ಹಾಸನ: ಅಂತಿಮ ವರ್ಷದ ಪದವಿ ತರಗತಿ ಓದುತ್ತಿದ್ದ ವಿದ್ಯಾರ್ಥಿನಿ ಹೃದಯಾಘಾತದಿಂದ ಗುರುವಾರ ಮೃತ ಪಟ್ಟಿದ್ದಾರೆ.
ತಾಲೂಕಿನ ಕೆಲವತ್ತಿ ಗ್ರಾಮದ ಕೆ.ವಿ. ಕವನಾ. (21) ಹೃದಯಾಘಾತದಿಂದ ಸಾವನ್ನಪ್ಪಿದ ವಿದ್ಯಾರ್ಥಿನಿ. ಗ್ರಾಮದ ಪಾಪಣ್ಣ-ಗಾಯತ್ರಿ ದಂಪತಿ ಪುತ್ರಿಯಾದ ಕವನಾ ಹಾಸನ ನಗರದ ಎಂ.ಜಿ.ರಸ್ತೆಯಲ್ಲಿರುವ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತಿಮ ವರ್ಷದ ಬಿ.ಕಾಂ. ಓದುತ್ತಿದ್ದಳು.
ಈಗಾಗಲೇ ಮೂರು ವಿಷಯಗಳ ಪರೀಕ್ಷೆ ಬರೆದಿದ್ದ ಕವನಾ ಇನ್ನೂ ಮೂರು ವಿಷಯಗಳ ಎಕ್ಸಾಂಗಳನ್ನು ಬರೆಯಬೇಕಿತ್ತು. ಗುರುವಾರ ಸಂಜೆ ಮನೆಗೆ ನೀರು ತರುತ್ತಿದ್ದ ವೇಳೆ ಎದೆನೋವು ಕಾಣಿಸಿಕೊಂಡಿದ್ದು, ತಾಯಿ ಬಳಿ ಕುಡಿಯಲು ನೀರು ಕೇಳಿದ್ದಾಳೆ. ತಾಯಿ ನೀರು ತಂದು ಕೊಡುವಷ್ಟರಲ್ಲಿ ಮನೆಯಲ್ಲಿಯೇ ಕುಸಿದು ಬಿದ್ದಳು. ಕೂಡಲೇ ಕವನಾಳನ್ನು ಹಾಸನದ ಖಾಸಗಿ ಆಸ್ಪತ್ರೆಗೆ ಪೋಷಕರು ಕರೆತಂದರಾದರೂ, ಅಷ್ಟರಲ್ಲಾಗಲೇ ಹೃದಯಾಘಾತದಿಂದ ಕವನಾ ಕೊನೆಯುಸಿರೆಳೆದಿದ್ದಳು. ಬಾಳಿ ಬದುಕಬೇಕಾದ ಕವನಾ ಪ್ರೌಢಾವಸ್ಥೆಯಲ್ಲೇ ಇಲ್ಲವಾಗಿರುವುದನ್ನು ಕಂಡು ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.
ಸಹಪಾಠಿಗಳು ಹಾಗೂ ಕಾಲೇಜು ಉಪನ್ಯಾಸಕ ವರ್ಗದವರು ಕಂಬನಿ ಮಿಡಿದರು.