ಜಿಲ್ಲೆ

ಹೆಚ್3ಎನ್2 ವೈರಸ್ ಬಗ್ಗೆ ಭಯ ಬೇಡ, ನಿಯಮ ಪಾಲಿಸಿ: ಡಿಎಚ್‌ಒ ಶಿವಸ್ವಾಮಿ

   ಹಾಸನ: ಹೆಚ್3ಎನ್2 ವೈರಸ್‌ಗೆ ಹಾಸನ ಜಿಲ್ಲೆಯ ಕಿರುಗಡಲು ಗ್ರಾಮದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಆದರೆ, ಈ ಬಗ್ಗೆ ಜನರು ಭಯ ಪಡುವ ಅಗತ್ಯವಿಲ್ಲ. ಆರೋಗ್ಯ ಇಲಾಖೆಯಿಂದ ಸೂಚಿಸುವ ಮಾರ್ಗಸೂಚಿಗಳನ್ನು ಪಾಲಿಸಿದರೆ ಸಾಕು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಬಿ.ಎನ್. ಶಿವಸ್ವಾಮಿ ತಿಳಿಸಿದರು.

ನಗರದ ಜಿಲ್ಲಾ ಆರೋಗ್ಯ ಇಲಾಖೆ ಕಚೇರಿ ಸಭಾಂಗಣದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆಲೂರು ತಾಲೂಕಿನ ಕಿರುಗಡಲು ಗ್ರಾಮದ 87 ವರ್ಷದ ವೃದ್ಧರೊಬ್ಬರು ಮಾರ್ಚ್ 1ರಂದು ಹಾಸನದ ಹಿಮ್ಸ್ ಆಸ್ಪತ್ರೆಯಲ್ಲಿ ಸಾವನಪ್ಪಿದ್ದರು. ಮಾರ್ಚ್ 3ರಂದು ಬಂದ ಪರೀಕ್ಷಾ ವರದಿಯಲ್ಲಿ ಅವರಿಗೆ ಹೆಚ್3ಎನ್2 ಸೋಂಕು ತಗುಲಿರುವುದು ದೃಢಪಟ್ಟಿತ್ತು. ವಿಷಯ ತಿಳಿದ ತಕ್ಷಣ ಆರೋಗ್ಯ ಇಲಾಖೆಯಿಂದ ಸಕಲ ಮುಂಜಾಗೃತ ಕ್ರಮಗಳನ್ನು ತೆಗೆದುಕೊಳ್ಳಲಾಯಿತು. 125 ಮನೆಗಳಿರುವ ಸುಮಾರು 500 ಜನರು ವಾಸ ಮಾಡುವ ಗ್ರಾಮದ ಎಲ್ಲರನ್ನು ಪರೀಕ್ಷೆಗೆ ಒಳಪಡಿಸಿದಾಗ ಯಾರಲ್ಲೂ ಸೋಂಕಿನ ಲಕ್ಷಣಗಳು ಇರುವುದು ಕಂಡುಬರಲಿಲ್ಲ ಎಂದು ಹೇಳಿದರು.

ಸಾವನಪ್ಪಿದ ವ್ಯಕ್ತಿಯ ಹೆಂಡತಿಯನ್ನು ಕೂಡ ಪರೀಕ್ಷೆಗೆ ಒಳಪಡಿಸಿದಾಗ ಅವರ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ. ಆತನ ಪುತ್ರ ಹಾಸನದಲ್ಲಿ ವಾಸ ಮಾಡುತ್ತಿದ್ದು, ಅವರ ಮನೆಯ ಸುತ್ತಮುತ್ತಲು ಸಹ ಸರ್ವೆ ಮಾಡಲಾಗಿದ್ದು, ಇನ್ನು 14 ದಿನಗಳವರೆಗೂ ಸರ್ವೆ ಮುಂದುವರೆಸುತ್ತೇವೆ. ಈ ಬಗ್ಗೆ ಜನರಿಗೆ ಮಾಹಿತಿ ನೀಡಿ ಕರಪತ್ರ ಕೂಡ ಕೊಟ್ಟು ಯಾರು ಗಾಬರಿಯಾಗಬಾರದೆಂದು ಧೈರ್ಯ ತುಂಬಲಾಗಿದೆ. ಅಗತ್ಯ ಔಷಧಿ ದಾಸ್ತಾನು ನಮ್ಮಲ್ಲಿದ್ದು, ಯಾವ ಕೊರತೆಯೂ ಇಲ್ಲ. ಎಂಥ ಪರಿಸ್ಥಿತಿ ಎದುರಾದರೂ ನಾವು ಎದುರಿಸಲು ಸಿದ್ಧರಾಗಿದ್ದೇವೆ ಎಂದು ತಿಳಿಸಿದರು.

