ಮಾಗಡಿ : ಇಲ್ಲಿಗೆ ಸಮೀಪದ ಹುಲಿಕಟ್ಟೆಯಲ್ಲಿ 5 ಎಕರೆ ವಿಸ್ತೀರ್ಣದಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ರೈತರ ಅನುಕೂಲಕ್ಕಾಗಿ ಜಿಲ್ಲಾಮಟ್ಟದ ತರಬೇತಿ ಕೇಂದ್ರ ಪ್ರಾರಂಭಿಸಲಾಗುವುದು ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ತಿಳಿಸಿದರು.
ತಾಲೂಕಿನ ಮತ್ತಿಕೆರೆ ಗ್ರಾಮದಲ್ಲಿ ಆಗಲಕೋಟೆ, ವಿಎಸ್‌ಎಸ್‌ಎಸ್ ಹಾಗೂ ಹಾಲಿನ ಡೇರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ, ಬಹುತೇಕ ರೈತರು ಇನ್ನೂ ಹಳೆಯ ಪದ್ಧತಿ ಅನುಸರಿಸುತ್ತಿರುವುದರಿಂದ ಇಳುವರಿ ಕುಂಠಿತವಾಗಿದೆ. ಆಧುನಿಕ ಪದ್ಧತಿ ಅಳವಡಿಸಿಕೊಂಡರೆ ಹೆಚ್ಚು ಇಳುವರಿ ಪಡೆದು, ಹೆಚ್ಚು ಹಣ ಗಳಿಸಬಹುದು. ಈ ನಿಟ್ಟಿನಲ್ಲಿ ಜಿಲ್ಲಾಮಟ್ಟದ ತರಬೇತಿ ಕೇಂದ್ರ ಪ್ರಾರಂಭಿಸಲಾಗುವುದು. ಇದರಿಂದ ಕುಣಿಗಲ್, ನಾಗಮಂಗಲ, ರಾಮನಗರ, ಮಾಗಡಿ, ನೆಲಮಂಗಲ ಭಾಗದ ರೈತರಿಗೆ ಅನುಕೂಲವಾಗಲಿದೆ .ಸಂಸದ ಡಿ.ಕೆ.ಸುರೇಶ್ ಅವರನ್ನು ಸೋಲಿಸಿ ಜನತೆ ತಪ್ಪುಮಾಡಿದ್ದಾರೆ. ಡಿ.ಕೆ.ಸುರೇಶ್ ಗ್ರಾಪಂಮಟ್ಟದಲ್ಲಿ ಕೆಲಸ ಮಾಡಿದವರು. ಆದರೆ, ಜನತೆ ತಡೆದುಕೊಳ್ಳಲಾಗದಂತಹ ತಪ್ಪು ಮಾಡಿದರು ಎಂದರು.
ಸಹಕಾರ ನೀಡುತ್ತೀರಾ?: ಗ್ಯಾರಂಟಿ ವಿರೋಧಿಸಿದ ಬಿಜೆಪಿ- ಜೆಡಿಎಸ್ ನಾಯಕರನ್ನು ಅಭಿನಂದಿಸುತ್ತೀರಿ, ಗ್ಯಾರಂಟಿ ನಿಲ್ಲಿಸುವಂತೆ ಸುಪ್ರೀಂಕೋರ್ಟ್‌ಗೆ ಹೋಗುತ್ತಾರೆ. ಅವರಿಗೆ ಸಹಕಾರ ನೀಡುತ್ತೀರಿ?. ನಾವು ಗ್ಯಾರಂಟಿಯ ತೆಗೆ ಅಭಿವೃದ್ಧಿಯಲ್ಲಿ ಹಿಂದೆ ಉಳಿದಿಲ್ಲ, ಜನರಿಗೆ ಸತ್ಯ ಹೇಳಿದರೂ ಪ್ರಯೋಜನವಿಲ್ಲ, ಭಾವನಾತ್ಮಕವಾಗಿ ಹೇಳುವವರಿಗೆ ಮನ್ನಣೆ ನೀಡುತ್ತಾರೆ ಎಂದು ಲೇವಡಿ ಮಾಡಿದರು.
ವಿರೋಧ ಸರಿಯಲ್ಲ : ಹೇಮಾವತಿ ಎಕ್ಸ್‌ಪ್ರೆಸ್ ಕೆನಾಲ್ ಕಾಮಗಾರಿಗೆ ತುಮಕೂರಿನವರು ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ. ಈ ಬಗ್ಗೆ ನಾನು ಕೃಷ್ಣಬೈರೇಗೌಡ, ಸಿಎಂ ಹಾಗೂ ಉಪಮುಖ್ಯಮಂತ್ರಿಗೆ ಮನವರಿಕೆ ಮಾಡಿದ್ದೇವೆ. ಹೆಚ್ಚು ಒಕ್ಕಲಿಗ ಶಾಸಕರಿರುವುದರಿಂದ ಶಾಸಕ ಎಚ್.ಸಿ.ಬಾಲಕೃಷ್ಣ ಅವರಿಗೆ ಸಚಿವರನ್ನಾಗಿ ಮಾಡಲು ಸಾಧ್ಯವಾಗದ ಕಾರಣ ಉತ್ತಮ ನಿಗಮದ ಅಧ್ಯಕ್ಷನನ್ನಾಗಿ ಮಾಡಲಾಗಿದೆ. ಮುಂದೆ ಮಂತ್ರಿಯಾಗಲಿದ್ದಾರೆ. ಇದಕ್ಕೆ ಡಿಕೆಶಿ ಆಶೀರ್ವಾದ ಇದ್ದು, ಜಿಲ್ಲೆಯ ಜನರ ಆಶೀರ್ವಾದ ಡಿ.ಕೆ. ಶಿವಕುಮಾರ್ ಮೇಲೆ ಇರಲಿ ಎಂದರು.
