ಗುಂಡ್ಲುಪೇಟೆ: ತಾಲೂಕಿನ ಹುಲಿಗಿನಮೊರಡಿ ವೆಂಕಟರಮಣಸ್ವಾಮಿ ಬೆಟ್ಟದ ದಾರಿಯಲ್ಲಿ ಚಿರತೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವುದು ಭಕ್ತರ ಭೀತಿಗೆ ಕಾರಣವಾಗಿದೆ.
ಕಳೆದ ಕೆಲವು ದಿನಗಳ ಹಿಂದೆ ರಸ್ತೆ ಬದಿ ಬಂಡೆಗಳ ಮೇಲೆ ಕಾಣಿಸಿಕೊಂಡ 3 ಚಿರತೆಗಳ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಸಾರ್ವಜನಿಕರಿಗೆ ತೀವ್ರ ಆತಂಕ ಮೂಡಿಸಿದೆ. ಚಿಕ್ಕ ತಿರುಪತಿ ಎಂದೇ ಖ್ಯಾತವಾಗಿರುವ ತಾಲೂಕಿನ ತೆರಕಣಾಂಬಿ ಸಮೀಪದ ಹುಲಿಗಿನಮೊರಡಿ ವೆಂಕಟರಮಣಸ್ವಾಮಿ ಬೆಟ್ಟಕ್ಕೆ ನಿತ್ಯವೂ ಸಾವಿರಾರು ಭಕ್ತರು ಆಗಮಿಸುತ್ತಾರೆ. ದೂರದ ಊರುಗಳಿಂದ ಬರುವ ಭಕ್ತರು ಬೈಕ್ ಅಥವಾ ಕಾರುಗಳಲ್ಲಿ ಆಗಮಿಸಿದರೆ ಅಕ್ಕಪಕ್ಕದ ಗ್ರಾಮದ ಜನರು ಕಾಲ್ನಡಿಗೆಯಲ್ಲಿ ತೆರಳುತ್ತಾರೆ.
ಯುವಕರು ಬೆಳಗಿನ ವೇಳೆ ವಾಯು ವಿಹಾರಕ್ಕಾಗಿ ಬೆಟ್ಟ ಹತ್ತಿಳಿಯುವ ಅಭ್ಯಾಸ ಮಾಡಿಕೊಂಡಿದ್ದಾರೆ. ಅಕ್ಕಪಕ್ಕದ ಗ್ರಾಮಗಳ ಜನರು ತಮ್ಮ ಜಾನುವಾರುಗಳನ್ನು ಮೇಯಿಸಲು ಬೆಟ್ಟದ ತಪ್ಪಲಿಗೆ ಬರುತ್ತಾರೆ. ಇಂತಹ ತಾಣದಲ್ಲಿ ಮೂರು ಚಿರತೆಗಳು ಒಟ್ಟಾಗಿ ಕಾಣಿಸಿಕೊಂಡಿರುವುದು ಭಯಹುಟ್ಟಿಸಿದೆ.
ಪ್ರತಿ ವರ್ಷವೂ ಸಂಕ್ರಾಂತಿಯ ದಿನ ಬೆಟ್ಟದಲ್ಲಿ ದೊಡ್ಡ ಜಾತ್ರೆ ನಡೆಯುತ್ತದೆ. ಇದಕ್ಕಾಗಿ ದೇವಾಲಯಕ್ಕೆ ಸುಣ್ಣಬಣ್ಣ ಹಚ್ಚುವ ಮತ್ತು ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಸಲು ಸಿದ್ಧತೆಗೆ ಈಗ ಚಾಲನೆ ದೊರಕಿದೆ. ಆದರೆ ಚಿರತೆ ಭೀತಿಯಿಂದ ಕಾರ್ಮಿಕರು ಕೆಲಸಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಅರಣ್ಯ ಇಲಾಖೆ ಚಿರತೆಗಳನ್ನು ಸೆರೆಹಿಡಿದು ಸ್ಥಳಾಂತರ ಮಾಡಬೇಕು ಎಂದು ಕಿಲಗೆರೆ ಗ್ರಾಮದ ಸಿದ್ದಮಲ್ಲಪ್ಪ ಒತ್ತಾಯಿಸಿದ್ದಾರೆ.