ಚಿತ್ರದುರ್ಗ:ಚಳ್ಳಕೆರೆ ತಾಲೂಕು ಹೆಗ್ಗೆರೆ ಗೇಟ್ ಬಳಿ ಬೆಳಗ್ಗೆ 10.20ರ ಹೊತ್ತಿನಲ್ಲಿ ಟಿಪ್ಪರ್ ಹಾಗೂ ಟಿಟಿ ನಡುವೆ ಡಿಕ್ಕಿಯಾಗಿ, ಟಿಟಿಯಲ್ಲಿದ್ದ ಮೂವರು ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯಲ್ಲಿ 7 ಜನರು ಗಾಯಗೊಂಡಿದ್ದಾರೆ.
ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಬೆಂಗಳೂರಿಂದ ತಳಕು ಕಡೆಗೆ ಹೋಗಲು 10 ಮಂದಿ ಪ್ರಯಾಣಿಕರಿದ್ದ ಟೆಂಪೊ ಟ್ರಾವೆಲರ್,ಖಾಸಗಿ ಕಂಪನಿ ಯೊಂದಕ್ಕೆ ಸೇರಿದ ಟಿಪ್ಪರ್ ನಡುವೆ ಅಪಘಾತವಾಗಿದ್ದು,ಕುಮಾರನಾಯಕ(46),ಶಂಕರಿಬಾಯಿ(60)ಹಾಗೂ ಶ್ವೇತಾ(38) ಎಂಬುವರು ಸ್ಥಳ ದಲ್ಲೇ ಮೃತಪಟ್ಟಿದ್ದಾರೆ.
ಘಟನೆಯಲ್ಲಿ ಗಾಯಗೊಂಡಿರುವಂಥವರನ್ನು ಲಕ್ಷ್ಮೀಬಾಯಿ,ಪುಷ್ಪವತಿ,ಶೈಲಜಾ,ಟಿ.ಕೆ.ಪ್ರೀತಮ್,ಟಿಟಿ ಚಾಲಕ ತಿಪ್ಪೇಸ್ವಾಮಿ,ಅಜೂರ್‌ನಾಯಕ ಹಾಗೂ ಪ್ರಶಾಂತ್ ಎಂದು ಗುರುತಿಸಲಾಗಿದೆ.
ಹಿರಿಯೂರು ಕಡೆಯಿಂದ ಟಿಟಿ ಹಾಗೂ ಟಿಪ್ಪರ್ ಹಿಂದೆ,ಮುಂದೆ ಬಂದಿದ್ದು, ಟಿಪ್ಪರ್ ಲಾರಿ ಚಾಲಕ,ಐರನ್ ಫ್ಯಾಕ್ಟರಿವೊಳಗೆ ಹೋಗಲು ಏಕಾ ಏಕಿ ಬಲಕ್ಕೆ ತಿರುಗಿಸಿದ್ದು,ಅಪಘಾತಕ್ಕೆ ಕಾರಣವಾಗಿದೆ. ಟಿಪ್ಪರ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಚಳ್ಳಕೆರೆ ಡಿವೈಎಸ್‌ಪಿ ರಾಜಣ್ಣ ಭೇಟಿ ನೀಡಿದ್ದರು,ಚಳ್ಳಕೆರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
--