ಜಿಲ್ಲೆ

ಹೆಂಗರ ಮಾಡಿ ಹೊರಗ ತಗೀರಿ

ಹುಬ್ಬಳ್ಳಿ: ‘ಅಯ್ಯಯ್ಯೋ ಕಾಪಾಡ್ರಿ ಸರ, ಇಲ್ಲಿ ಮಣ್ಣಾಗ ಸಿಕ್ಕೊಂಡೀನಿ.. ಹೆಂಗರ ಮಾಡಿ ದೌಡ್ ಹೊರಗ ತಗೀರಿ.. ಯಪ್ಪಾ ನನ್ ಕಾಲು ನೋಯಾಕತೆôತಿ, ಕುಡಿಯಾಕ ನೀರು ಕೊಡ್ರಿ...’

ಹೀಗೆ ಕುತ್ತಿಗೆವರೆಗೆ ಮಣ್ಣಿನಡಿ ಸಿಲುಕಿ ಕಾರ್ವಿುಕನೊಬ್ಬ ನರಳಾಡುತ್ತಿದ್ದ ದೃಶ್ಯ ಇಲ್ಲಿನ ಬೈಲಪ್ಪನವರ ನಗರದ ಗಣೇಶ ದೇವಸ್ಥಾನದ ಬಳಿ ಸೋಮವಾರ ಕಂಡು ಬಂತು. ರ್ಕ ಬಸವೇಶ್ವರ ನಗರ ನಿವಾಸಿ ಶ್ರೀಧರ ಶಂಕ್ರಪ್ಪ ಮೊರಬದ ಮಣ್ಣಿನಡಿ ಸಿಲುಕಿದ್ದ ಕಾರ್ವಿುಕ.

ಗುತ್ತಿಗೆದಾರ ನಾಗೇಶ ಹಂಚಿನಮನಿ ಒಳಚರಂಡಿ ದುರಸ್ತಿ ಕಾಮಗಾರಿ ಟೆಂಡರ್ ಪಡೆದುಕೊಂಡಿದ್ದರು. ಬೆಳಗ್ಗೆ ಕೆಲಸ ಆರಂಭವಾದ ಬಳಿಕ ಒಳಚರಂಡಿ ಕೆಳಗೆ ಇಳಿದು ಕೆಲಸ ಮಾಡುತ್ತಿದ್ದಾಗ ಏಕಾಏಕಿ ಮಣ್ಣು ಕುಸಿದ ಪರಿಣಾಮ ಶ್ರೀಧರನ ತಲೆ ಹೊರತುಪಡಿಸಿ ದೇಹ ಮಣ್ಣಿನಡಿ ಸಿಲುಕಿತ್ತು. ಕೂಡಲೆ, ಎಚ್ಚೆತ್ತುಕೊಂಡ ಸ್ಥಳೀಯರು ಆತನ ರಕ್ಷಣೆಗೆ ಮುಂದಾದರು. ಆದರೆ ಪ್ರಯೋಜನವಾಗಲಿಲ್ಲ. ಬಳಿಕ ಸ್ಥಳಕ್ಕೆ ಧಾವಿಸಿದ ಉಪನಗರ ಠಾಣೆ ಪೊಲೀಸರು ಹಾಗೂ ಅಗ್ನಿಶಾಮಕದಳ ಸಿಬ್ಬಂದಿ ಕಾರ್ಯಾಚರಣೆ ಆರಂಭಿಸಿದರು.

1 ಜೆಸಿಬಿ, 2 ಅಗ್ನಿಶಾಮಕದಳ ವಾಹನಗಳು ಹಾಗೂ 30ಕ್ಕೂ ಹೆಚ್ಚು ಅಗ್ನಿಶಾಮಕದಳ ಸಿಬ್ಬಂದಿ ಕಾರ್ವಿುಕ ಸಿಲುಕಿದ್ದ ಜಾಗದ ಪಕ್ಕದಲ್ಲಿ ಗುಂಡಿ ತೋಡಿ ಎಚ್ಚರಿಕೆಯಿಂದ ಮಣ್ಣು, ಕಲ್ಲು ತೆಗೆದರು. ಸತತ ಮೂರು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಶ್ರೀಧರನನ್ನು ರಕ್ಷಿಸುವಲ್ಲಿ ಯಶಸ್ವಿಯಾದರು.

