ಜಿಲ್ಲೆ

ಹೂ ಬಿಟ್ಟ ಕಾಫಿಗೆ ಸಕಾಲದಲ್ಲಿ ಕೈ ಕೊಟ್ಟ ಮಳೆ

ಬಾಲಮುರಳಿಕೃಷ್ಣ

ಅರಕಲಗೂಡು: ತಾಲೂಕಿನಲ್ಲಿ ಅಕಾಲಿಕವಾಗಿ ಸುರಿದ ಮಳೆಗೆ ಹೂ ಬಿಟ್ಟಿರುವ ಕಾಫಿ ತೋಟಗಳಿಗೆ ನೀರು ಹಾಯಿಸಿ ಬೆಳೆ ರಕ್ಷಣೆ ಮಾಡಿಕೊಳ್ಳಲು ನೀರಾವರಿ ಸೌಲಭ್ಯದ ಇಲ್ಲದೆ ರೈತರ ಸ್ಥಿತಿ ಚಿಂತಾಜನಕವಾಗಿದೆ.

ಕಳೆದ ವಾರ ಬಿದ್ದ ಅಕಾಲಿಕ ಮಳೆಗೆ ಮಲ್ಲಿಪಟ್ಟಣ ಹೋಬಳಿ ಭಾಗದಲ್ಲಿ ಕಾಫಿ ಗಿಡಗಳು ಹೂ ಬಿಟ್ಟು ನಳನಳಿಸುತ್ತಿವೆ. ಕಾಫಿ ಬೆಳೆಯನ್ನೆ ಹೆಚ್ಚಾಗಿ ಅವಲಂಬಿಸಿರುವ ಮಲ್ಲಿಪಟ್ಟಣ, ಆಲದಹಳ್ಳಿ, ಮಾಗೋಡು, ಪಾರಸನಹಳ್ಳಿ, ಮಾಗಲು, ಬಾಗದಾಳು, ಬೂದನೂರು, ಹಿಪ್ಪಲಿ, ಮತ್ತರ, ಬೈಸೂರು, ಕೆಳಗಲೆ, ಕೋಟಿ, ದಾಸನಪುರ, ಮದಲಾಪುರ ಭಾಗದ ರೈತರಿಗೆ ಕಾಫಿ ತೋಟಗಳೇ ಜೀವನಾಧಾರ. ಬೇಸಿಗೆ ಧಗೆಯಿಂದ ಕಂಗೆಟ್ಟಿದ್ದ ಬೆಳೆಗೆ ಕಳೆದ ವಾರ ದಿಢೀರ್ ಸುರಿದ ಮಳೆ ಕಾಫಿ ತೋಟಗಳಲ್ಲಿ ಅರೆಬಿಕಾ, ರೋಬಾಸ್ಟ ಗಿಡಗಳು ಹೂ ಬಿಡಲು ವರದಾನವಾಯಿತು. ಆದರೆ ಒಮ್ಮೆ ಬಿದ್ದ ಮಳೆಗೆ ಹೂ ಬಿಟ್ಟ ಕಾಫಿಗಳಿಗೆ ಮತ್ತೊಮ್ಮೆ ಜೋರು ಮಳೆಯಾಗಿ ಭೂಮಿ ತಂಪಾಗಬೇಕಿತ್ತು. ದುರದೃಷ್ಟವಶಾತ್ ಮಳೆ ಈಗ ಕೈಕೊಟ್ಟಿದ್ದು ಬೆಳೆಗೆ ನೀರು ಹಾಯಿಸಲು ರೈತರು ಪರದಾಡುವಂತಾಗಿದೆ.

ನೀರಾವರಿ ಸೌಲಭ್ಯ ಹೊಂದಿರುವ ರೈತರು ಕಾಫಿ ತೋಟಗಳಿಗೆ ಸ್ಪ್ರಿಂಕ್ಲರ್ ಅಳವಡಿಸಿ ನೀರು ಹಾಯಿಸಿ ಬೆಳೆ ಉಳಿಸಿಕೊಳ್ಳಲು ಮುಂದಾಗಿದ್ದಾರೆ. ನೀರಾವರಿ ಸೌಲಭ್ಯ ಇಲ್ಲದ ಬೆಳೆಗಾರರು ಬೆಳೆ ಉಳಿಸಿಕೊಳ್ಳುವುದು ಹೇಗೆಂಬ ಚಿಂತೆಯಲ್ಲಿ ಮುಳುಗಿದ್ದು, ಮಳೆಗಾಗಿ ಮುಗಿಲಿನತ್ತ ದೃಷ್ಟಿ ನೆಟ್ಟಿದ್ದಾರೆ. ಕೆಲವು ಕಡೆ ಬೋರ್‌ವೆಲ್ ಕೊರೆಸಿದರೂ ನೀರು ಬರುತ್ತಿಲ್ಲ. ದಿನೆ ದಿನೇ ಏರುತ್ತಿರುವ ಬೇಸಿಗೆಯ ಬಿಸಿಲ ಝಳಕ್ಕೆ ನೀರು ಕಾಣದ ಕಾಫಿ ತೋಟಗಳು ತರಗೆಲೆಯಂತಾಗಿವೆ. ಹೂ ಬಿಟ್ಟ ಕಾಫಿ ತೋಟಗಳಿಗೆ ಸಕಾಲದಲ್ಲಿ ನೀರುಣಿಸದಿದ್ದರೆ ಬೆಳೆ ಹಾಳಾಗಿ ಇಳುವರಿ ಕುಂಠಿತಗೊಳ್ಳುವ ಆಂತಕ ಬೆಳೆಗಾರರನ್ನು ಕಾಡಲಾರಂಭಿಸಿದೆ.

