ಜಿಲ್ಲೆ

ಹೂವಿನ ಅಳತೆಯಲ್ಲಿ ಮೋಸದ ಆರೋಪ

ಚಿತ್ರದುರ್ಗ: ಎಪಿಎಂಸಿ ಆವರಣದ ಹೂವಿನ ಮಾರುಕಟ್ಟೆಯಲ್ಲಿ ಪುಷ್ಪ ಅಳೆಯುವಲ್ಲಿ ಮೋಸವಾಗುತ್ತಿದೆ ಎಂದು ಆರೋಪಿಸಿ ರಾಜ್ಯ ರೈತಸಂಘದ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು.

ಪದೇ ಪದೆ ಹೂ ಬೆಳೆಗಾರರಿಗೆ ಅನ್ಯಾಯವಾಗುತ್ತಲೇ ಇದೆ. ಇದನ್ನು ತಪ್ಪಿಸಲು ಮಾರುಕಟ್ಟೆಯಲ್ಲಿ ಸಿಸಿ ಕ್ಯಾಮೆರಾ ಅಳವಡಿಸುವಂತೆ ಜಿಲ್ಲಾಡಳಿತಕ್ಕೆ ಒತ್ತಾಯಿಸಿ ಮನವಿ ಸಲ್ಲಿಸಿದರು.

ತಾಲೂಕಿನ 50ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಸಾವಿರಾರು ರೈತರು ಪುಷ್ಪ ಕೃಷಿಯಲ್ಲಿ ತೊಡಗಿದ್ದು, ಇದೇ ಜೀವನಕ್ಕೆ ಆಧಾರವಾಗಿದೆ. ಚಿತ್ರದುರ್ಗದಿಂದ ಹೊರ ಜಿಲ್ಲೆಗಳು, ಕೇರಳ, ಮಹಾರಾಷ್ಟ್ರ ಸೇರಿ ಹೊರ ರಾಜ್ಯಗಳಿಗೂ ಇಲ್ಲಿಂದ ರಫ್ತಾಗುತ್ತಿದೆ. ಆದರೆ, ತಲಾ 1 ಮಾರಿಗೆ ನಿಗದಿತ 6 ಅಡಿ ಬದಲು 10 ಅಡಿ ಅಳೆದು ವಂಚಿಸಲಾಗುತ್ತಿದೆ. ಇದರಿಂದ ನೇರವಾಗಿ ಬೆಳೆಗಾರರು ನಷ್ಟ ಅನುಭವಿಸುತ್ತಿದ್ದಾರೆ. ಈ ಕುರಿತು ಅನೇಕ ಬಾರಿ ಎಪಿಎಂಸಿ ಕಾರ್ಯದರ್ಶಿ ಗಮನಕ್ಕೆ ತಂದರೂ ಈವರೆಗೂ ಯಾವುದೇ ಕ್ರಮವಹಿಸಿಲ್ಲ ಎಂದು ದೂರಿದರು.

ಮೊದಲೇ ರೈತರು ಬರಗಾಲದಿಂದ ತತ್ತರಿಸಿದ್ದಾರೆ. ಈ ನಡುವೆ ರಾಜ್ಯ ಸರ್ಕಾರ ತೈಲ ಬೆಲೆ ಏರಿಸಿದೆ. ಇದರಿಂದ ಅಗತ್ಯ ವಸ್ತುಗಳ ಬೆಲೆಗಳು ಹೆಚ್ಚಾಗಲಿವೆ. ಹೂವಿನ ಅಳತೆಯಲ್ಲೂ ಮೋಸವಾದರೆ, ಜೀವನ ನಡೆಸುವುದಾದರೂ ಹೇಗೆ ಎಂದು ಪ್ರಶ್ನಿಸಿದರು.

ಹೂವಿನ ಅಳತೆಯಲ್ಲಿ ರೈತರಿಗೆ ಆಗುತ್ತಿರುವ ಮೋಸ ತಡೆಯಬೇಕು. ಅದಕ್ಕಾಗಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ರೈತರ, ಅಂಗಡಿ ಮಾಲೀಕರ, ಎಪಿಎಂಸಿ ಅಧಿಕಾರಿಗಳ ಸಭೆ ನಡೆಸಬೇಕು ಎಂದು ಕೋರಿದರು.

ರೈತಸಂಘದ ಮುಖಂಡರಾದ ಕೆ.ಪಿ.ಭೂತಯ್ಯ, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಕೆ.ಸಿ.ಹೊರಕೇರಪ್ಪ, ಹಂಪಯ್ಯನಮಾಳಿಗೆ ಧನಂಜಯ, ಕರಿಬಸಪ್ಪ, ಎಸ್.ಕೆ.ಕುಮಾರಸ್ವಾಮಿ, ಜಿ.ಪಿ.ತಿಪ್ಪೇಸ್ವಾಮಿ, ಕೆ.ಎಂ.ಕಾಂತರಾಜು, ಎ.ತಿಪ್ಪೇಸ್ವಾಮಿ, ಮಲ್ಲಿಕಾರ್ಜುನಪ್ಪ, ಡಿ.ಎಸ್.ಹಳ್ಳಿ ಸುಧಾ ಇತರರಿದ್ದರು.