ಜಿಲ್ಲೆ

ಹುಲಿ ಸೆರೆಗೆ ಒತ್ತಾಯಿಸಿ ಪ್ರತಿಭಟನೆ

ಹನಗೋಡು: ಸಾಕು ಪ್ರಾಣಿಗಳನ್ನು ಕೊಂದು ಹಾಕುತ್ತಿರುವ ಹುಲಿಯನ್ನು ಸೆರೆ ಹಿಡಿಯಬೇಕೆಂದು ಒತ್ತಾಯಿಸಿ ಹನಗೋಡಿನಲ್ಲಿ ರೈತರು ಪ್ರತಿಭಟನೆ ನಡೆಸಿದರು.

ಹನಗೋಡು ಸುತ್ತಲಿನ ಗ್ರಾಮಗಳಲ್ಲಿ ಹುಲಿ ಕಾಟ ಹೆಚ್ಚಾಗಿದ್ದು ಮಂಗಳವಾರ ಹನಗೋಡಿನಲ್ಲಿ ಹಾಡಹಗಲೇ ಹಸುವಿನ ಮೇಲೆ ದಾಳಿ ನಡೆಸಿ ಕೊಂದು ಹಾಕಿತ್ತು. ಇದರಿಂದ ಆಕ್ರೋಶಗೊಂಡ ಹನಗೋಡು ಹಾಗೂ ಅಕ್ಕಪಕ್ಕದ ಗ್ರಾಮಸ್ಥರು ಹಸುವಿನ ಕಳೇಬರವನ್ನು ಮಂಗಳವಾರ ಸಂಜೆ ಹನಗೋಡಿನ ಬಸ್‌ನಿಲ್ದಾಣದ ಬಳಿಯ ರಸ್ತೆಯಲ್ಲಿಟ್ಟು ಅರಣ್ಯ ಇಲಾಖೆ ವಿರುದ್ಧ ಘೋಷಣೆಗಳನ್ನು ಕೂಗಿ ಹುಲಿ ಸೆರೆ ಹಿಡಿಯುವಂತೆ ಒತ್ತಾಯಿಸಿದರು.

ಎರಡು ವರ್ಷಗಳಿಂದ ಹನಗೋಡು ಸುತ್ತಮುತ್ತ ಹುಲಿ ದಾಳಿ ಮಾಡಿ ಜಾನುವಾರುಗಳನ್ನು ಕೊಂದು ಹಾಕುತ್ತಿದೆ. ದಾಳಿ ನಡೆಸಿದ ವೇಳೆ ಹುಲಿ ಸೆರೆಗೆ ಮನವಿ ಮಾಡಿದ್ದರೂ ಭರವಸೆ ನೀಡಿ ಹೋಗುವ ಅರಣ್ಯಾಧಿಕಾರಿಗಳು ಹುಲಿ ಸೆರೆಗೆ ಯಾವುದೇ ಕ್ರಮವಹಿಸುತ್ತಿಲ್ಲ. 15 ದಿನಗಳಿಂದ ನಾಲ್ಕಾರು ಕಡೆ ಹಗಲು ವೇಳೆಯೇ ಹುಲಿ ದಾಳಿ ನಡೆಸಿದೆ. ಹುಲಿ ಸೆರೆ ಹಿಡಿಯಲು ಅರಣ್ಯ ಇಲಾಖೆ ಕ್ರಮವಹಿಸದಿದ್ದಲ್ಲಿ ಹುಣಸೂರು ಅರಣ್ಯಇಲಾಖೆ ಕಚೇರಿ ಎದುರು ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.

ಗ್ರಾಪಂ ಸದಸ್ಯ ಶಿವಣ್ಣ, ಚಂದ್ರೇಗೌಡ, ಮರೀಗೌಡ, ಶ್ರೀಧರ್, ಸುಬ್ರಮಣಿ, ಬಾಬು, ವೆಂಕಟೇಶ್, ಮಹೇಶ್, ಸಂತೋಷ, ರಂಗಯ್ಯ, ಗ್ರಾಮಸ್ಥರು ಭಾಗವಹಿಸಿದ್ದರು.