ಚಿಕ್ಕಬಳ್ಳಾಪುರ: ನಗರದ ಎಪಿಎಂಸಿ ಯಾರ್ಡಿಗೆ ತಾತ್ಕಾಲಿಕವಾಗಿ ಹೂವಿನ ಮಾರುಕಟ್ಟೆ ಸ್ಥಳಾಂತರಿಸಲು ರಾಜ್ಯ ಉಚ್ಚನ್ಯಾಯಾಲಯ ಆದೇಶ ಹೊರಡಿಸಿದೆ. ಹಲವು ಹೋರಾಟಗಳಿಗೆ ಎಡೆ ಮಾಡಿಕೊಟ್ಟಿದ್ದ ವಿವಾದಿತ ಪ್ರಕರಣವು ಇತ್ಯರ್ಥವಾಗುವುದರೊಂದಿಗೆ ಬೆಳೆಗಾರರ ಬೇಡಿಕೆಗೆ ಒಪ್ಪದೇ ಪಟ್ಟು ಹಿಡಿದಿದ್ದ ಜಿಲ್ಲಾಡಳಿತಕ್ಕೆ ಇದರಿಂದ ಮುಖಭಂಗವಾಗಿದೆ.
ಹೂವಿನ ಮಾರುಕಟ್ಟೆಯನ್ನು ಎಪಿಎಂಸಿ ಯಾರ್ಡಿಗೆ ಸ್ಥಳಾಂತರಿಸುವ ವಿಚಾರವು ಜಿಲ್ಲಾಡಳಿತ ಮತ್ತು ಹೂವು ಬೆಳೆಗಾರರು, ವರ್ತಕರ ನಡುವೆ ಸಮರಕ್ಕೆ ಕಾರಣವಾಗಿತ್ತು. ಇದರಿಂದ ಬೆಳೆಗಾರರು ರಾಜ್ಯ ಉಚ್ಚನ್ಯಾಯಾಲಯದಲ್ಲಿ ದಾವೆ ಹೂಡಿ, ಸಮಸ್ಯೆ ಬಗ್ಗೆ ಗಮನ ಸೆಳೆದಿದ್ದರು. ಇದರ ವಿಚಾರಣೆ ನಡೆಸಿದ ನ್ಯಾಯಾಧೀಶರು ರೈತರ ಮನವಿಗೆ ಮಾನ್ಯತೆಯ ಮುದ್ರೆ ಒತ್ತಿದ್ದಾರೆ.
ಕರೊನಾ ಸೋಂಕಿನ ಹಿನ್ನೆಲೆಯಲ್ಲಿ ಒಂದೆಡೆ ಜನಸಂದಣಿ ಸೇರುವುದನ್ನು ತಪ್ಪಿಸುವ ಉದ್ದೇಶದಿಂದ ಜಿಲ್ಲಾಡಳಿತವು ಹೂವಿನ ಮಾರುಕಟ್ಟೆಯನ್ನು ತಾತ್ಕಾಲಿಕವಾಗಿ ತಾಲೂಕಿನ ಚೊಕ್ಕಹಳ್ಳಿ ಕ್ರಾಸ್ ಸಮೀಪದ ಖಾಸಗಿ ಜಮೀನಿಗೆ 2020 ಮಾ.27ರಂದು ಸ್ಥಳಾಂತರಿಸಿತ್ತು. ಆದರೆ, ಯಾವುದೇ ಮೂಲಸೌಕರ್ಯ ಒದಗಿಸಿರಲಿಲ್ಲ. ಇದರ ನಡುವೆ ಕರೊನಾ ಸೋಂಕು ನಿಯಂತ್ರಣಕ್ಕೆ ಬಂದರೂ ಜಿಲ್ಲಾ ಕೇಂದ್ರದಲ್ಲಿನ ತರಕಾರಿ ಮಂಡಿಯನ್ನೊಳಗೊಂಡ ಎಪಿಎಂಸಿ ಮಾರುಕಟ್ಟೆಗೆ ಮರು ಸ್ಥಳಾಂತರ ಮಾಡಿಲ್ಲ. ಇದರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ, ಹೂವಿನ ಬೆಳೆಗಾರರು ಪ್ರತಿಭಟನೆ, ಮಾರುಕಟ್ಟೆಗೆ ಮುತ್ತಿಗೆ ಸೇರಿ ನಾನಾ ರೀತಿಯ ಹೋರಾಟ ನಡೆಸಿದ್ದರು. ಜತೆಗೆ ಅಧಿಕಾರಿಗಳ ಆದೇಶ ದಿಕ್ಕರಿಸಿ, ಎಪಿಎಂಸಿ ಮಾರುಕಟ್ಟೆಯಲ್ಲಿ ಹೂವಿನ ಮಂಡಿಗಳನ್ನು ತೆಗೆದು ವ್ಯಾಪಾರ ನಡೆಸುವುದಾಗಿ ಘೋಷಿಸಿದ್ದರು. ಇದಕ್ಕೆ ನಿಯಮ ಉಲ್ಲಂಸುವವರ ವಿರುದ್ಧ ವಿಪತ್ತು ನಿರ್ವಹಣೆ ಕಾಯ್ದೆಯಡಿ ಪ್ರಕರಣ ದಾಖಲಿಸಿ, ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಡಳಿತವೂ ಎಚ್ಚರಿಕೆ ನೀಡಿತ್ತು. ಇದರಿಂದ ಬೆಳೆಗಾರರು ನ್ಯಾಯಾಲಯದ ಮೆಟ್ಟಿಲೇರಿದ್ದರು.
