ಜಿಲ್ಲೆ

ಹೃನ್ಮನ ಸೆಳೆದ ಜಂಬೂಸವಾರಿ ವೈಭವಸಿರಿ

ಮಂಜುನಾಥ ತಿಮ್ಮಯ್ಯ

ಮಂಜುನಾಥ ತಿಮ್ಮಯ್ಯ ಮೈಸೂರು

ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಷರ್ಕಣೆ ಜಂಬೂಸವಾರಿ ಮೆರವಣಿಗೆಯ ವೈಭವಸಿರಿ ಕಂಡು ನಿರೀಕ್ಷೆಯಂತೆಯೇ ಲಕ್ಷಾಂತರ ಜನಸ್ತೋಮ ಭಾವಪರವಶಗೊಂಡಿತು..!

ಮಳೆ ಸಿಂಚನದ ನಡುವೆಯೂ 415ನೇ ದಸರೆಯ ವಿಜಯದಶಮಿಯ ಮೆರವಣಿಗೆಯ ಸೊಬಗಿಗೆ ಜನಸಮೂಹ ತಲೆದೂಗಿ ಸಂಭ್ರಮಿಸಿತು. ನೆತ್ತಿ ಸುಡುವ ಉರಿಬಿಸಿಲಿನಿಂದ ಬಸವಳಿದಿದ್ದ ಕಲಾವಿದರಿಗೆ, ಸಭಿಕರಿಗೆ ಜಿಟಿ ಜಿಟಿ ಮಳೆ ಹಿತ ಅನುಭವ ಉಣಬಡಿಸಿ ಉತ್ಸಾಹ ವೃದ್ಧಿಸಿತು. ಅಡೆತಡೆ ಮಾಡದ ವರುಣದೇವ ಈ ಕಾರ್ಯಕ್ಕೆ ಶುಭ ಕೋರಿ ಆಹ್ಲಾದಕರ ತಂಪು ವಾತಾವರಣದಲ್ಲಿ ಜಂಬೂಸವಾರಿ ನಿರ್ವಿಘ್ನವಾಗಿ ನೆರವೇರಲು ಆಶೀರ್ವದಿಸಿತು.

ಸತತ 6ನೇ ಬಾರಿಗೆ 750 ಕೆ.ಜಿ. ತೂಕದ ಚಿನ್ನ ಲೇಪಿತ ಅಂಬಾರಿಯಲ್ಲಿ ವಿರಾಜಮಾನವಾಗಿದ್ದ ಚಾಮುಂಡೇಶ್ವರಿ ಮೂರ್ತಿಯನ್ನು ಹೊತ್ತು ರಾಜಪಥದಲ್ಲಿ ಸಾಗಿದ ಗಜಪಡೆ ನಾಯಕ ಅಭಿಮನ್ಯು ಎಂದಿನಂತೆ ಜನಮನಸೂರೆಗೊಂಡ. ನಾಡದೇವಿಯನ್ನು ಕಂಡ ಸಾವಿರಾರು ಜನರು ಭಕ್ತಿ-ಭಾವದಿಂದ ಪರವಶರಾಗಿ ಚಾಮುಂಡಿಗೆ ಉಘೇ ಉಘೇ... ಎನ್ನುತ್ತಾ ಧನ್ಯತಾ ಭಾವ ಮೆರೆದರು.

ಅಧಿದೇವತೆಗೆ ಪುಷ್ಪ ನಮನ:

ಅಪರೂಪದ ‘ವೃದ್ಧಿ ದಸರೆ’ ಅಂಗವಾಗಿ 11 ದಿನಕ್ಕೆ ನಡೆದ ವಿಜಯದಶಮಿ ಈ ಸಲದ ವಿಶಿಷ್ಟ. ಮಧ್ಯಾಹ್ನ 1.10 ಗಂಟೆ ಹೊತ್ತಿಗೆ ಸಲ್ಲುವ ಶುಭ ಧನುರ್ ಲಗ್ನದಲ್ಲಿ ನಂದಿಧ್ವಜ ಪೂಜೆಯು ಅರಮನೆ ಬಲರಾಮ ದ್ವಾರದಲ್ಲಿ ನೆರವೇರಿತು. ಬಳಿಕ 1.42ಕ್ಕೆ ವಿಜಯದಶಮಿ ಮೆರವಣಿಗೆಗೆ ಅರಮನೆ ಒಳಾವರಣದಲ್ಲಿ ಚಾಲನೆ ದೊರೆಯಿತು. ಮುಹೂರ್ತಕ್ಕೂ ಕೇವಲ 2 ನಿಮಿಷ ಮುನ್ನ, ಅಂದರೆ, ಸಂಜೆ 4.40ಕ್ಕೆ ಅಂಬಾರಿಯಲ್ಲಿ ಪ್ರತಿಷ್ಠಾಪಿತ ನಾಡದೇವತೆ ಚಾಮುಂಡೇಶ್ವರಿ ವಿಗ್ರಹಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮೂರು ಸಲ ಕನಕಾಂಬರ, ಮಲ್ಲಿಗೆ ಪುಷ್ಪಾರ್ಚನೆ ಮಾಡಿ ಅಧಿದೇವತೆಗೆ ನಮನ ಅರ್ಪಿಸಿದರು.

