ಬನ್ನೂರಿನ ಸಮೀಪದ ಮತ್ತಿತಾಳೇಶ್ವರ ದೇವಾಲಯದಲ್ಲಿ ಶಿವರಾತ್ರಿಯ ಪ್ರಯುಕ್ತ ರಥೋತ್ಸವ ವೈಭವದಿಂದ ನಡೆಯಿತು. 
ಜಿಲ್ಲೆ

ಹೆಗ್ಗೂರಿನಲ್ಲಿ ಮತ್ತಿತಾಳೇಶ್ವರ ರಥೋತ್ಸವ

ಬನ್ನೂರು: ಪಟ್ಟಣದಿಂದ ಸುಮಾರು 8 ಕಿ.ಮೀ. ದೂರದಲ್ಲಿರುವ ಹೆಗ್ಗೂರು ಗ್ರಾಮದಲ್ಲಿನ ಇತಿಹಾಸ ಪ್ರಸಿದ್ಧ ಮತ್ತಿತಾಳೇಶ್ವರ ದೇವರ ರಥೋತ್ಸವವು ಶಿವರಾತ್ರಿಯ ಹಬ್ಬದ ಪ್ರಯುಕ್ತ ಶನಿವಾರ ಸಾವಿರಾರು ಜನರ ಸಮ್ಮುಖದಲ್ಲಿ ಮಂತ್ರಘೋಷದೊಂದಿಗೆ ವೈಭವಯುತವಾಗಿ ನಡೆಯಿತು.

ಮತ್ತಿತಾಳೇಶ್ವರ ದೇವರ ಮೂರ್ತಿಯನ್ನು ಹೂವಿನಿಂದ ಅಲಂಕರಿಸಿ ದೇವಾಲಯದ ಸುತ್ತ ಪ್ರದಕ್ಷಿಣೆ ಹಾಕಲಾಯಿತು. ರಥೋತ್ಸವವು ಸಾಗುವ ಮುಂಭಾಗದಲ್ಲಿ ಹೋಮವನ್ನು ನಡೆಸಿದರು. ನಂತರ ರಥವನ್ನು ವಿವಿಧ ಬಾವುಟಗಳ ಪತಾಕೆಯಿಂದ, ಹೂವಿನಿಂದ ಅಲಂಕರಿಸಿ ದೇವರ ಮೂರ್ತಿಯನ್ನು ಮೆರವಣಿಗೆ ಮಾಡಿ ರಥದ ಮೇಲ್ಭಾಗ ಪ್ರತಿಷ್ಠಾಪಿಸಲಾಯಿತು.

ರಥೋತ್ಸವದ ಹಿನ್ನೆಲೆಯಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು ದೇವಾಲಯದ ಮುಂದೆ ಜಮಾಯಿಸಿ, ದೇವರನ್ನು ಪ್ರತಿಷ್ಠಾಪಿಸುತ್ತಿದ್ದಂತೆ ಮುಗಿಲು ಮುಟ್ಟಿದ ಹರ್ಷೋದ್ಗಾರದ ನಡುವೆ ರಥವು ಚಲಿಸಲಾರಂಭಿಸಿತು.

ದೇವಾಲಯದ ಸುತ್ತ ಒಂದು ಸುತ್ತು ಹಾಕಿ ರಥವು ಸ್ವಸ್ಥಾನ ಸೇರಿತು. ವಿವಿಧೆಡೆಗಳಿಂದ ಬಂದಿದ್ದ ಸಾವಿರಾರು ಭಕ್ತರು ಹಣ್ಣು ದವನ ರಥದೆಡೆಗೆ ಎಸೆದು ಪುನೀತರಾದರು. ವಿವಿಧೆಡೆಯಿಂದ ಬಂದಿದ್ದ ಭಕ್ತರಿಗೆ ಅನುಕೂಲವಾಗಲೆಂದು ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ಬಸ್‌ಗಳ ಕೊರತೆಯಿಂದ ಹೆಗ್ಗೂರಿಗೆ ಹೋಗಲು ಭಕ್ತರಿಗೆ ತೊಂದರೆಯಾದರೂ ಲೆಕ್ಕಿಸದೆ ಆಟೋ, ವ್ಯಾನ್‌ಗಳ ಮೂಲಕ ತೆರಳಿ ದೇವರ ದರ್ಶನ ಪಡೆದರು.