ಮುಖ್ಯ ಅಗ್ನಿಶಾಮಕದಳ ಅಧಿಕಾರಿ ಈಶ್ವರ ನಾಯಕ, ಪ್ರಾದೇಶಿಕ ಅಧಿಕಾರಿ ಶ್ರೀಕಾಂತ, ಜಿಲ್ಲಾ ಅಗ್ನಿಶಾಮಕದಳ ಅಧಿಕಾರಿ ವಿನಾಯಕ ಕಲ್ಗುಟ್ಕರ, ನಗರ ಅಗ್ನಿಶಾಮಕ ಅಧಿಕಾರಿ ಚಂದ್ರಶೇಖರ, ಉಪನಗರ ಠಾಣೆ ಇನ್ಸ್​ಪೆಕ್ಟರ್ ಎಸ್.ಕೆ. ಹೊಳೆಯಣ್ಣವರ, ಅಶೋಕನಗರ ಠಾಣೆ ಇನ್ಸ್​ಪೆಕ್ಟರ್ ರವಿಚಂದ್ರ, ಪಿಎಸ್​ಐ ಅಶೋಕ ಬಿಎಸ್​ಪಿ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಮಣ್ಣಿನಡಿ ಸಿಲುಕಿದ್ದ ಕಾರ್ವಿುಕ ತೀವ್ರ ಅಸ್ವಸ್ಥನಾಗಿದ್ದ. ಸ್ಥಳದಲ್ಲೇ ಇದ್ದ ವೈದ್ಯರು ತಪಾಸಣೆ ನಡೆಸಿ, ಆಮ್ಲಜನಕ ಅಳವಡಿಸಿದರು. ಹೆಚ್ಚಿನ ಚಿಕಿತ್ಸೆಗೆಂದು ಕಿಮ್ಸ್​ಗೆ ದಾಖಲಿಸಲಾಯಿತು. ಸ್ಥಳದಲ್ಲಿ ಸೇರಿದ್ದ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು.

ಗುತ್ತಿಗೆದಾರನಿಗೆ ತಾನೇ ಕರೆ ಮಾಡಿದ್ದ

ಮಣ್ಣಿನಡಿ ಸಿಲುಕಿಕೊಳ್ಳುತ್ತಿದ್ದಂತೆ ಶ್ರೀಧರ ತಾನೇ ಗುತ್ತಿಗೆದಾರನಿಗೆ ಹಂಚಿನಮನಿಗೆ ಕರೆ ಮಾಡಿ, ‘ಅಣ್ಣಾ ನಾನು ಮಣ್ಣಿನಡಿ ಸಿಲುಕಿಕೊಂಡಿದ್ದೇನೆ. ಬೇಗ ಬಾ ನನ್ನನ್ನು ಕಾಪಾಡು’ ಎಂದು ಗೋಗರೆದಿದ್ದ ಎಂದು ಸ್ಥಳೀಯರು ತಿಳಿಸಿದ್ದಾರೆ.

ಹೊರ ಗುತ್ತಿಗೆ ಕಾರ್ವಿುಕ

ಗುತ್ತಿಗೆದಾರ ನಾಗೇಶ ಹಂಚಿನಮನಿ ಒಳಚರಂಡಿ ಕಾಮಗಾರಿಗಾಗಿ ರೈಲು ನಿಲ್ದಾಣದ ಬಳಿ ನಿಂತಿದ್ದ ಕಾರ್ವಿುಕರನ್ನು ಕರೆದುಕೊಂಡು ಬಂದಿದ್ದರು. ತರಬೇತಿ ಪಡೆಯದ ಶ್ರೀಧರನನ್ನು ಒಳಚರಂಡಿ ದುರಸ್ತಿ ಕಾಮಗಾರಿಗಾಗಿ ಕೆಳಗೆ ಇಳಿಸಿದ್ದರು. ಹಾಗಾಗಿ, ಆತ ಮಣ್ಣಿನಡಿ ಸಿಲುಕಿ ಒದ್ದಾಡುವಂತಾಯಿತು ಎಂಬ ಆರೋಪ ಕೇಳಿಬಂದಿದೆ.

ಗುತ್ತಿಗೆದಾರರು ತಮ್ಮ ಕೆಲಸಕ್ಕೆ ಹೊರ ಗುತ್ತಿಗೆ ಕಾರ್ವಿುಕರನ್ನು ಬಳಸಿಕೊಳ್ಳಲು ಅವಕಾಶವಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗುತ್ತಿಗೆದಾರ ಹಂಚಿನಮನಿ ವಿರುದ್ಧ ಕಾರಣ ಕೇಳಿ ನೋಟಿಸ್ ನೀಡಲಾಗಿದೆ. | ಆನಂದಕುಮಾರ ಜಳಕಿ, ಸಹಾಯಕ ಆಯುಕ್ತ, ಪಾಲಿಕೆ ವಲಯ ಸಂಖ್ಯೆ 5