ಯಾದಗಿರಿ: ಎಲ್ಲರಿಗೂ `ಹೂ' ಬೇಕು. ಆದರೆ ಅದರ ಹಾರ ಕಟ್ಟುವವರು ಬೇಡ. ಇದು ರಾಜ್ಯದ ಹೂಗಾರ ಸಮುದಾಯದವರ ಸದ್ಯದ ಸ್ಥಿತಿಗತಿ. ಐದಾರು ದಶಕಗಳಿಂದ ಅಧಿಕಾರ ನಡೆಸಿದ ಪಕ್ಷಗಳು ನೆನಪಿಡುವಂತಹ ಮತ್ತು ಉಪಯೋಗಕ್ಕೆ ಬರುವಂತಹ ಒಂದೇ ಒಂದು ಸೌಲಭ್ಯ ನೀಡದಿದ್ದರೂ ತಮ್ಮ ಕುಲಕಸುಬು ನಂಬಿ ಎಲೆಮರೆ ಕಾಯಿಯಂತೆ ಬದುಕುತ್ತಿದ್ದಾರೆ ರಾಜ್ಯದ ೧೫ ಲಕ್ಷ ಹೂಗಾರರು.
ಇಂತಹ ಸಮುದಾಯಕ್ಕೆ ಹಿಂದಿನ ಬಿಜೆಪಿ ಸರ್ಕಾರ ಅಧಿಕಾರದ ಕೊನೇ ಘಳಿಗೆಯಲ್ಲಿ (೨೧-೦೨-೨೩) ಕರ್ನಾಟಕ ಮಾಲಿ, ಮಾಲಗಾರ ಮತ್ತು ಹೂಗಾರ ಎಂಬ ಹೆಸರಿನಡಿ ಅಭಿವೃದ್ಧಿ ನಿಗಮ ಸ್ಥಾಪನೆಗೆ ಆದೇಶಿಸಿತು. ಈ ಸುವಾರ್ತೆ ಕೇಳಿದ ಹೂಗಾರ ಜನಾಂಗ ಹೋಳಿಗಿ ತುಪ್ಪ ಉಂಡಷ್ಟೇ ಖುಷಿ ಪಟ್ಟಿತು. ಸಿಹಿ ಹಂಚಿ ನಾನಾ ಕನಸುಗಳನ್ನು ಕಂಡಿತು. ಆದರೆ ನಿಗಮಕ್ಕೆ ಅಧ್ಯಕ್ಷ, ಸದಸ್ಯರ ನೇಮಕ, ಕಚೇರಿ, ಅನುದಾನ ನೀಡಬೇಕಿದ್ದ ಅಂದಿನ ಸರ್ಕಾರ ಏನೂ ಮಾಡಲಿಲ್ಲ.
ಮುಂದೆ ವಿಧಾನಸಭೆ ಚುನಾವಣೆ ನಡೆದು ಸರ್ಕಾರ ಬದಲಾಯಿತು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ೧೭ ತಿಂಗಳಾದರೂ ಇಂಥದ್ದೊAದು ನಿಗಮ ಸ್ಥಾಪನೆಗೆ ಆದೇಶವಾಗಿದೆ. ಅದಕ್ಕೆ ಚಾಲನೆ ನೀಡಬೇಕೆಂಬ ಗೋಜಿಗೂ ಹೋಗದ್ದರಿಂದ ನಿಗಮ ಕಾಗದದಲ್ಲೇ ಉಳಿದಿದೆ.
ಬೆಳಗಾದರೆ ಸಾಕು, ಕಾರ್ಯಾಂಗ, ಶಾಸಕಾಂಗದಲ್ಲಿ ಕೆಲಸ ಮಾಡುವವರಿಗೆ ಹೂವು, ಹೂವಿನ ಹಾರಗಳು ಬೇಕು. ಅಂದ-ಚೆAದ ಮಾಡಿ ದೇವರ ಕೊರಳಿಗೆ ಹಾಕಿದಾಗ ಮನಸ್ಸಿಗೆ ಮುದ ನೀಡುವಂತೆ ಕಟ್ಟಿಕೊಟ್ಟಂತಹ ಹೂಗಾರರ ನೆನಪು ಸರ್ಕಾರಕ್ಕೆ ಇದುವರೆಗೆ ಆಗದಿರುವುದು ಸೋಜಿಗವೇ ಸರಿ.
ರಾಜಕೀಯ, ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಧ್ವನಿ ಇಲ್ಲದ ಮತ್ತು ನಾಯಕತ್ವ ಕೊರತೆ ಎದುರಿಸುತ್ತಿರುವ ಈ ಸಮುದಾಯಕ್ಕೆ ಹೋರಾಟದ ಫಲವಾಗಿ ಸಿಕ್ಕ ನಿಗಮಕ್ಕೆ ಕೂಡಲೇ ಜೀವ ಕೊಡುವಂತ ಕೆಲಸ ಮಾಡಬೇಕಿದೆ.
ಬೆಂಗಳೂರಿನಲ್ಲಿ ಕಚೇರಿ ಸ್ಥಾಪಿಸಿ ಅಧ್ಯಕ್ಷ, ಸದಸ್ಯರ ನೇಮಕ ಮಾಡಿ ಬೇಕಾದ ಸಿಬ್ಬಂದಿ ನೀಡಿ ಬೇಡಿಕೆಯಂತೆ ೧೦೦ ಕೋಟಿ ಅನುದಾನ ಕೊಟ್ಟರೆ ಮಕ್ಕಳ ಶಿಕ್ಷಣ, ವ್ಯಾಪಾರ ಹೀಗೆ ಮುನ್ನೆಲೆಗೆ ಬಂದು ಹೂವಿನ ಹಾರ ಕಟ್ಟುವ ಕೈಗಳು ಅಧಿಕಾರ ನಡೆಸಬಹುದು. ಉನ್ನತ ಅಧಿಕಾರ ಪಡೆಯಬಹುದು. ಆರ್ಥಿಕ ಸಬಲರಾಗಿ ಮತ್ತೊಬ್ಬರಂತೆ ಬದುಕು ಕಟ್ಟಿಕೊಳ್ಳಬಹುದು. ಈ ಕೆಲಸ ಮಾಡುವಂತೆ ಸಮುದಾಯ ತಡವಾದರೂ ಎಚ್ಚೆತ್ತು ಮನವಿಪತ್ರ ಸಲ್ಲಿಸಿದೆ. ನಿರ್ಲಕ್ಷಿಸಿದರೆ ರಾಜಧಾನಿ ಬೆಂಗಳೂರಲ್ಲಿ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದೆ.