ಜಿಲ್ಲೆ

ಹೃದ್ರೋಗಿಗಳ ಸಂಖ್ಯೆ ಹೆಚ್ಚಳ: ಡಾ.ಸಿ.ಎನ್.ಮಂಜುನಾಥ್ ಕಳವಳ

reportermys

ಮೈಸೂರು: ಹೃದ್ರೋಗ, ಕ್ಯಾನ್ಸರ್, ಪಾರ್ಶ್ವವಾಯು, ಮಧುಮೇಹ ರೋಗಗಳು ಚಿಕ್ಕ ವಯಸ್ಸಿನವರಲ್ಲಿ ಕಾಣಿಸಿಕೊಳ್ಳುವ ಪ್ರಮಾಣ ಅಧಿಕವಾಗಿದೆ. ಇದರಿಂದಲೇ ಶೇ.50ರಷ್ಟು ಸಾವುಗಳು ಆಗುತ್ತಿದೆ ಎಂದು ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಕಳವಳ ವ್ಯಕ್ತಪಡಿಸಿದರು.

ಮೈಸೂರು ವಿಶ್ವವಿದ್ಯಾಲಯದ ಜೆನೆಟಿಕ್ಸ್ ಅಂಡ್ ಜಿನೋಮಿಕ್ಸ್ ಅಧ್ಯಯನ ವಿಭಾಗದಿಂದ ಮಾನಸ ಗಂಗೋತ್ರಿಯ ವಿಜ್ಞಾನ ಭವನದಲ್ಲಿ ಗುರುವಾರ ಏರ್ಪಡಿಸಿದ್ದ ಆಯೋಜಿಸಿದ್ದ ಟ್ರಾನ್ಸಲೇಷನ್ ರಿಸರ್ಚ್ ಕುರಿತು ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಅವರು ಮಾತನಾಡಿದರು

ಜಯದೇವ ಆಸ್ಪತ್ರೆಯಲ್ಲಿ 5 ವರ್ಷಗಳಲ್ಲಿ 6 ಸಾವಿರ ಜನ 16ರಿಂದ 45 ವರ್ಷದವರು ಚಿಕಿತ್ಸೆ ಪಡೆದಿದ್ದಾರೆ. ಇವರೆಲ್ಲರೂ ಹೃದ್ರೋಗದ ಸಮಸ್ಯೆಗೆ ಒಳಗಾದವರವರು ಎಂದರು. ಈ ಹಿಂದೆ 65 ವರ್ಷದ ನಂತರ ಹೃದಯ ಸಂಬಂಧಿ ಸಮಸ್ಯೆ ಕಾಣಿಸಿಕೊಳ್ಳುತ್ತಿತ್ತು. ಜೀವನಶೈಲಿ ಬದಲಾವಣೆಯಿಂದಾಗಿ 45 ವರ್ಷ ವಯಸ್ಸಿನವರಲ್ಲೇ ಈ ಸಮಸ್ಯೆ ಬರುತ್ತಿದೆ. ಇದನ್ನು ಗಂಭೀರವಾಗಿ ಪರಿಗಣಿಸಬೇಕು. 20 ಲಕ್ಷ ಜನ ವಾಯುಮಾಲಿನ್ಯದಿಂದ ಮೃತಪಟ್ಟಿದ್ದಾರೆ ಎಂದು ವರದಿಯೊಂದು ಹೇಳಿದೆ. ವಾಯುಮಾಲಿನ್ಯವು ಶ್ವಾಸಕೋಶದ ಸಮಸ್ಯೆದೊಂದಿಗೆ ಹೃದ್ರೋಗಕ್ಕೂ ಕಾರಣವಾಗುತ್ತಿದೆ ಎಂದು ಹೇಳಿದರು.

ದೇಶದಲ್ಲಿ ಸಂಭವಿಸುತ್ತಿರುವ ಶೇ.30ರಷ್ಟು ಸಾವುಗಳು ಹೃದಯಾಘಾತಕ್ಕೆ ಸಂಬಂಧಿಸಿದವಾಗಿವೆ. ಇದರಲ್ಲಿ ಶೇ.30ರಷ್ಟು ಜನರು ಧೂಮಪಾನ, ಮಧುಮೇಹ, ಬೊಜ್ಜು ಇಲ್ಲದಿದ್ದರೂ ರಿಸ್ಕ್ ಫ್ಯಾಕ್ಟರ್‌ನಿಂದ ಹೃದಯಾಘಾತಕ್ಕೆ ಒಳಗಾಗುತ್ತಿದ್ದಾರೆ. ಈ ಬಗ್ಗೆ ಹೆಚ್ಚು ಸಂಶೋಧನೆ ನಡೆಯಬೇಕಾಗುತ್ತದೆ ಎಂದರು.

