ಮಂಜುನಾಥ ಟಿ.ಭೋವಿ ಮೈಸೂರು
ತಂಗಾಳಿಯ ತಂಪು, ಹೂವಿನ ಕಂಪು, ಸಂಗೀತದ ಇಂಪು…!
ಸೂರ್ಯಾಸ್ತದ ಬಳಿಕ ಅರಮನೆ ಅಂಗಳದಲ್ಲಿ ಒಂದು ಸುತ್ತು ಹಾಕಿದರೆ ಈ ರೀತಿಯ ಅನುಭವ ಆಗುತ್ತದೆ. ಇಂತಹದೊಂದು ಹಿತ ಅನುಭವ ಆಸ್ವಾದಿಸಲು ಸಾರ್ವಜನಿಕರು ಇಲ್ಲಿಗೆ ಒಮ್ಮೆ ಭೇಟಿ ನೀಡಬಹುದು.
ನಾಡಹಬ್ಬ ದಸರಾ ಸಂದರ್ಭದಲ್ಲಿ ಅರಮನೆ ಆವರಣದಲ್ಲಿ ಮೊದಲ ಬಾರಿಗೆ ಆಯೋಜಿಸಿರುವ ಫಲಪುಷ್ಟ ಪ್ರದರ್ಶನಕ್ಕೆ ಹೂವಿನ ಪ್ರಿಯರು ಮನಸೋತಿದ್ದಾರೆ.
ಹೂವಿನ ಅಂದ ನಿನಗೇ ಚಂದ..: ಆಸೆಯ ತುಂಬಿ ಹೂವರಳಿರಲು/ ಹೂವನು ಕಂಡು ನೀ ಕೆರಳಿರಲು/ ಹೂವಿನ ಅಂದ ನಿನಗೇ ಚಂದ/ ಮಧು ಮಕರಂದ ನಿನಗಾನಂದ/ ಒಲಿಸುವ ರಾಗವ ನೀ ಉಲಿ ಉಲಿದು/ ಏನನು ಬಯಸುತಿಹೆ ನೀ… ಈ ಹಾಡಿನ ಭಾವದಂತೆ ಯುವ ಪ್ರೇಮಿಗಳು ಕೈ ಕೈ ಹಿಡಿದು ಇಲ್ಲಿ ಸುತ್ತಾಡಿದಂತೆ ಭಾಸವಾಗುತ್ತದೆ. 1978ರಲ್ಲಿ ಬಿಡುಗಡೆಯಾದ ‘ಹೊಂಬಿಸಿಲು’ ಚಿತ್ರದ ಗೀತಪ್ರಿಯ ರಚನೆಯ ‘ಹೂವಿಂದ ಹೂವಿಗೆ ಹಾರುವ ದುಂಬಿ/ ಏನನು ಹಾಡುತಿಹೆ/ ನೀ… ಏನನು ಹಾಡುತಿಹೆ…’ ಎಂಬ ಹಾಡು ಇಲ್ಲಿ ಗುನುಗಿದಂತೆ ಅನಿಸುತ್ತಿದೆ.
ಮಕರಂದ ಹೀರಲು ಲಗ್ಗೆ:
ದಸರಾದಲ್ಲಿ ಸಂಜೆ ಹೊತ್ತಿನಲ್ಲಿ ನಾಲ್ಕು ಕಡೆ ಹೆಚ್ಚು ಜನರು ಸೇರುತ್ತಾರೆ. ಯುವ ದಸರಾ, ಆಹಾರ ಮೇಳ ಮತ್ತು ಕುಪ್ಪಣ್ಣ ಉದ್ಯಾನದಲ್ಲಿ ಫಲಪುಷ್ಟ ಪ್ರದರ್ಶನ. ಅಂತೆಯೆ, ಅರಮನೆಯ ಫಲಪುಷ್ಪ ಪ್ರದರ್ಶನವೂ ಹೆಚ್ಚಿನ ಜನರನ್ನು ಆಕರ್ಷಿಸುತ್ತಿದೆ. ಸಂಜೆ ಆಗುತ್ತಿದ್ದಂತೆ ಹೂವಿನ ಪ್ರಿಯರ ದಂಡು ಇಲ್ಲಿಗೆ ಮಕರಂದ ಹೀರಲು ಲಗ್ಗೆ ಇಡುತ್ತಿದ್ದಾರೆ. ಇಲ್ಲಿಯೇ ಕೂಗಳತೆಯಲ್ಲಿರುವ ವೇದಿಕೆಯಲ್ಲಿ ನಿತ್ಯ ಸಂಜೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹೊರಹೊಮ್ಮುವ ಸಂಗೀತ ನಿನಾದ ಆಲಿಸುತ್ತ, ಹೂವುಗಳ ಸೌಂದರ್ಯವನ್ನು ಕಣ್ತುಂಬಿಕೊಳ್ಳುತ್ತ, ಸೆಲ್ಫಿ ತೆಗೆದುಕೊಳ್ಳುವ ಸಾಮಾನ್ಯ ದೃಶ್ಯವನ್ನು ಇಲ್ಲಿ ಕಾಣಬಹುದಾಗಿದೆ.