ಈ ಹೊತ್ತಿನಲ್ಲಿ ಪೊಲೀಸ್ ವಾದ್ಯ ತಂಡ ನುಡಿಸಿದ ಸುಶ್ರಾವ್ಯ ರಾಷ್ಟ್ರಗೀತೆಗೆ ಹಿಮ್ಮೇಳದೊಂದಿಗೆ ಸಿಡಿಸಿದ 21 ಕುಶಾಲತೋಪುಗಳು ಅರಮನೆಯ ಆವರಣದಲ್ಲಿ ರಿಂಗಣಿಸಿತು.

ಈ ಶುಭ ಘಳಿಗೆಗೆ ಹೈಕೋರ್ಟ್ ಮುಖ್ಯ ನ್ಯಾಯಾಧೀಶ ವಿಭು ಭಕ್ರು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ಎಸ್.ತಂಗಡಗಿ, ಸಂಸದರೂ ಆಗಿರುವ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ್ ರೆಡ್ಡಿ, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಪುಷ್ಪ ನಮನ ಸಲ್ಲಿಕೆಯೊಂದಿಗೆ ಸಾಕ್ಷಿಯಾದರು.

ಆನೆಗಳ ಚೆಲುವು ಮನಮೋಹಕ:

ವೀರಗಾಸೆ ಕುಣಿತಯೊಂದಿಗೆ ಪ್ರಾರಂಭವಾದ ಮೆರವಣಿಗೆಯ ಮುಂಚೂಣಿಯಲ್ಲಿ ನಿಶಾನೆ ಆನೆ ಧನಂಜಯ್, ನೌಪತ್ ಆನೆಯಾಗಿ ಗೋಪಿಯನ್ನು ಸಾಲಾನೆಗಳಾಗಿ ಮಹೇಂದ್ರ, ಶ್ರೀಕಂಠ, ಲಕ್ಷ್ಮೀ, ಕಂಜನ್, ಭೀಮ, ಏಕಲವ್ಯ, ಪ್ರಶಾಂತ, ಸುಗ್ರೀವ, ಹೇಮಾವತಿ ಆನೆಗಳು ಅನುಸರಿಸಿದವು. ಇದು ಹೊಸ ಆನೆಗಳಾದ ಶ್ರೀಕಂಠ, ರೂಪಾ, ಹೇಮಾವತಿಗೆ ಮೊದಲ ದಸರೆ ಅನುಭವ. ಮುಂದಲೆ ಪಟ್ಟಿ, ಕತ್ತಿನ ಗಂಟೆ, ಕತ್ತಿನ ಸರ, ಸಿಂಗೋಟಿ, ಚಮರಿ ಬಾಲ, ವರ್ಣರಂಜಿತ ಛತ್ರಿ, ರೇಷ್ಮೆ ಕುಸುರಿಯ ಜೂಲಾಗಳಿಂದ ಅಲಂಕೃತ ಆನೆಗಳ ಚೆಲುವು ಮನಮೋಹಕವಾಗಿ ಕಂಗೊಳಿಸಿತು.

6ನೇ ಬಾರಿಗೆ ದಸರಾ ಅಂಬಾರಿ ಹೊತ್ತ ಅಭಿಮನ್ಯು

ಅರಮನೆಯ ಆವರಣದಲ್ಲಿ ಪೂಜೆಗಾಗಿ ನಿರ್ಮಿಸಿದ್ದ ಅಟ್ಟಣಿಗೆಯತ್ತ ಕಾವೇರಿ ಮತ್ತು ರೂಪಾ ಕುಮ್ಕಿ ಆನೆಗಳೊಂದಿಗೆ ಸರ್ವಾಲಂಕೃತನಾಗಿ ಠೀವಿಯಿಂದ ಬಂದ 59ರ ಹರೆಯದ ಅಭಿಮನ್ಯು 6ನೇ ಬಾರಿಗೆ ದಸರಾ ಅಂಬಾರಿ ಹೊತ್ತ ಹೆಗ್ಗಳಿಕೆಯೊಂದಿಗೆ ಪೂಜೆಗೆ ಸಹಕರಿಸಿದ. ಜತೆಗೆ, ಸುಲಲಿತವಾಗಿ ರಾಜಮಾರ್ಗದಲ್ಲಿ ಸಾಗಿ ಕಣ್ಮನ ಸೆಳೆದ. ಇದರೊಂದಿಗೆ ತನ್ನ ಜವಾಬ್ದಾರಿಯನ್ನು ಯಶಸ್ಸಿಯಾಗಿ ಪೂರೈಸಿದ ಈತ, ಅಂಬಾರಿ ಹೊರುವ ಕಾಯಕದಿಂದ ನಿವೃತ್ತಿಯತ್ತ ಮುಖ ಮಾಡಿದ.

