ಚಿತ್ರದುರ್ಗ: ಐತಿಹಾಸಿಕ ಚಂದ್ರವಳ್ಳಿಯಲ್ಲಿ ಹುಲಿಗುಂದಿ ಸಿದ್ದೇಶ್ವರ ಸ್ವಾಮಿಯ ವಿಶೇಷ ಪೂಜೆ, ಮಹಾ ಅನ್ನದಾಸೋಹ ಕಾರ್ಯಕ್ರಮ ಭಾನುವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಜರುಗಿತು.
ಶ್ರಾವಣ ಮಾಸದ ಅಂಗವಾಗಿ ಚಂದ್ರವಳ್ಳಿ ವಾಯುವಿಹಾರಿ ಬಳಗದಿಂದ ಹಮ್ಮಿಕೊಂಡಿದ್ದ 25ನೇ ವರ್ಷದ ಪೂಜೆಯಲ್ಲಿ ಸ್ವಾಮಿಯ ಮೂರ್ತಿಗೆ ವಿವಿಧ ಬಗೆಯ ಪುಷ್ಪಗಳಿಂದ ವಿಶೇಷಾಲಂಕಾರ ಸೇವೆ ನೆರವೇರಿತು.
ಅನೇಕ ಭಕ್ತರು ತಂಡೋಪ-ತಂಡವಾಗಿ ದೇಗುಲಕ್ಕೆ ಭೇಟಿ ನೀಡಿ ಸ್ವಾಮಿಯ ದರ್ಶನ ಪಡೆದು ಕಣ್ತುಂಬಿಕೊಂಡರು. ಅಲ್ಲದೆ, ಭಕ್ತಿಯಲ್ಲಿ ಮಿಂದೆದ್ದರು. ಪ್ರಾತಃಕಾಲದಿಂದ ಅಭಿಷೇಕ ಸೇರಿ ನಾನಾ ಪೂಜಾ ಕೈಂಕರ್ಯಗಳು ನೆರವೇರಿದವು. ಭಕ್ತರಿಗೆ ಮಹಾಮಂಗಳಾರತಿ, ತೀರ್ಥ ವಿತರಿಸಲಾಯಿತು.
ಬೆಳಗ್ಗೆ 11ರಿಂದ ಸಂಜೆ 5ರ ವರೆಗೂ ನಡೆದ ಮಹಾ ಅನ್ನದಾಸೋಹದಲ್ಲಿ ಪಾಲ್ಗೊಂಡ ಅನೇಕ ಭಕ್ತರು ಪ್ರಸಾದ ಸ್ವೀಕರಿಸಿದರು. ಕಳೆದ 16 ವರ್ಷಗಳಿಂದ ಶ್ರಾವಣದ ಪೂಜಾ ದಿನದಂದು ದಾಸೋಹ ನಡೆಯುತ್ತಿದ್ದು, ನಿತ್ಯ ಇಲ್ಲಿಗೆ ಬರುವ ವಾಯುವಿಹಾರಿಗಳು, ಭಕ್ತರಿಂದ ದೇಣಿಗೆ ಸಂಗ್ರಹಿಸಿ ವಿಶೇಷ ಪೂಜೆ ನಡೆಸಲಾಗುತ್ತಿದೆ. ವರ್ಷದಿಂದ ವರ್ಷಕ್ಕೆ ಮೆರಗು ಪಡೆಯುತ್ತಿದೆ.
ನಗರದ ಬುರುಜನಹಟ್ಟಿ, ಹೊಳಲ್ಕೆರೆ ರಸ್ತೆ, ಧವಳಗಿರಿ ಬಡಾವಣೆ, ಬಿವಿಕೆಎಸ್ ಲೇಔಟ್, ನೆಹರು ನಗರ ಸೇರಿ ಸುತ್ತಮುತ್ತಲಿನ ಬಡಾವಣೆಗಳಿಂದ ಸುಮಾರು 5 ಸಾವಿರಕ್ಕೂ ಹೆಚ್ಚು ಮಂದಿ ಪ್ರಸಾದ ಸ್ವೀಕರಿಸಿದ್ದಾರೆ ಎಂದು ಬಳಗ ತಿಳಿಸಿದೆ.