ಕೆ.ಆರ್.ಸಾಗರ : ಹುಲಿಕೆರೆ ಗ್ರಾಮದ ಬಿಜಿಎಸ್ ಬಾಲ ಜಗತ್ ಶಾಲೆಯಲ್ಲಿ ಬುಧವಾರ ಆಹಾರ ಮೇಳ ಏರ್ಪಡಿಸಲಾಗಿತ್ತು. ಕಾರ್ಯಕ್ರಮಕ್ಕೆ ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಕಾರ್ಯದರ್ಶಿ ಶ್ರೀ ಸೋಮೇಶ್ವರನಾಥ ಸ್ವಾಮೀಜಿ ಚಾಲನೆ ನೀಡಿದರು. ಅಹಾರಮೇಳದಲ್ಲಿ ಪ್ರತಿ ಕೊಠಡಿಗೂ ತೆರಳಿ ವೀಕ್ಷಣೆ ಮಾಡಿದರು. ವಿದ್ಯಾರ್ಥಿಗಳಿಂದ ನಡೆದ ವ್ಯಾಪಾರ, ವಹಿವಾಟು, ವಿವಿಧ ತಿನಿಸುಗಳ ಮಾರಾಟದ ಬಗ್ಗೆ ಮಾಹಿತಿ ಪಡೆದರು.
ನಂತರ ಮಾತನಾಡಿದ ಅವರು, ಈ ರೀತಿ ಮೇಳಗಳಿಂದ ವಿದ್ಯಾರ್ಥಿಗಳಲ್ಲಿ ಸಾಮಾಜಿಕ, ವ್ಯವಹಾರ ಜ್ಞಾನ ವೃದ್ಧಿಯಾಗುತ್ತದೆ ಎಂದರು. ಪಾಲಕರು ಆಹಾರ ಮೇಳಕ್ಕೆ ಭೇಟಿ ನೀಡಿ ತಮಗಿಷ್ಟವಾದ ತಿನಿಸುಗಳನ್ನು ಖರೀದಿ ಮಾಡಿದರು. ವಿದ್ಯಾರ್ಥಿಗಳು ತಮ್ಮ ತಮ್ಮ ಮಳಿಗೆಗಳಲ್ಲಿ ತಿನಿಸುಗಳನ್ನು ಕೊಳ್ಳಬೇಕು ಎಂದು ಗ್ರಾಹಕರಿಗೆ, ಪಾಲಕರಿಗೆ ಮಾಹಿತಿ ನೀಡುತ್ತಿದ್ದ ದೃಶ್ಯ ಗಮನ ಸೆಳೆಯಿತು. ಮುಖ್ಯ ಶಿಕ್ಷಕಿ ಆಶಾ ಹಾಗೂ ಶಿಕ್ಷಕರು ಇದ್ದರು.