ಅವ್ಯವಸ್ಥೆಯ ಆಗರಕ್ಕೆ ಹೋರಾಟ: ತಾಲೂಕಿನ ಚೊಕ್ಕಹಳ್ಳಿ ಕ್ರಾಸ್ ಸಮೀಪದ ತಾತ್ಕಾಲಿಕ ಕೃಷಿ ಉತ್ಪನ್ನಗಳ ಹೂವಿನ ಮಾರುಕಟ್ಟೆಯ ಅವ್ಯವಸ್ಥೆಯೇ ಹೂವು ಬೆಳೆಗಾರರ ಹೋರಾಟಕ್ಕೆ ಕಾರಣವಾಗಿತ್ತು. ಮಳೆಯ ಸಂದರ್ಭದಲ್ಲಿ ಮಾರುಕಟ್ಟೆಯ ಆವರಣವು ಜಲಾವೃತಗೊಂಡ ಓಡಾಡಲು ತೊಂದರೆಯಾಗುತ್ತಿತ್ತು. ತಾತ್ಕಾಲಿಕ ಸ್ಟಾಲ್‌ಗಳು, ವ್ಯಾಪಾರದ ಟೆಂಟ್‌ಗಳಲ್ಲಿನ ದಾಸ್ತಾನಿನ ಹೂವಿನ ಉತ್ಪನ್ನಗಳು ಹಾಳಾಗುತ್ತಿದ್ದವು. ಮತ್ತೊಂದೆಡೆ ಬೇಸಿಗೆಯಲ್ಲಿ ಆವರಿಸಿಕೊಳ್ಳುವ ಧೂಳಿನ ಕಿರಿಕಿರಿ. ಸಮರ್ಪಕ ಶೌಚಗೃಹ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೆ ಪರದಾಟ. ಇದರಿಂದ ರೋಸಿ ಹೋದ ಬೆಳೆಗಾರರು ಮತ್ತು ವರ್ತಕರು ಮಾರುಕಟ್ಟೆ ಸ್ಥಳಾಂತರಕ್ಕೆ ಒತ್ತಾಯಿಸಿದ್ದರು.
ಹೊಸ ಸ್ಥಳ, ಟ್ರಾಫಿಕ್ ಸವಾಲು: ಸ್ಥಳಾಂತರದ ನಿರ್ಣಯ ಕೈಗೊಳ್ಳದ ಜಿಲ್ಲಾಡಳಿತವು ಬೇರೆಡೆ ಹೊಸ ಹೂವಿನ ಮಾರುಕಟ್ಟೆ ನಿರ್ಮಾಣಕ್ಕೆ ತಿಪ್ಪೇನಹಳ್ಳಿ ಇಲ್ಲವೇ ಜಡಲತಿಮ್ಮನಹಳ್ಳಿ ಬಳಿ ಸರ್ಕಾರಿ ಜಾಗ ಗುರುತಿಸಿ, ತ್ವರಿತವಾಗಿ ಸುಸಜ್ಜಿತ ಕಟ್ಟಡ ಹಸ್ತಾಂತರಿಸಲಾಗುವುದು ಎಂದು ರೈತರಿಗೆ ಭರವಸೆ ನೀಡುತ್ತಲೇ ಇದೆ. ಆದರೆ, ಯಾವುದೇ ಬೆಳವಣಿಗೆಯಾಗಿಲ್ಲ. ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ. ಇನ್ನು ಹಳೇ ಎಪಿಎಂಸಿ ಮಾರುಕಟ್ಟೆ ಮುಂಭಾಗ ರಾಷ್ಟ್ರೀಯ ಹೆದ್ದಾರಿ 69 ಹಾದು ಹೋಗಿದೆ. ಇದರ ನಡುವೆ ಜಿಲ್ಲೆ ಮಾತ್ರವಲ್ಲದೆ ದೇಶದ ಹೊರ ಭಾಗಗಳಿಂದ ಇಲ್ಲಿನ ಮಾರುಕಟ್ಟೆಗೆ ಉತ್ಪನ್ನಗಳನ್ನು ತಂದ ಸಂದರ್ಭದಲ್ಲಿ ವಾಹನ ಮತ್ತು ಜನಸಂದಣಿ ಹೆಚ್ಚಾಗಿ, ಗಂಟೆಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗುತ್ತದೆ. ಇದಕ್ಕೆ ಪರಿಹಾರ ಕ್ರಮ ಕೈಗೊಂಡು ಜನರಿಗೆ ಅನುಕೂಲ ಮಾಡಿಕೊಡಬೇಕಾಗಿದೆ.