ಗಜಪಡೆ ಕಂಡು ಜನ ಪುಳಕಿತ:

ರಾಜಬೀದಿಯಲ್ಲಿ ಗಾಂಭೀರ್ಯದಿಂದ ಹೆಜ್ಜೆ ಹಾಕುತ್ತಿದ್ದ ಗಜ ಸಮೂಹವನ್ನು ಕಂಡು ಜನರು ಚಕಿತಗೊಂಡರು. ಸಡಗರದಲ್ಲಿ ಹೊನಲಲ್ಲಿ ತೇಲಿದರು. ನಿರೀಕ್ಷೆ ಮೀರಿ ಬಂದಿದ್ದ ಲಕ್ಷಾಂತರ ಜನರು ರಾಜ ಬೀದಿಯ ಇಕ್ಕೆಲಗಳಲ್ಲಿ ನಿಂತು ಅಂಬಾರಿಯ ರಮಣೀಯತೆ ವೀಕ್ಷಿಸಿ ಸಂಭ್ರಮಿಸಿದರು.

ಯಾವ ಬದಿಗೂ ವಾಲದಂತೆ ಅಂಬಾರಿ ಅಭಿಮನ್ಯ ಮೇಲೆ ಪ್ರತಿಷ್ಠಾಪನೆಗೊಂಡಿದ್ದರಿಂದ ಅದರ ಚೆಲುವು ಇಮ್ಮಡಿಗೊಂಡಿತು. ಬಲರಾಮ ದ್ವಾರದ ಮೂಲಕ ಹೊರಟ ಸವಾರಿಯು ಚಾಮರಾಜೇಂದ್ರ ವೃತ್ತ, ಕೆ.ಆರ್.ವೃತ್ತ, ಸಯ್ಯಜಿರಾವ್ ರಸ್ತೆ, ಆಯುರ್ವೇದ ವಿದ್ಯಾಲಯ, ಬಂಬೂಬಜಾರ್, ಹೈವೇ ವೃತ್ತ, ನೆಲ್ಸನ್ ಮಂಡೇಲಾ ರಸ್ತೆಯಲ್ಲಿ ಹಾದು ಅಂದಾಜು 5 ಕಿಲೋಮೀಟರ್ ಮಾರ್ಗ ಕ್ರಮಿಸಿ ಸಂಜೆ 6.50ಕ್ಕೆ ಸುಗಮವಾಗಿ ಬನ್ನಿಮಂಟಪ ತಲುಪಿತು. ಈ ಯಾನಕ್ಕೆ 2.10 ಗಂಟೆ ತೆಗೆದುಕೊಂಡಿತು.

60 ಸ್ತಬ್ಧಚಿತ್ರಗಳ ಆಕರ್ಷಣೆ:

ಕರುನಾಡಿನ ಸಂಸ್ಕೃತಿ ಬಿಂಬಿಸುವ 60 ಜಿಲ್ಲೆಗಳ ಸ್ತಬ್ಧಚಿತ್ರಗಳು ಜನಸಮೂಹವನ್ನು ಆಕರ್ಷಿಸಿದವು. ಇದೇ ಮೊದಲ ಬಾರಿಗೆ ಕೇಂದ್ರ ಸರ್ಕಾರದ ಅಧೀನದ ಎಚ್‌ಎಎಲ್ ಯುದ್ಧ ವಿಮಾನ ‘ತೇಜಸ್’, ರಾಷ್ಟ್ರದ ಹೆಮ್ಮೆಯಾಗಿರುವ ಬೆಮೆಲ್‌ನ ‘ಆಕಾಶ’ ಕ್ಷೀಪಣಿ, ಭಾರತೀಯ ರೈಲ್ವೆಯ ಪ್ರಪಂಚದ ಅತಿ ಎತ್ತರ ರೈಲು ಸೇತುವೆ ಸ್ತಬ್ಧಚಿತ್ರ ರೋಚಕ ಎನಿಸಿತು. ಗಾಂಧಿ ಜಯಂತಿ ದಿನವೇ ಮೆರವಣಿಗೆ ನಡೆದ ಕಾರಣಕ್ಕೆ ಬಾಪು ಸ್ಮರಿಸಲಾಯಿತು.