ಕೆಂಪು ಕೋಟೆ ಮುಂದೆ ಸೆಲ್ಫಿ ದಂಡು:
ದೆಹಲಿಯ ಕೆಂಪುಕೋಟೆ ಹೂವಿನಲ್ಲಿ ಅರಳಿದೆ. ಇದುವೇ ಪ್ರಮುಖ ಆಕರ್ಷಣೆ. ಇದರೊಂದಿಗೆ, ಫೋಟೋ ತೆಗೆಸಿಕೊಳ್ಳಲು ಜನರು ಮುಗಿಬೀಳುತ್ತಿದ್ದಾರೆ. ಹಾಗೆಯೇ ಮುಂದೆ ಹೋದರೆ ಸುಭಾಷ್‌ಚಂದ್ರ ಬೋಸ್ ಅವರ ಹೂವಿನ ಪ್ರತಿಮೆ ದರ್ಶನವಾಗುತ್ತದೆ. ಇದರ ಜತೆಗೆ ಕಳೆದ ತಿಂಗಳಷ್ಟೇ ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಿದ ಸ್ವದೇಶಿ ನಿರ್ಮಿತ ‘ಐಎನ್‌ಎಸ್ ವಿಕ್ರಾಂತ್ ವಿಮಾನ ವಾಹಕ ನೌಕೆ’ಯ ಪ್ರತಿಕೃತಿ ದೇಶದ ಸಾಧನೆ ಪರಿಚಯಿಸುತ್ತದೆ.
ಸೆಲ್ಫಿ ತೆಗೆಸಿಕೊಳ್ಳಲು ಬನ್ನಿ:
ಇದಿಷ್ಟೇ ಅಲ್ಲದೆ ನಾಲ್ವಡಿ ಕೃಷ್ಣರಾಜ ಒಡೆಯರ್, ಜಯಚಾಮರಾಜ ಒಡೆಯರ್ ಪ್ರತಿಕೃತಿಗಳು ಕಣ್ಮನ ಸೆಳೆಯುತ್ತಿವೆ. ಸಿಡಿಎಸ್ ಜನರಲ್ ಬಿಪಿನ್ ರಾವತ್ ಪ್ರತಿಮೆ ನೋಡಿದ ಜನರು ಹೆಲಿಕಾಪ್ಟರ್ ದುರಂತವನ್ನು ನೆನಪಿಸಿಕೊಂಡು ಮನದಲ್ಲಿ ನಮನ ಅರ್ಪಿಸುತ್ತಾರೆ. ವಿಂಗ್ ಕಮಾಂಡರ್ ಅಭಿಮಾನ್ ವರ್ಧಮಾನ್ ಪ್ರತಿಮೆ ಅವರ ಸಾಹಸವನ್ನು ಪರಿಚಯಿಸುತ್ತದೆ. ಜತೆಗೆ ಇಲ್ಲಿರುವ ದಸರಾ ಜಂಬೂ ಸವಾರಿ ಮೆರವಣಿಗೆ ಹೂವಿನ ಮಾದರಿ ಸೆಲ್ಫಿ ತೆಗೆಸಿಕೊಳ್ಳಲು ಕೈಬೀಸಿ ಕರೆಯುತ್ತಿದೆ. ಗಮನ ಸೆಳೆಯುವ ಹೂವಿನಿಂದ ಅಲಂಕೃತ ನಟ ಪುನೀತ್‌ರಾಜ್‌ಕುಮಾರ್ ಭಾವಚಿತ್ರಕ್ಕೆ ನಮನ ಸಲ್ಲಿಸಿ ಜನರು ಮುಂದಕ್ಕೆ ಸಾಗುತ್ತಾರೆ.