ಹೆಚ್3 ಎನ್2 ವೈರಸ್ ಬಗ್ಗೆ ಭಯ ಪಡುವುದು ಬೇಡ. ಸಾವನಪ್ಪಿದ ವ್ಯಕ್ತಿ ವಯಸ್ಸು 87 ಆಗಿದ್ದು, ಶೀತಾ, ನೆಗಡಿ, ಕೆಮ್ಮು, ಜ್ವರ ಇತ್ತು. ಸಾವನಪ್ಪಿದ ವ್ಯಕ್ತಿ ಸಂತೆಗಳಿಗೆ ಸಣ್ಣ- ಪುಟ್ಟ ವ್ಯಾಪಾರ ಮಾಡಲು ಹೋಗುತ್ತಿದ್ದರು. ಈ ವೇಳೆ ಹೊರಗಿನ ವ್ಯಕ್ತಿಯಿಂದ ಸೋಂಕು ತಗಲಿರಬಹುದು. ಈ ಸೋಂಕಿನಿಂದ ಮೃತಪಟ್ಟ ರಾಜ್ಯದ ಮೊದಲ ಪ್ರಕರಣ ಇದಾಗಿದೆ. ಹಾಗಾಗಿ ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲು ಸರಕಾರ ಸೂಚನೆ ನೀಡಿದ್ದು, ಇನ್ನು 14 ದಿನಗಳ ಕಾಲ ಸಮೀಕ್ಷೆ ಮಾಡಲಾಗುತ್ತದೆ. ನಮ್ಮ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳ ಜೊತೆ ನಿಕಟ ಸಂಪರ್ಕದಲ್ಲಿದ್ದೇವೆ. ಪ್ರತಿದಿನ ಪರೀಕ್ಷೆಯ ವರದಿಯನ್ನು ಕಳುಹಿಸಿಕೊಡಲಾಗುತ್ತಿದೆ. ಉಳಿದಂತೆ ಈವರೆಗೂ ಜಿಲ್ಲೆಯಲ್ಲಿ ಹೆಚ್3ಎನ್2 ವೈರಸ್ ಕಂಡು ಬಂದಿಲ್ಲ ಎಂದು ಹೇಳಿದರು.

ಕೋವಿಡ್ ಸೋಂಕು ಹರಡಿದ ವೇಳೆ ಯಾವ ರೀತಿ ಮುನ್ನೆಚ್ಚರಿಕೆ ಕ್ರಮ ವಹಿಸಲಾಗಿತ್ತೊ, ಅದೇ ರೀತಿ ಈಗಲೂ ಕೆಲ ಮಾರ್ಗಸೂಚಿಗಳನ್ನು ಪಾಲಿಸಬೇಕು. ಸಾಮಾಜಿಕ ಅಂತರ ಕಾಪಾಡುವುದು, ಮಾಸ್ಕ್ ಧರಿಸುವುದು, ಹೊರಗಿನಿಂದ ಬಂದ ತಕ್ಷಣ ಕೈ ಕಾಲು, ಮುಖ ತೊಳೆದುಕೊಳ್ಳಬೇಕು. ಈ ರೀತಿ ಜೀವನ ಶೈಲಿ ಬದಲಾಯಿಸಿಕೊಂಡರೇ ಉತ್ತಮ ಆರೋಗ್ಯದಿಂದ ಜೀವನ ಸಾಗಿಸಬಹುದು ಎಂದು ಸಲಹೆ ನೀಡಿದರು.