ಮೈಸೂರು: ನಗರದ ವಾಲ್ಮೀಕಿ ರಸ್ತೆಯಲ್ಲಿ ಅಲಂಕಾರಿಕ ಹೂಗುಚ್ಛ ಮಾರಾಟಕ್ಕೆ ಮಹಾನಗರ ಪಾಲಿಕೆ ವತಿಯಿಂದ ಶಾಶ್ವತ ಸೂರು ಕಲ್ಪಿಸಿಕೊಡಲಾಗುತ್ತಿದೆ.
ನಗರದಲ್ಲಿ ಕಳೆದ ಮೂರು ದಶಕದಿಂದ ಹೂವಿನ ವ್ಯಾಪಾರಿಗಳು ಹೂಗುಚ್ಛ ಹಾಗೂ ಅಲಂಕಾರಿಕಾ ವಸ್ತುಗಳನ್ನು ಮಾರಾಟ ಮಾಡುತ್ತಿದ್ದು, ಮಳೆ, ಬಿಸಿಲಿನ ಸಮಸ್ಯೆಯನ್ನು ವ್ಯಾಪಾರಿಗಳು ಎದುರಿಸುತ್ತಿದ್ದರು.
ಈ ಹಿನ್ನೆಲೆಯಲ್ಲಿ ಶಾಶ್ವತ ಶೆಲ್ಟರ್ ನಿರ್ಮಿಸಿಕೊಡುವಂತೆ ಕೋರಿಕೊಳ್ಳಲಾಗಿತ್ತು. ಇದಕ್ಕೆ ಸ್ಪಂದಿಸಿರುವ ಪಾಲಿಕೆ ಇದೀಗ ಶೆಲ್ಟರ್ ನಿರ್ಮಾಣ ಮಾಡಿದೆ. ಶೀಘ್ರದಲ್ಲಿಯೇ ಹೂಗುಚ್ಛ ಮಾರಾಟಗಾರರು ಹೊಸ ಸೂರಿನಲ್ಲಿ ವ್ಯಾಪಾರ ಶುರು ಮಾಡಲಿದ್ದಾರೆ. ಹೂವಿನ ವ್ಯಾಪಾರಿಗಳ ಬಹುದಿನ ಬೇಡಿಕೆ ಇದರಿಂದ ಈಡೇರಿದೆ.
ಮೈಸೂರು ಮಹಾನಗರ ಪಾಲಿಕೆಯ ವಿಶೇಷ ಅನುದಾನದಲ್ಲಿ ಹೂಗುಚ್ಛ ವ್ಯಾಪಾರಿಗಳಿಗೆ ಶೆಲ್ಟರ್ ನಿರ್ಮಿಸಲಾಗಿದೆ. 15 ಲಕ್ಷ ರೂ. ವೆಚ್ಚದಲ್ಲಿ 15 ಅಡಿ ಅಗಲ, 100 ಅಡಿ ಉದ್ದದ ಶೆಲ್ಟರ್ ಇದಾಗಿದೆ. 10 ವ್ಯಾಪಾರಿಗಳಿಗೆ 15*10 ಅಡಿ ಅಳತೆಯಂತೆ ವಿಂಗಡಣೆ ಮಾಡಲಾಗಿದೆ. ಇದರಿಂದ ಪ್ರತ್ಯೇಕವಾಗಿ ವ್ಯಾಪಾರಿಗಳು ಪೆಟ್ಟಿಗೆ ಅಂಗಡಿಗಳನ್ನಿಟ್ಟುಕೊಂಡು ಅಲಂಕಾರಿಕಾ ಹೂವಿನ ವ್ಯಾಪಾರ ಮಾಡಲು ಅನುಕೂಲ ಒದಗಿಸಿಕೊಡಲಾಗಿದೆ ಎಂದು ಪಾಲಿಕೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹೂವಿನ ಮಳಿಗೆಗಾಗಿ ನಿರ್ಮಿಸಿರುವ ಶೆಲ್ಟರ್ ಕೆಳಗೆ ಕಾಂಕ್ರಿಟ್‌ನಿಂದ ಫ್ಲಾಟ್‌ಫಾರ್ಮ್ ನಿರ್ಮಿಸಲಾಗಿದೆ. ಮಳಿಗೆ ಎದುರು ಇಂಟರ್‌ಲಾಕ್ ವ್ಯವಸ್ಥೆಯುಳ್ಳ ಪಾದಚಾರಿ ಮಾರ್ಗ ಮಾಡಲಾಗಿದೆ. ಶೆಲ್ಟರ್‌ಗೆ ಅನುಗುಣವಾಗಿ ಅಲಂಕಾರಿಕಾ ಬೀದಿ ದೀಪದ ವ್ಯವಸ್ಥೆಯನ್ನೂ ಹೊಸದಾಗಿ ಮಾಡಿಕೊಡಲಾಗಿದೆ. ಇದರಿಂದ ವ್ಯಾಪಾರಿಗಳು ಮಾತ್ರವಲ್ಲದೆ, ಗ್ರಾಹಕ ಸ್ನೇಹಿ ಸೌಲಭ್ಯವನ್ನು ಒದಗಿಸಲಾಗಿದೆ.
ಮಳೆಯ ನೀರು ಮಳಿಗೆ ಒಳಗೆ ಸೋರಿಕೆ ಆಗಲ್ಲ. ಮಳೆ ನೀರು ಮಳಿಗೆ ಮುಂದೆ ನಿಂತುಕೊಂಡು ಕೆಸರಾಗುವುದಿಲ್ಲ. ಹೂ ಖರೀದಿ ಸಂದರ್ಭದಲ್ಲಿ ಮಳೆ ಬಂದರೂ ಗ್ರಾಹಕರು ಸಹ ಶೆಲ್ಟರ್‌ನಲ್ಲಿ ಆಶ್ರಯ ಪಡೆಯಬಹುದಾಗಿದೆ.
