ಜಿಲ್ಲೆ

ಹೂವು, ತರಕಾರಿ ಬೆಳೆನಷ್ಟಕ್ಕೆ ಪರಿಹಾರ ಕಲ್ಪಿಸಿ

ಕೋಲಾರ: ಲಾಕ್‌ಡೌನ್ ಸಮಯದಲ್ಲಿ ಹೂ ಮತ್ತು ತರಕಾರಿ ಬೆಳೆಗಳಿಗೆ ಸರ್ಕಾರ ಘೋಷಿಸಿದ್ದ ಪರಿಹಾರ ಪಡೆಯಲು ಬೆಳೆ ಸಮೀಕ್ಷೆ ಹೊರತುಪಡಿಸಿ ಅರ್ಜಿ ಸಲ್ಲಿಸಿದ್ದ ರೈತರಿಗೆ ಪರಿಹಾರ ಒದಗಿಸಬೇಕು ಹಾಗೂ ಸಬ್ಸಿಡಿ ದರದಲ್ಲಿ ಆಲೂಗಡ್ಡೆ ಬಿತ್ತನೆ ಬೀಜ ನೀಡಿ ಖಾಸಗಿ ದಂಧೆಗೆ ಕಡಿವಾಣ ಹಾಕಬೇಕೆಂದು ರೈತಸಂಘದಿಂದ ತೋಟಗಾರಿಕೆ ಇಲಾಖೆ ಮುಂಭಾಗ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ಲಾಕ್‌ಡೌನ್ ಸಮಯದಲ್ಲಿ ಹೂ ಮತ್ತು ತರಕಾರಿ ಬೆಳೆಗಾರರು ಸಾಕಷ್ಟು ನಷ್ಟ ಅನುಭವಿಸಿದ್ದರಿಂದ ಸರ್ಕಾರ ಹೂ ಬೆಳೆ ಪ್ರತಿ ಹೆಕ್ಟೇರ್‌ಗೆ 25,000 ರೂ. ಹಾಗೂ ಇನ್ನಿತರ ವಾಣಿಜ್ಯ ಬೆಳೆಗಳಿಗೆ ಪರಿಹಾರ ಘೋಷಿಸಿತ್ತು. ಆದರೆ ಬೆಳೆ ಸಮೀಕ್ಷೆ ಆಗಿರುವವರಿಗೆ ಮಾತ್ರ ಪರಿಹಾರ ಬಂದಿದೆ. ರೈತರೇ ಹೋಗಿ ಅರ್ಜಿ ಸಲ್ಲಿಸಿದ್ದ ಬೆಳೆಗಳಿಗೆ ಯಾವುದೇ ಪರಿಹಾರ ನೀಡಿಲ್ಲ. ಈ ಬಗ್ಗೆ ಕ್ರಮ ವಹಿಸಿ ಪರಿಹಾ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ಜಿಲ್ಲಾಧ್ಯಕ್ಷ ಮರಗಲ್ ಶ್ರೀನಿವಾಸ್ ಮಾತನಾಡಿ, ಆಲೂಗಡ್ಡೆ ಬಿತ್ತನೆ ಬೀಜ ಖಾಸಗಿ ಮಾರಾಟಗಾರರು ತಮಗಿಷ್ಟ ಬಂದಂತೆ ಮೂಟೆಗೆ 4000ರಿಂದ 4,500 ರೂ. ನಿಗದಿಮಾಡಿದ್ದು, ದುಬಾರಿಯಾಗಿ ಪರಿಣಮಿಸಿದೆ. ಇದಕ್ಕೆ ಕಡಿವಾಣ ಹಾಕುವ ಜತೆಗೆ ಬಿತ್ತನೆ ಬೀಜವನ್ನು ಸಬ್ಸಿಡಿ ದರದಲ್ಲಿ ನೀಡಬೇಕು ಎಂದರು.

ಉಪನಿರ್ದೇಶಕಿ ಎಂ. ಗಾಯತ್ರಿ ಮನವಿ ಸ್ವೀಕರಿಸಿ ಮಾತನಾಡಿ, ಅರ್ಜಿ ಸಲ್ಲಿಸಿರುವ ಹೂ ಬೆಳೆಗಾರರಿಗೆ 15-20 ದಿನಗಳಲ್ಲಿ ಹಣ ಬಿಡುಗಡೆಯಾಗುವ ನಿರೀಕ್ಷೆಯಿದೆ. ಆಲೂಗಡ್ಡೆ ರೈತರಿಗೆ ಜಾಗೃತಿ ಮೂಡಿಸಿ, ವ್ಯಾಪಾರಸ್ಥರು ಮತ್ತು ರೈತರ ಸಭೆ ಕರೆದು ಸಮಸ್ಯೆ ಬಗೆಹರಿಸಲಾಗುವುದು ಎಂದರು.

ಮಹಿಳಾ ಘಟಕ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ, ವಿ. ನಳಿನಿ, ಮುಖಂಡರಾದ ಈಕಂಬಳ್ಳಿ ಮಂಜುನಾಥ್, ಐತಾಂಡಹಳ್ಳಿ ಮಂಜುನಾಥ್, ಮಂಗಸಂದ್ರ ನಾಗೇಶ್, ತಿಮ್ಮಣ್ಣ, ವೆಂಕಟೇಶಪ್ಪ, ವಕ್ಕಲೇರಿ ಹನುಮಯ್ಯ, ನವೀನ್, ಸುಪ್ರೀಂಚಲ, ಜಗದೀಶ್, ಅನಿಲ್, ಸಾಗರ್, ರಾಮಣ್ಣ ಇತರರು ಇದ್ದರು.