ಕೊಳ್ಳೇಗಾಲ: ನೆರೆ ರಾಜ್ಯಗಳಿಗೆ ಹುಲ್ಲನ್ನು ಸಾಗಣೆ ಮಾಡದಂತೆ ಅಗತ್ಯ ಕ್ರಮ ವಹಿಸಬೇಕು ಎಂದು ಆಗ್ರಹಿಸಿ ಹಾಲು ಉತ್ಪಾದಕರು ಹಾಗೂ ಪಶುಪಾಲಕರು ಸೋಮವಾರ ಗ್ರೇಡ್2 ತಹಸೀಲ್ದಾರ್ ಶಿವಕುಮಾರ್‌ಗೆ ಮನವಿ ಸಲ್ಲಿಸಿದರು.
ತಾಲೂಕಿನಾದ್ಯಂತ ಈಗಾಗಲೇ ಭತ್ತ ಬೆಳೆ ಕಟಾವು ಪ್ರಾರಂಭವಾಗಿದೆ. ಈ ವೇಳೆ ಸಿಗುವ ಹುಲ್ಲು ಇಲ್ಲಿನ ರೈತರು ಸಾಕುವ ದನಕರುಗಳಿಗೆ ಸಾಲದಂತಾಗಿದೆ. ಈಗಾಗಲೇ ಹೊರ ಜಿಲ್ಲೆಗಳಿಂದ ದುಪ್ಪಟ್ಟು ಬೆಲೆಗೆ ಹುಲ್ಲನ್ನು ಖರೀದಿಸಿ ದನಕರುಗಳಿಗೆ ಹಾಕಲಾಗುತ್ತಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಹುಲ್ಲನ್ನು ಕೇರಳ, ತಮಿಳುನಾಡು ವ್ಯಾಪಾರಿಗಳು ಅಲ್ಲಿನ ಕಾರ್ಖಾನೆಗೆ ಒದಗಿಸಲು ದುಪ್ಪಟ್ಟುದರ ಕೊಟ್ಟು ಖರೀದಿಸಿ ಸಾಗಣೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಹೆಚ್ಚಿನ ಮಳೆಯಿಂದ ಬಹುಪಾಲು ಬೆಳೆ ಹಾಳಾಗಿದ್ದು. ಈಗ ಲಭ್ಯವಿರುವ ಹುಲ್ಲು ವರ್ಷ ಪೂರ್ತಿ ಸಾಲುವುದಿಲ್ಲ. ಹಾಗಾಗಿ ಹೊರ ರಾಜ್ಯದವರಿಗೆ ಇಲ್ಲಿನ ಹುಲ್ಲು ಖರೀದಿಗೆ ಅವಕಾಶ ನೀಡಬಾರದು. ಜತೆಗೆ ಸಾಗಣೆಗೆ ನಿಷೇಧ ಹೇರುವ ಮೂಲಕ ಪಶುಪಾಲಕರಿಗೆ ಮೇವು ದೊರಕುವ ರೀತಿ ಕ್ರಮವಹಿಸಬೇಕೆಂದು ಮನವಿ ಮಾಡಿದರು.
ಪಶುಪಾಲಕರಾದ ಹೊಸ ಕುರುಬರ ಬೀದಿಯ ಗೋವಿಂದ, ಮಂಜು, ಪ್ರಕಾಶ್, ರಮೇಶ್, ಹರೀಶ್, ಹಳೇ ಕುರುಬರ ಬೀದಿಯ ಮಂಜು, ನಂದೀಶ್ ಇತರರು ಇದ್ದರು.