ಕಾಫಿಗೆ ಕಳೆದ ಕೆಲ ವರ್ಷಗಳಿಂದ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗದ ಕಾರಣ ರೈತರು ಕೈಚೆಲ್ಲಿ ಕೂರುವಂತಾಗಿತ್ತು. ಕೂಲಿ ಆಳುಗಳ ಕೊರತೆ ಎದುರಿಸಿ ದುಪ್ಪಟ್ಟು ಹಣ ವ್ಯಯಿಸಿ ಬೆಳೆ ಬೆಳೆದರೂ ಪ್ರಯೋಜನ ಆಗುತ್ತಿರಲಿಲ್ಲ. ಬೆಳೆಗೆ ತಗುಲಿದ ವೆಚ್ಚ ಭರಿಸಲಾಗದೆ ಅನೇಕ ರೈತರು ಕಾಫಿ ಬೆಳೆ ಬೆಳೆಯಲು ನಿರಾಸಕ್ತಿ ತಳೆದಿದ್ದರು. ಇದರಿಂದ ಕಾಫಿ ತೋಟಗಳ ನಿರ್ವಹಣೆಗೆ ಪೆಟ್ಟು ಬಿದ್ದಿತ್ತು. ಅದೃಷ್ಟವಶಾತ್ ಈ ಬಾರಿ ಕಾಫಿಗೆ ಬಂಗಾರದ ಬೆಲೆ ಲಭಿಸಿದ್ದರಿಂದ ರೈತರು ಹೆಚ್ಚಾಗಿ ಕಾಫಿ ತೋಟಗಳ ನಿರ್ವಹಣೆಯತ್ತ ಮುಖ ಮಾಡಿದ್ದಾರೆ.

ಅರೆಮಲೆನಾಡು ಪ್ರದೇಶದವಾದ ಮಲ್ಲಿಪಟ್ಟಣ ಹೋಬಳಿಗೆ ಹೊಂದಿಕೊಂಡಂತೆ ಹೇಮಾವತಿ ನದಿ ಹಾದು ಹೋಗಿದೆ. ಗೊರೂರು ಹೇಮಾವತಿ ಜಲಾಶಯ ವ್ಯಾಪ್ತಿಯಲ್ಲಿ ನೂರಾರು ಎಕರೆ ಹಿನ್ನೀರು ಪ್ರದೇಶವಿದೆ. ದೂರದ ಮಂಡ್ಯ, ತುಮಕೂರು ಜಿಲ್ಲೆಗಳಿಗೆ ನೀರುಣಿಸುವ ಹೇಮಾವತಿ ಜಲಾಶಯದ ನದಿ ದಂಡೆ ಮೇಲ್ಭಾಗ ಮಲ್ಲಿಪಟ್ಟಣ ಹೋಬಳಿಯ ರೈತರಿಗೆ ನೀರಿಲ್ಲದೆ ಸಮುದ್ರದ ನಂಟು ಉಪ್ಪಿಗೆ ಬರ ಎನ್ನುವಂತಾಗಿದೆ. ಕಾಫಿ ತೋಟಗಳಿಗೆ ಕಂಟಕವಾಗುತ್ತಿರುವ ಕಾಡಾನೆಗಳ ಕಾಟ ಅನುಭವಿಸಿ, ನೀರಾವರಿ ಸೌಲಭ್ಯದಿಂದ ವಂಚಿತವಾಗಿರುವ ಇಲ್ಲಿನ ಅರೆಮಲೆನಾಡು ಭಾಗದ ಸಾವಿರಾರು ಎಕರೆ ಪ್ರದೇಶ ಬರದ ಬವಣೆಗೆ ಸಿಲುಕಿ ರೈತರು ಹನಿ ನೀರಿಗಾಗಿ ಪರದಾಡುವ ಸ್ಥಿತಿ ಎದುರಾಗಿದೆ.

ಕೆಲ ವರ್ಷಗಳಿಂದ ಕಾಫಿ ಬೆಲೆಯಲ್ಲಿ ಇಳಿಕೆಯಾಗಿ ಅಡಕೆಗೆ ಬಂಪರ್ ಬೆಲೆ ಬಂದಿದ್ದರಿಂದ ಈ ಭಾಗದ ರೈತರು ಅಡಕೆ ಬೆಳೆಯತ್ತ ಒಲವು ತೋರಿದರು. ಹೀಗಾಗಿ ಕಾಫಿ ಬೆಳೆ ಜತೆಗೆ ಸಾಕಷ್ಟು ರೈತರು ಅಡಕೆ ಗಿಡಗಳನ್ನು ನೆಟ್ಟಿದ್ದಾರೆ. ಕಾಫಿ ಮತ್ತು ಅಡಕೆ ಬೆಳೆಗೆ ಮಳೆಗಾಲದಲ್ಲಿ ನೀರಿನ ಅಭಾವ ಅಷ್ಟಾಗಿ ಇರಲಾರದು. ಬೇಸಿಗೆ ಬಂತೆಂದರೆ ಕಾಫಿ ತೋಟ ಮತ್ತು ಅಡಕೆ ಬೆಳೆ ಉಳಿಸಿಕೊಳ್ಳುವುದು ರೈತರಿಗೆ ಸವಾಲಿನ ಕೆಲಸವಾಗಿದೆ.