ಬೆಳಕಿನ ಹೂವುಗಳ ಗುಚ್ಛ:
ಮೆರಿಗೋಲ್ಡ್, ಸಾಲ್ವಿಯ, ಡೇಲಿಯ, ಪಿಟೋನಿಯ, ಸೇವಂತಿಗೆ, ಕೋಲಿಯಸ್, ಸಿಲೋಷಿಯಾ ಸೇರಿದಂತೆ 32 ಜಾತಿಯ ಹೂಗಳಿರುವ 15 ಸಾವಿರ ಅಲಂಕಾರಿಕ ಹೂವುಗಳು ಪ್ರದರ್ಶನಕ್ಕೆ ಮೆರುಗು ತಂದುಕೊಟ್ಟಿವೆ. ಜತೆಗೆ ಗುಲಾಬಿ, ಜರ್ಬೆರಾ, ಆರ್ಕಿಡ್ಸ್, ಬ್ಲೂ ಡೈಸಿ, ಕ್ರೈಸಾಂಥಿಮಮ್, ಡ್ರೆಸಿನಾ ಸೇರಿದಂತೆ 15ಕ್ಕೂ ಹೆಚ್ಚು ವಿವಿಧ ಜಾತಿಯ 4 ಲಕ್ಷ ಹೂವುಗಳನ್ನು ಫಲಪುಷ್ಪ ಪ್ರದರ್ಶನದಲ್ಲಿ ಬಳಕೆ ಮಾಡಲಾಗಿದೆ. ಪ್ರೇಮದ ಸಂಕೇತ ‘ಹೃದಯ’ ಇಲ್ಲಿ ಸೆಲ್ಫಿ ಪಾಯಿಂಟ್ ಆಗಿದೆ. ಇದನ್ನು ನೋಡಿದ ತಕ್ಷಣ ಒಂದು ಫೋಟೋ ತೆಗೆದುಕೊಳ್ಳುವಂತೆ ವೀಕ್ಷಕರ ಮನಸ್ಸನ್ನು ಉದ್ದೀಪನಗೊಳಿಸುತ್ತದೆ. ಜತೆಗೆ, ಮರದಲ್ಲಿ ಅರಳಿರುವ ಬೆಳಕಿನ ಹೂವುಗಳ ಗುಚ್ಛ ಕೂಡ ಇಲ್ಲಿ ನೋಡಬಹುದು.
ಬೊಂಬೆಗಳ ಪ್ರದರ್ಶನ:
ಅಪರೂಪದ ಛಾಯಾಚಿತ್ರ ಪ್ರದರ್ಶನ ಮತ್ತು ವಿಡಿಯೋ ಪ್ರದರ್ಶನವೂ ಇಲ್ಲಿದೆ. ರಾಜವಂಶಸ್ಥರ ಅಪರೂಪದ ಚಿತ್ರಗಳನ್ನು ವೀಕ್ಷಿಸಬಹುದು. ಜತೆಗೆ, ದಸರಾ ಉತ್ಸವದಲ್ಲಿ ಪ್ರಮುಖ ಆಕರ್ಷಣೆಯಾದ ಬೊಂಬೆಗಳ ಪ್ರದರ್ಶನವೂ ಇದೆ. ಶ್ರೀ ದೇವಿ ದಿವ್ಯದರ್ಶನ, ಮಾನವನ ಜೀವನ ಕ್ರಮ, ಅರಮನೆಯಲ್ಲಿ ದುರ್ಗಾಪೂಜೆ, ವಿಷ್ಣು ಲೀಲೆ, ಸಾಂಸ್ಕೃತಿಕ ದಸರಾ ಬೊಂಬೆ ಹಾಗೂ ಕೃಷ್ಣನ ಲೀಲೆಯ ಬೊಂಬೆಗಳು ತಮ್ಮ ಚರಿತ್ರೆಯನ್ನು ಹೇಳುತ್ತಿವೆ.
ಅರಮನೆಗೆ ಭೇಟಿ ನೀಡುವ ಪ್ರವಾಸಿಗರು ಮತ್ತು ಸಾರ್ವಜನಿಕರಿಗೆ ಹೊಸ ಬಗೆಯ ವಾತಾವರಣವನ್ನು ಈ ಹೂವಿನ ಮೇಳ ನೀಡುತ್ತಿದೆ. ಇದನ್ನು ಆಸ್ವಾದಿಸಲು ಬೆಳಗ್ಗೆ 10ರಿಂದ ರಾತ್ರಿ 8.30ರವರೆಗೆ ಇಲ್ಲಿಗೆ ಭೇಟಿ ನೀಡಬಹುದು.