ಹೂಗುಚ್ಛ ವ್ಯಾಪಾರಿಗಳಿಗಾಗಿ ನಿರ್ಮಿಸಿರುವ ಶೆಲ್ಟರ್‌ಗಳಿಗೆ ಮೆಟಲ್ ಶೀಟ್ ಬಳಸಲಾಗಿದೆ. ನೋಡಲು ಅಂದವಾಗಿ ಕಾಣುವುದರಿಂದ ಅದಕ್ಕೆ ತಕ್ಕಂತೆ ಏಕರೂಪದ ಪೆಟ್ಟಿಗೆ ಅಂಗಡಿಗಳನ್ನು ಬಳಸುವಂತೆ ನೀಡಿರುವ ಸಲಹೆಯನ್ನು ವ್ಯಾಪಾರಿಗಳು ಸ್ವೀಕರಿಸಿದ್ದಾರೆ.
10*10 ಅಡಿ ಅಳತೆಯ ನೀಲಿಬಣ್ಣದ ಕಬ್ಬಿಣದ ಪೆಟ್ಟಿಗೆ ಅಂಗಡಿ ಖರೀದಿಸಿದ್ದಾರೆ. ಪ್ರಸ್ತುತ ವ್ಯಾಪಾರ ಮಾಡಲು ಕೆಲವರು ಕಬ್ಬಿಣದ ಪೆಟ್ಟಿಗೆ ಅಂಗಡಿ, ಮತ್ತೆ ಕೆಲವರು ಮರದ ಪೆಟ್ಟಿಗೆ ಅಂಗಡಿ ಬಳಸುತ್ತಿದ್ದಾರೆ. ಇದರಿಂದ ಹೊಸ ಶೆಲ್ಟರ್‌ನಲ್ಲಿ ವ್ಯಾಪಾರ ಮುಂದುವರಿಸಲು ಏಕರೂಪದ ಪೆಟ್ಟಿಗೆ ಅಂಗಡಿಗಳನ್ನೂ ಬಳಸಲು ವ್ಯಾಪಾರಿಗಳು ಒಪ್ಪಿಕೊಂಡಿದ್ದಾರೆ. ತಲಾ 40 ಸಾವಿರ ರೂ. ವೆಚ್ಚದಲ್ಲಿ ಒಂದೇ ವಿನ್ಯಾಸದ ಪೆಟ್ಟಿಗೆ ಅಂಗಡಿಗಳನ್ನು ಮಾಡಿಸಿದ್ದಾರೆ. ಇವು ಶೆಲ್ಟರ್‌ನಲ್ಲಿ ಸರದಿ ಸಾಲಿನಂತೆ ಜೋಡಿಸಲಾಗಿದ್ದು, ಹೂಗುಚ್ಛ ಮಾರಾಟದ ಶೆಲ್ಟರ್‌ಗೆ ಮೆರುಗು ತರಲಿದೆ.
ಬಹಳ ವರ್ಷಗಳಿಂದ ಹೂಗುಚ್ಛ ವ್ಯಾಪಾರ ಮಾಡಿಕೊಂಡು ಬರಲಾಗುತ್ತಿದೆ. ಮೊದಲು ಮೆಟ್ರೋಪೋಲ್ ವೃತ್ತದ ಬಳಿ 6 ವರ್ಷ ಕಾಲ ವ್ಯಾಪಾರ ಮಾಡಲಾಗಿತ್ತು. ಅಲ್ಲಿಂದ ವಾಲ್ಮೀಕಿ ರಸ್ತೆ ಬಳಿ ಹೊಸದಾಗಿ ನಿರ್ಮಿಸಿರುವ ಮಹಾರಾಣಿ ವಾಣಿಜ್ಯ ಕಾಲೇಜು ಮುಂಭಾಗ 17 ವರ್ಷದಿಂದ ವಹಿವಾಟು ನಡೆಸಲಾಗುತ್ತಿತ್ತು. ಅಲ್ಲಿಂದ ಪ್ರಸ್ತುತ ವ್ಯಾಪಾರ ಮಾಡುತ್ತಿರುವ ಸ್ಥಳಕ್ಕೆ ಸ್ಥಳಾಂತರಿಸಲಾಯಿತು. ಇಲ್ಲಿ 7 ವರ್ಷದಿಂದ ವ್ಯಾಪಾರ ನಡೆದಿದೆ.
ಮಳೆ ಬಂದರೆ ಹೂಗಳ ಮೇಲೆ ಮಳೆ ನೀರು ಬಿದ್ದು ಹಾಳಾಗುತ್ತದೆ. ಪೆಟ್ಟಿಗೆ ಅಂಗಡಿಯಲ್ಲಿ ನೀರು ಸೋರಿ ವ್ಯಾಪಾರಿಗಳಿಗೂ ನಷ್ಟದೊಂದಿಗೆ ತೊಂದರೆಯೂ ಆಗುತ್ತಿತ್ತು. ಬೇಸಿಗೆಯಲ್ಲೂ ಬಿಸಿಲಿನ ತಾಪಕ್ಕೆ ಹೂ ಒಣಗುತ್ತಿದ್ದವು. ಹೊಸ ಶೆಲ್ಟರ್ ನಿರ್ಮಾಣದಿಂದ ಈ ಸಮಸ್ಯೆಗಳೆಲ್ಲ ನಿವಾರಣೆಯಾಗಿವೆ ಎಂದು ಇಲ್ಲಿಯ ಹೂ ವ್ಯಾಪಾರಿಯೊಬ್ಬರು ತಿಳಿಸಿದರು.