸಿಗಬಹುದೆಂಬ ಲೆಕ್ಕಚಾರಗಳೆಲ್ಲ ಉಲ್ಟಾ ಹೊಡೆದಿದ್ದು, ಇದಕ್ಕೆ ಬ್ರೆಕ್ ಹಾಕುವುದು ಜಿಲ್ಲಾಡಳಿತಕ್ಕೆ, ಪೊಲೀಸ್ ಇಲಾಖೆಗೆ ಸವಾಲಾಗಿ ಪರಿಣಮಿಸಿದೆ.
52 ಪ್ರಕರಣಗಳು ಮತ್ತು ಐದು ಸಾವಿನಿಂದ ಕಲಬುರಗಿ ಈಗಾಗಲೇ ಡೇಂಜರ್ ಝೋನ್ ಆಗಿದೆ. ನಗರದ ಉತ್ತರ ಕ್ಷೇತ್ರವೂ ಹಾಟ್ಸ್ಪಾಟ್ ಆಗಿದೆ. ಕರೊನಾ ಸೋಂಕು ಹರಡುತ್ತಿರುವ ಸದ್ಯದ ನಾಗಾಲೋಟ ಗಮನಿಸಿದರೆ ಬರುವ ದಿನಗಳಲ್ಲಿ ಜಿಲ್ಲೆಗೆ ದೊಡ್ಡ ಗಂಡಾಂತರ ಎದುರಾಗುವ ಲಕ್ಷಣ ಕಾಣುತ್ತಿದ್ದರೂ ನಗರದಲ್ಲಿ ಲಾಕ್ಡೌನ್ ನಿಯಮ ಪಾಲನೆಯಾಗುತ್ತಿಲ್ಲ. ಜನರ ಅನಗತ್ಯ ಓಡಾಟಕ್ಕೆ ಕಡಿವಾಣ ಬಿದ್ದಿಲ್ಲ.
ಕರೊನಾ ಹರಡುವಿಕೆ ತಡೆಗಟ್ಟಬೇಕಾದರೆ ಜನರು ಮನೆಯಿಂದ ಹೊರಬರದಂತೆ ನೋಡಿಕೊಳ್ಳುವುದು ಹಾಗೂ ಸೋಂಕಿತರ ಸಂಪರ್ಕಕ್ಕೆ ಬಂದವರ ಪತ್ತೆ ಬೇಗ ಮಾಡಿ ಅವರನ್ನು ಕ್ವಾರಂಟೈನ್ಗೊಳಪಡಿಸಿ ಚೈನ್ ಬ್ರೇಕ್ ಮಾಡುವುದು ತೀರ ಅಗತ್ಯ. ಇದೇ ಸಧ್ಯದ ಔಷಧಿ. ಈ ಎರಡೂ ಕೆಲಸ ಇಲ್ಲಿ ಪರಿಣಾಮಕಾರಿಯಾಗಿ ನಡೆಯುತ್ತಿಲ್ಲ. ರೆಡ್ ಝೋನ್, ಡೇಂಜರ್ಝೋನ್, ಹಾಟ್ಸ್ಪಾಟ್ ಎಂದೆಲ್ಲ ಗುರುತಿಸಿಕೊಂಡ ನಗರ ಪ್ರದೇಶದಲ್ಲೇ ಜನರ ಅನಗತ್ಯ ಓಡಾಟ ನಿರಂತರವಾಗಿದೆ.
ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಜನಪ್ರತಿನಿಧಿಗಳು ವಿಷಯದ ಗಂಭೀರತೆ ಅರಿತು ಕಠಿಣ ಹೆಜ್ಜೆ ಇಡಬೇಕಿದೆ. ಈ ಕೆಲಸ ತುರ್ತಾಗಿ ನಡೆಯುವುದು ಈಗಿನ ಜರೂರಿಯಾಗಿದೆ.