ತಡವಾಗಿ ಮದುವೆಯಾಗುವುದು ಹಾಗೂ ಮಕ್ಕಳು ಮಾಡಿಕೊಳ್ಳುವುದು ಕೂಡ ಹಲವು ಕಾಯಿಲೆಗಳಿಗೆ ಕಾರಣವಾಗುತ್ತದೆ. ಹಿಂದೆ ಮದುವೆ ಮಾಡುವಾಗ ಜಾತಕ ನೋಡುತ್ತಿದ್ದರು. ಈಗ ಅನುವಂಶಿಕ ಜಾತಕವನ್ನು ನೋಡಲಾಗುತ್ತಿದೆ. ಬಾಳ ಸಂಗಾತಿಯಾಗುವವರ ಹೃದಯ ಆರೋಗ್ಯವಂತವಾಗಿದೆಯೇ ಎಂದು ತಿಳಿದುಕೊಳ್ಳುವುದು ವಿದೇಶಗಳಲ್ಲಿ ಚಾಲ್ತಿಯಲ್ಲಿದೆ. ಆರೋಗ್ಯಕರ ಜೀವನ ಶೈಲಿ ಅನುಸರಿಸಿದರೆ ಹಲವು ಸಮಸ್ಯೆಗಳಿಂದ ದೂರವಿರಬಹುದು ಎಂದು ತಿಳಿಸಿದರು.
ಜೀವನಮಟ್ಟ ಸುಧಾರಿಸುವಲ್ಲಿ ಸಂಶೋಧನೆಯ ಪಾತ್ರ ಮಹತ್ವದ್ದಾಗಿದೆ. ಈ ಕ್ಷೇತ್ರಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹೆಚ್ಚಿನ ಪ್ರಮಾಣದಲ್ಲಿ ಅನುದಾನ ಒದಗಿಸಬೇಕು. ಹಿಂದಕ್ಕೆ ಹೋಲಿಸಿದರೆ, ಈಗ ಅನುದಾನ ಬಹಳ ಕಡಿಮೆ ಆಗಿದೆ ಎಂದರು.

ಶಿಕ್ಷಣ ವ್ಯವಸ್ಥೆ ಬದಲಾಗಲಿ:
ಪ್ರಸ್ತುತ ಜೀವನಶೈಲಿ ಮತ್ತು ಆಹಾರ ಸಂಸ್ಕೃತಿ ಬದಲಾಗುತ್ತಿದೆ. ಎಲ್ಲರೂ ಒತ್ತಡಕ್ಕೆ ಒಳಗಾಗಿದ್ದಾರೆ. ಚಿಣ್ಣರ ಮೇಲೂ ಬಹಳಷ್ಟು ಒತ್ತಡವಿದೆ. ಇದನ್ನು ಹೋಗಲಾಡಿಸಲು ಶಿಕ್ಷಣ ವ್ಯವಸ್ಥೆಯಲ್ಲಿ ಪರಿವರ್ತನೆ ಆಗಬೇಕು. ಶಾಲೆಯು ಬೆಳಗ್ಗೆ 10ಕ್ಕೆ ಶುರುವಾಗಿ 12ಕ್ಕೆ ಮುಗಿಯುವಂತಿರಬೇಕು. ವಾರದಲ್ಲಿ ನಾಲ್ಕು ದಿನಗಳಷ್ಟೇ ಶಾಲೆ ಇರಬೇಕು ಎಂದು ಸಲಹೆ ನೀಡಿದರು.

ಮೈಸೂರು ವಿ.ವಿ ಕುಲಪತಿ ಪ್ರೊ.ಜಿ.ಹೇಮಂತ್‌ಕುಮಾರ್ ಮಾತನಾಡಿ, ಹೊಸ ಔಷಧಗಳು ಮತ್ತು ಚಿಕಿತ್ಸೆಗಳ ಅನ್ವೇಷಣೆಗೆ ಎಚ್ಚರಿಕೆಯ ವೈಜ್ಞಾನಿಕ ಪ್ರಯೋಗ, ಅಭಿವೃದ್ಧಿ ಮತ್ತು ಮೌಲ್ಯಮಾಪನದ ಅಗತ್ಯವಿದೆ ಎಂದರು

ಭಾರತೀಯ ವೈದ್ಯಕೀಯ ಮತ್ತು ಸಂಶೋಧನಾ ಮಂಡಳಿಯ ಮಾರ್ಗಸೂಚಿಗಳನ್ನು ರೂಪಿಸುವಾಗ ಶಿಕ್ಷಣ ಮತ್ತು ವೈದ್ಯಕೀಯ ವಿಜ್ಞಾನಗಳ ನಡುವಿನ ಸಂಬಂಧವನ್ನು ತಿಳಿಸುತ್ತದೆ. ಆದ್ದರಿಂದ ನಾವು ಶಿಕ್ಷಣ ಮತ್ತು ವೈದ್ಯಕೀಯ ವಿಜ್ಞಾನಗಳ ನಡುವೆ ಸಂವಹನ ಹುಡುಕುವುದು ಸೂಕ್ತವಾಗಿದೆ. ಹೊಸ ಔಷಧ ಮತ್ತು ಚಿಕಿತ್ಸೆಗಳ ಅನ್ವೇಷಣೆಗೆ ಎಚ್ಚರಿಕೆಯ ವೈಜ್ಞಾನಿಕ ಪ್ರಯೋಗ, ಅಭಿವೃದ್ಧಿ ಮತ್ತು ಮೌಲ್ಯಮಾಪನದ ಅಗತ್ಯವಿದೆ ಎಂದು ಹೇಳಿದರು.

ಆಮ್‌ಸ್ಟರ್‌ಡ್ಯಾಮ್ ಯೂನಿವರ್ಸಿಟಿ ಮೆಡಿಕಲ್ ಸೆಂಟರ್‌ನ ಡಾ.ಹರಿ ಎಸ್.ಶರ್ಮಾ, ನಿವೃತ್ತ ಕುಲಪತಿ ಪ್ರೊ. ಕೆ.ಎಸ್.ರಂಗಪ್ಪ, ಜೆನೆಟಿಕ್ಸ್ ಅಧ್ಯಯನ ವಿಭಾಗದ ಮುಖ್ಯಸ್ಥೆ ಪ್ರೊ.ಎಸ್.ಎಸ್.ಮಾಲಿನಿ ಇದ್ದರು.