ಬೆಳೆಗೆ ನೂರಕ್ಕೆ ನೂರರಷ್ಟು ವೈಜ್ಞಾನಿಕವಾಗಿ ಬೆಲೆ ನೀಡಲು ರಾಹುಲ್ ಗಾಂಧಿ ಚಿಂತಿಸಿದರು. ಲೋಕಸಭೆಗೆ 20 ಸೀಟು ಬಂದಿದ್ದರೆ ರೈತರ ಪ್ರತಿ ಕುಟುಂಬಕ್ಕೆ 1 ಲಕ್ಷ ರೂ. ಜಮೆಯಾಗುತ್ತಿತ್ತು. ರಾಹುಲ್ ಗಾಂಧಿ ಅಧಿಕಾರಕ್ಕೆ ಅಂಟಿಕೊಳ್ಳದೆ ಅಧಿಕಾರವನ್ನು ಬೇರೆಯವರಿಗೆ ನೀಡಿದ್ದಾರೆ ಎಂದ ಸಚಿವರು, ನನ್ನ ತಾಲೂಕಿಗಿಂತ ರಾಮನಗರ ಜಿಲ್ಲೆಗೆ ಹೆಚ್ಚು ಯೋಜನೆಗಳನ್ನು ನೀಡುವುದಾಗಿ ತಿಳಿಸಿದರು.
ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಹಸಿರು ಕ್ರಾಂತಿ, ರಸಗೊಬ್ಬರಕ್ಕೆ ರಿಯಾಯಿತಿ ಉಚಿತ ವಿದ್ಯುತ್ ನೀಡಿದ್ದು, ಕೃಷಿಗೆ ಉತ್ತೇಜನ ನೀಡಲಾಗಿದೆ. ಹೇಮಾವತಿ ಎಕ್ಸ್‌ಪ್ರೆಸ್ ಕೆನಾಲ್‌ನಿಂದ ಮಾಗಡಿಗೆ ನೀರು ಕೊಡಲು ತುಮಕೂರು ನಾಯಕರಿಗೆ ತೊಂದರೆಯಾಗುವುದಿಲ್ಲ. ಇದರಲ್ಲಿ ಕಿತ್ತು ಕೊಡುವ ಪ್ರಶ್ನೆಯೇ ಬರುವುದಿಲ್ಲ ಎಂದರು.
ಶಾಸಕ ಎಚ್.ಸಿ.ಬಾಲಕೃಷ್ಣ ಮಾತನಾಡಿ, ಡಿ.ಕೆ.ಸುರೇಶ್ ಸೋತರು ಈ ಭಾಗದ ಕೆರೆ ತುಂಬಿಸಲು 90 ಕೋಟಿ ರೂ. ಹಣ ಮಂಜೂರು ಮಾಡಿಸಿದ್ದಾರೆ. ಕೆಲಸ ಮಾಡುವರಿಗೆ ಜನರು ಕೈ ಹಿಡಿಯುವುದಿಲ್ಲ ಎಂಬ ಭಾವನೆ ನಮಗೆ ಬಂದಿದೆ. ರೈತರ ಶ್ರೇಯೋಭಿವೃದ್ದಿಗೆ ಹಗಲು ರಾತ್ರಿ ಶ್ರಮಿಸಿದ್ದೇನೆ. ರಾಮಲಿಂಗರೆಡ್ಡಿ ಇಂದು ಕುದೂರಿಗೆ ಡಿಪೋ, ಬಸ್ ನಿಲ್ದಾಣ ಮಂಜುರಾತಿ ಮಾಡಿಕೊಟ್ಟಿದ್ದಾರೆ ಎಂದರು.
5ಲಕ್ಷ ಬಡ್ಡಿರಹಿತ ಸಾಲ: ರಾಜ್ಯಕ್ಕೆ ಬರಬೇಕಾದ ಪಾಲನ್ನು ಸುಪ್ರೀಂಕೋರ್ಟ್ ಮೂಲಕ 3.454 ಕೋಟಿ ರೂ. ಪರಿಹಾರ ಪಡೆಯಲಾಗಿದೆ. ಇದರಿಂದ 25 ಲಕ್ಷ ರೈತರ ಖಾತೆಗೆ ಹಣ ಜಮಾಮಾಡಲಾಗಿದೆ. ರೈತರಿಗೆ 1700 ಕೋಟಿ ರೂ. ಬೆಳೆ ಹಾನಿ ಪರಿಹಾರ ನೀಡಿದ್ದೇವೆ. ರೈತರಿಗೆ 3 ಲಕ್ಷ ರೂ. ಬಡ್ಡಿರಹಿತ ಸಾಲನೀಡಲಾಗುತಿತ್ತು. ಈಗ 5 ಲಕ್ಷಕ್ಕೆ ಏರಿಕೆ ಮಾಡಲಾಗಿದೆ. ರಾಜ್ಯದಲ್ಲಿ 180 ರೈತ ಸಂಪರ್ಕ ಕಟ್ಟಡ ನಿರ್ಮಿಸಲಾಗಿದೆ ಎಂದು ಎಂದು ಚಲುವರಾಯಸ್ವಾಮಿ ತಿಳಿಸಿದರು.