ಜಿಲ್ಲೆ

ಹುಲ್ಲುಗಾವಲು ನಾಶದಿಂದ ಬೂದು ತೋಳಗಳ ಸಂತತಿ ಕಣ್ಮರೆ

ಮೇಲುಕೋಟೆ: ಚೆಲುವನಾರಾಯಣಸ್ವಾಮಿಯ ಸಾನ್ನಿಧ್ಯವಿರುವ ಮೇಲುಕೋಟೆ ಕಾಡು ಭಾರತದಲ್ಲಿ ಎಲ್ಲೂ ಕಂಡುಬರದ ವಿಶೇಷ ಪ್ರಭೇದದ ಬೂದು ತೋಳಗಳ ಧಾಮವಾಗಿತ್ತು. ಸಮೃದ್ಧವಾಗಿದ್ದ ಹುಲ್ಲುಗಾವಲಿನ ನಾಶದಿಂದ ಅಪರೂಪದ ತೋಳಗಳ ಸಂತತಿ ಕಣ್ಮರೆಯಾಗಿದೆ ಎಂದು ಮೇಲುಕೋಟೆ ವನ್ಯಜೀವಿ ವಲಯದ ವಲಯ ಅರಣ್ಯಾಧಿಕಾರಿ ರಾಜೇಶ್ವರಿ ವಿಷಾದಿಸಿದರು.

ಅವರು ಮೇಲುಕೋಟೆಯಲ್ಲಿ ಅರಣ್ಯ ಇಲಾಖೆಯ ವನ್ಯಜೀವಿ ವಲಯ ಸೋಮವಾರ ಹಮ್ಮಿಕೊಂಡಿದ್ದ ವಿಶ್ವ ವನ್ಯಜೀವಿ ದಿನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮೇಲುಕೋಟೆ ಸುತ್ತಮುತ್ತಲಿನ ಬೆಟ್ಟಗುಡ್ಡಗಳ ಪರಿಸರದಲ್ಲಿ ತೋಳಗಳ ವಾಸಸ್ಥಾನದ ಕುರುಹುಗಳನ್ನು ಇಂದಿಗೂ ಕಾಣಬಹುದಾಗಿದೆ. ಈ ಸುತ್ತಮುತ್ತಲಲ್ಲಿ ನಿರಂತರವಾಗಿ ಹುಲ್ಲುಗಾವಲು ನಾಶವಾದ ಕಾರಣ ಬೂದು ತೋಳಗಳು ಇಲ್ಲಿಂದ ಕಣ್ಮರೆಯಾಗಿವೆ. ಮಾನವನ ಸ್ವಾರ್ಥದಿಂದಾಗಿ ಇಂತಹ ಎಷ್ಟೋ ವನ್ಯಜೀವಿಗಳು ವಿನಾಶದ ಅಂಚನ್ನು ತಲುಪಿದ್ದು, ಇಂತಹ ಅಪರೂಪದ ಜೀವಿಗಳನ್ನು ಸಂರಕ್ಷಿಸಬೇಕಾದ ಅಗತ್ಯ ಅರಣ್ಯಇಲಾಖೆಯ ಜತೆಗೆ ಪ್ರತಿ ವಿದ್ಯಾರ್ಥಿಗಳು ಹಾಗೂ ನಾಗರಿಕರ ಜವಾಬ್ದಾರಿಯಾಗಿದೆ ಎಂದರು.

ಮೇಲುಕೋಟೆಯ ಪರಿಸರದಲ್ಲಿ ಮಾತ್ರ ಬದುಕಲು ಆಗುವ ಬೂದು ತೋಳಗಳಿಗೆ ಸೂಕ್ತ ವಾತಾವರಣ ಕಲ್ಪಿಸಿದರೆ ಈಗಲೂ ಮತ್ತೆ ತೋಳಧಾಮ ನಿರ್ಮಿಸಲು ಸಾಧ್ಯವಿದೆ. ಮೇಲುಕೋಟೆಯ ವನ್ಯಜೀವಿಧಾಮ ಹಲವು ಮಹತ್ವದ ಜೀವಿಗಳನ್ನು ಹೊಂದಿದ್ದು, ಅವುಗಳು ಮುಕ್ತವಾಗಿ ಬದುಕಲು ಅವಕಾಶ ಮಾಡಿಕೊಡಬೇಕು ಎಂದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ್ ಮಾತನಾಡಿ, ಹುಲಿಗಳು ಕಾವೇರಿ ತೀರದ ಕಾಡುಗಳಲ್ಲಿ ವಾಸಿಸಿ ಆಹಾರ ಸರಪಳಿಯ ನಿಯಮದಂತೆ ಜೈವೀಕ ಪರಿಸರವನ್ನು ಸಮತೋಲನದಲ್ಲಿಡುತ್ತಿರುವ ಕಾರಣ ಕಾವೇರಿ ನದಿ ಸುಗಮವಾಗಿ ಹರಿದು ಬೆಂಗಳೂರಿಗೂ ಕುಡಿಯಲು ಕಾವೇರಿ ನೀರು ದೊರೆಯುತ್ತಿದೆ. ಇದು ಅಚ್ಚರಿ ಎನಿಸಿದರೂ ಸತ್ಯ ಸಂಗತಿಯಾಗಿದೆ. ಪ್ರತಿಯೊಂದು ಜೀವಿಗಳು ಆಹಾರ ಸರಪಣಿಗೊಳಪಡುತ್ತವೆ. ಯಾವುದೇ ಒಂದು ಜೀವಿಯ ಸಂತತಿ ನಾಶವಾದರೂ ಇಡೀ ವನ್ಯಜೀವಿ ಸಂಕುಲ ಹಾಗೂ ಅದನ್ನವಲಂಬಿಸಿದ ಪರಿಸರ ಸಂಕಷ್ಟಕ್ಕೊಳಗಾಗಲಿದೆ ಎಂದರು.

ಅರಣ್ಯ ಸಂರಕ್ಷಣಾಧಿಕಾರಿ ಪ್ರಮೋದ್, ರೇವಣ್ಣ, ಬೀಟ್ ಫಾರೆಸ್ಟ್ ಆಫೀಸರ್ ಪ್ರಜ್ವಲ್, ಮಂಜೇಶ್, ಕೌಶಿಕ್, ಯೋಗೇಶ್, ಸತ್ಯಬಾಬು, ಸತೀಶ್, ಮುಖ್ಯಶಿಕ್ಷಕರಾದ ಸಂತಾನರಾಮನ್, ಮಂಜುನಾಥ್, ವಸಂತಕುಮಾರ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರು ಭಾಗವಹಿಸಿದ್ದರು.

ವಿಶ್ವವನ್ಯಜೀವಿದಿನದ ಪ್ರಯುಕ್ತ ಅರಣ್ಯ ಇಲಾಖೆ ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.

ಸಮಾರಂಭಕ್ಕೂ ಮೊದಲು ಚೆಲುವನಾರಾಯಣಸ್ವಾಮಿ ದೇವಾಲಯದಿಂದ ಅರಣ್ಯಇಲಾಖಾ ಕಚೇರಿವರೆಗೆ ಡೊಳ್ಳು ಕುಣಿತ ಕಲಾತಂಡದೊಂದಿಗೆ ಜಾಗೃತಿ ಜಾಥಾ ನಡೆಸಲಾಯಿತು.