ಕೆ.ಆರ್.ಸಾಗರ: ಅಕಾಲಿಕ ಮರಣ ಹೊಂದಿದ ನೀರುಗುಂಟಿಯ ಮಗನಿಗೆ ಕೆಲಸ ನೀಡದೆ ವಿಳಂಬ ಮಾಡುತ್ತಿರುವುದಾಗಿ ಆರೋಪಿಸಿ, ಹುಲಿಕೆರೆ ಗ್ರಾಮ ಪಂಚಾಯಿತಿ ಕಚೇರಿ ಎದುರು ಗ್ರಾ.ಪಂ. ಮಾಜಿ ಸದಸ್ಯ ಚೆಲುವರಾಜು ನೇತೃತ್ವದಲ್ಲಿ ಗ್ರಾಮಸ್ಥರು ಧರಣಿ ನಡೆಸಿದರು.
ಸುಮಾರು 20 ವರ್ಷ ಕೆಲಸ ಮಾಡಿದ ನೀರುಗುಂಟಿ ವೆಂಕಟರಮಣ ಕೆಲ ತಿಂಗಳ ಹಿಂದೆ ಮೃತಪಟ್ಟಿದ್ದು, ಅವರ ಕುಟುಂಬ ತೊಂದರೆಗೆ ಸಿಲುಕಿದೆ. ಈ ಹಿನ್ನೆಲೆಯಲ್ಲಿ ಅನುಕಂಪದಡಿ ಕೆಲಸ ಕೋರಿ ಮೃತರ ಪುತ್ರ ಆಕಾಶ 3 ತಿಂಗಳ ಹಿಂದೆ ಅರ್ಜಿ ಸಲ್ಲಿಸಿದ್ದರೂ ಕೆಲಸ ನೀಡಲು ಗ್ರಾ.ಪಂ. ಆಡಳಿತ ಮೀನಮೇಷ ಎಣಿಸುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಬೇರೊಬ್ಬರಿಗೆ ಈ ನೀರುಗಂಟಿ ಕೆಲಸ ನೀಡಲು ಗ್ರಾಮದ ಪ್ರಭಾವಿಗಳು ಹುನ್ನಾರ ನಡೆಸುತ್ತಿದ್ದು, ಒತ್ತಡಕ್ಕೆ ಮಣಿದ ಗ್ರಾ.ಪಂ ಆಡಳಿತ ಸಂತ್ರಸ್ತ ಕುಟುಂಬದವರಿಗೆ ಕೆಲಸ ನೀಡಿದೆ, ತಾ.ಪಂ ಅನುಮೋದನೆಯ ನೆಪ ಹೇಳುತ್ತಾ ಕಾಲಹರಣ ಮಾಡುತ್ತಿದೆ ಎಂದು ಆರೋಪಿಸಿದರು.
ಧರಣಿ ಸ್ಥಳಕ್ಕಾಗಮಿಸಿದ ಪಿಡಿಒ ನಟೇಶ ಮಾತನಾಡಿ, ಅನುಕಂಪದ ಮೇಲೆ ಕೆಲಸ ಕೋರಿರುವ ಅರ್ಜಿಯನ್ನು ತಾ.ಪಂ.ಗೆ ಕಳುಹಿಸಲಾಗಿದೆ. ನಿರುಗಂಟಿ ಕೆಲಸ ನೀಡಲು ಯಾರ ಪ್ರಭಾವ ಮತ್ತು ಅಮಿಷಗಳಿಗೆ ಮಣಿದಿಲ್ಲ. ನಿಯಮದಂತೆ ಕ್ರಮ ವಹಿಸಲಾಗುವುದು ಎಂದು ಧರಣಿ ನಿರತರನ್ನು ಮನವೊಲಿಸಿ, ಮನವಿ ಸ್ವೀಕರಿಸಿದರು.
ತಾ.ಪಂ ಮಾಜಿ ಉಪಾಧ್ಯಕ್ಷ ವೈರುಮುಡಿ, ಗ್ರಾ.ಪಂ ಸದಸ್ಯರಾದ ಮಜ್ಜಿಗೆಪುರ ಮಂಜುನಾಥ, ಬಂಗಾರಪ್ಪ, ಗಣೇಶ್, ಮಾಜಿ ಸದಸ್ಯ ಚೆಲುವರಾಜು, ವಿಜಯಕುಮಾರ್, ಗ್ರಾಮದ ಮುಖಂಡರ ರಾಮು, ವಿಜಿ, ಮಜ್ಜಿಗೆಪುರ ಭರತ್ ಇತರರು ಇದ್ದರು.