ರಾಜಬೀದಿಯಲ್ಲಿ ಕಲಾವೈಭವ: ನಾಡಿನ ಕಲಾವೈಭವ, ಶ್ರೀಮಂತಿಕೆ ಸಹ ಮೇಳೈಸಿತು. 259 ಮಹಿಳೆಯರು ಸೇರಿದಂತೆ 1,479 ಕಲಾವಿದರು ತಮ್ಮ ಕಲೆಯನ್ನು ಸಹಸ್ರಾರು ಜನರ ಎದುರು ತೆರೆದಿಟ್ಟು ಮನಗೆದ್ದರು. ವಿವಿಧ ರಾಜ್ಯಗಳ ಕಲಾ ತಂಡಗೊಂದಿಗೆ 61 ತಂಡಗಳು ಭಾಗವಹಿಸಿ ದಸರೆಗೆ ಮೆರುಗು ತಂದುಕೊಟ್ಟವು.

ಚಕಿತಗೊಳಿಸಿದ ಪಂಜಿನ ಕವಾಯುತು:

ಬನ್ನಿಮಂಟಪದಲ್ಲಿ ಸಂಜೆ ಆಯೋಜಿಸಿದ್ದ ಪಂಜಿನ ಕವಾಯತು ಮೈನವಿರೇಳಿಸಿತು. ನುರಿತ ಸಾಹಸ ಪ್ರದರ್ಶನಕಾರರು ತಮ್ಮ ಅನುಭವ ಹಾಗೂ ಪ್ರತಿಭೆ ಧಾರೆ ಎರೆಯುವ ಮೂಲಕ ಕಿಕ್ಕಿರಿದು ತುಂಬಿದ್ದ ಜನ ಸಮೂಹಕ್ಕೆ ಅಚ್ಚರಿಗೊಳಿಸಿದರು.

ವಿವಿಧ ತಂಡಗಳ ಆಕರ್ಷಕ ಪರೇಡ್, ಮುದ ನೀಡಿದ ಪೊಲೀಸ್ ಬ್ಯಾಂಡ್‌ನ ಹಿಮ್ಮೇಳ ಸೊಬಗು ನೀಡಿದರೆ, ಅಶ್ವಾರೋಹಿ ಪಡೆಯು ಪ್ರದರ್ಶಿಸಿದ ‘ಟೆಂಟ್ ಪೆಗ್ಗಿಂಗ್’ ಸೇರಿದಂತೆ ವಿವಿಧ ಸಾಹಸಗಳು ಚಕಿತಗೊಳಿಸಿದವು. ಈ ಸಲ ಬೈಕ್ ರೇಡಿಂಗ್ ಸಾಹಸ ಇರದಿರುವುದು ನಿರಾಸೆ ಮೂಡಿಸಿತು.

ಅಂತಿಮವಾಗಿ ಅಂದಾಜು 300 ಪೊಲೀಸರು ಕಂದೀಲನ್ನು ಹಿಡಿದು ಪಂಜಿನ ಕವಾಯತು ರಂಜಿಸುವುದರೊಂದಿಗೆ ಅಪರೂಪದ ವೃದ್ಧಿ ದಸರೆಗೂ ತೆರೆ ಎಳೆಯಿತು.

50 ನಿಮಿಷದಲ್ಲೇ ಚಿಮ್ಮಿದ ರಕ್ತ

ಸಂಪ್ರದಾಯದಂತೆ ಅರಮನೆಯೊಳಗೆ ಬೆಳಗ್ಗೆ ನಡೆದ ಪಾರಂಪರಿಕ ವಜ್ರಮುಷ್ಟಿ ಸಮರ ನೆರೆದವರನ್ನು ರೋಮಾಂಚನಗೊಳಿಸಿತು.

ರಾಜವಂಶಸ್ಥ ಯದುವೀರ್ ಪಟ್ಟದ ಕತ್ತಿಗೆ ಪೂಜೆ ಸಲ್ಲಿಸಿದ ಕೂಡಲೇ ನಾಲ್ವರು ಜಟ್ಟಿಗಳು ವಜ್ರನಖ ಎಂಬ ಹರಿತವಾದ ಆಯುಧ ಧರಿಸಿ ಕಾದಾಡಿದರು. ಅಖಾಡದಲ್ಲಿ ಕೆಲವೇ 50 ನಿಮಿಷದಲ್ಲೇ ರಕ್ತ ಚಿಮ್ಮುವುದರೊಂದಿಗೆ ಕಾದಾಟ ವಿರೋಚಿತವಾಗಿ ಕೊನೆಗೊಂಡಿತು.