ಜಿಲ್ಲೆಯಲ್ಲಿ ಕರೊನಾ ರಣಕೇಕೆಗೆ ನವದೆಹಲಿ ನಿಜಾಮುದ್ದೀನ್ ಮರ್ಕಜ್ ಸಭೆಯಿಂದ ಬಂದ ತಬ್ಲಿಘಿ ಸಂಪರ್ಕ ಇಟ್ಟುಕೊಂಡ ಸೋಂಕಿತರೇ ಹೆಚ್ಚಾಗುತ್ತಿದ್ದಾರೆ. ಇಲ್ಲಿ ಇಬ್ಬರು ಸೋಂಕಿತರಿಂದಲೇ 25 ಜನರಿಗೆ ಮಹಾಮಮಾರಿ ತಗುಲಿದೆ. ಈ ರೀತಿಯ ಸಂಖ್ಯೆಯನ್ನು ಗಮನಿಸಿದರೆ ಸೋಂಕಿತರ ಪ್ರೈಮರಿ ಹಾಗೂ ಸೆಕೆಂಡರಿ ಸಂಪರ್ಕಕ್ಕೆ ಬಂದವರನ್ನು ಬೇಗ ಗುರುತಿಸಲು ಸಾಧ್ಯವಾಗಿಲ್ಲವೆ? ಆರೋಗ್ಯ ಸೇರಿ ಸಂಬಂಧಿತ ಇಲಾಖೆಯವರು ಇಲ್ಲಿ ಎಡವಿದ್ದಾರೆಯೇ ಎಂಬ ಪ್ರಶ್ನೆಗಳಿವೆ. ಕಲಬುರಗಿಯಲ್ಲಿ ಕೆಲವು ವಾರ್ಡಗಳನ್ನು ಸೀಲ್ಡೌನ್ ಮಾಡಲಾಗಿದೆ. ಇಲ್ಲಿ ನಿಷೇಧಾಜ್ಞೆ ಜಾರಿ ಇದೆ. ನಾಲ್ಕೈದು ಜನರಿಗಿಂತ ಹೆಚ್ಚು ಗುಂಪು ಸೇರುವಂತಿಲ್ಲ. ಅನಗತ್ಯ ಯಾರೂ ರಸ್ತೆಗಿಳಿಯುವಂತಿಲ್ಲ. ವಿಚಿತ್ರವೆಂದರೆ ನಿಷೇಧಾಜ್ಞೆ ಇದೆಯೋ? ಇಲ್ಲವೋ ಎನ್ನುವ ರೀತಿಯಲ್ಲಿ ಜನರ ತಿರುಗಾಟ ವಾಹನಗಳ ಓಡಾಟ, ಗಲ್ಲಿಗಳಲ್ಲಿ ಗುಂಪುಗೂಡುವುದು ನಡೆದಿದೆ.
ಮೂವರಿಂದ 25 ಸೋಂಕಿತರು!
ಕರೊನಾದಿಂದ ಮೃತಪಟ್ಟ ನಗರದ ಮೊಮೀನ್ಪುರ ನಿವಾಸಿ, 55 ವರ್ಷದ ಬಟ್ಟೆ ವ್ಯಾಪಾರಿಯಿಂದ (ಪಿ-205) ಕಂಟಕ ಹೆಚ್ಚಾಗಿದೆ. ಇದರೊಟ್ಟಿಗೆ ಪಿ-395, ಪಿ-425 ರೋಗಿಗಳು ಹೆಚ್ಚಿನ ಸಮಸ್ಯೆಗೆ ಕಾರಣರಾಗಿದ್ದಾರೆ. ಇವರ ಸಂಪರ್ಕಕ್ಕೆ ಬಂದು ಸೋಂಕಿತರಾದವರ ಸಂಖ್ಯೆ 25 ಆಗಿದೆ. ಬುಧವಾರ ಪತ್ತೆಯಾಗಿರುವ ಎಲ್ಲ 8 ಪಾಸಿಟಿವ್ ಪ್ರಕರಣಕ್ಕೆ ಪಿ-205 ಸಂಪರ್ಕ ಕಾರಣ ಎಂಬುದು ಬೆಚ್ಚಿ ಬೀಳಿಸಿದೆ. ಒಬ್ಬಿಬ್ಬರಿಂದಲೇ ಈ ಪರಿ ರೋಗ ವಕ್ಕರಿಸಬಹುದಾದ ಕಾರಣ, ಸೋಂಕಿತರ ಸಂಖ್ಯೆಯೇ ಇಲ್ಲಿ 52 ದಾಟಿರುವುದರಿಂದ ಇನ್ನೆಷ್ಟು ಜನರಿಗೆ ಇದು ಅಂಟಬಹುದು ಎಂಬ ಪ್ರಶ್ನೆ ಆತಂಕ ಸೃಷ್ಟಿಸಿದೆ. ಪಿ-205, -ಪಿ-395 ಅವರ ಸಂಪರ್ಕಕ್ಕೆ ಬಂದವರ ಚೈನ್ ಲಿಂಕ್ ಬ್ರೇಕ್ ಹಾಕುವುದಕ್ಕೆ ಜಿಲ್ಲಾಡಳಿತ ಹರಸಾಹಸಪಡುತ್ತಿದೆ.
ಉತ್ತರ ಕ್ಷೇತ್ರ ತತ್ತರ
ಜಿಲ್ಲೆಯ 52 ಕರೊನಾ ಸೋಂಕಿತರಲ್ಲಿ 35ಕ್ಕೂ ಅಧಿಕ ಕಲಬುರಗಿ ನಗರದ ಉತ್ತರ ಕ್ಷೇತ್ರಕ್ಕೆ ಸೇರಿವೆ. ಹೀಗಾಗಿ ಈ ಭಾಗದಲ್ಲಿ ಸಂಚರಿಸುವುದೇ ಅಪಾಯಕಾರಿ ಎನಿಸಿದೆ. ಇದನ್ನು ರಿಸ್ಕಿ ಪ್ರದೇಶ, ಸೋಂಕುಪೀಡಿತ ಪ್ರದೇಶ ಎಂದು ಘೋಷಿಸಲಾಗಿದೆ. ಆದರೆ ಇದಕ್ಕೆ ತಕ್ಕಂತೆ ಇಲ್ಲಿ ಕ್ರಮಗಳು ಜರುಗುತ್ತಿಲ್ಲ.