ಎಚ್.ಡಿ.ಕೋಟೆ: ಜನವಸತಿ ಪ್ರದೇಶದ ಬಳಿ ಆಗಾಗ್ಗೆ ಕಾಣಿಸಿಕೊಳ್ಳುತ್ತಿರುವ ಹುಲಿಯನ್ನು ಸೆರೆಹಿಡಿಯುವಂತೆ ಒತ್ತಾಯಿಸಿ ಪಟ್ಟಣದಲ್ಲಿರುವ ವಲಯ ಅರಣ್ಯಾಧಿಕಾರಿಗಳ ಕಚೇರಿ ಮುಂದೆ ಶುಕ್ರವಾರ ರೈತರು ಪ್ರತಿಭಟನೆ ನಡೆಸಿದರು.
ಪಟ್ಟಣದ ವ್ಯಾಪ್ತಿಯಲ್ಲಿ ಕಳೆದ ಮೂರು-ನಾಲ್ಕು ತಿಂಗಳಿಂದ ಬೋಚಿಕಟ್ಟೆ, ಕೆ.ಜಿ.ಹುಂಡಿ, ಹೆಬ್ಬಾಳ, ಸ್ಟೇಡಿಯಂ ಬಡಾವಣೆ ಹಾಗೂ ಪಟ್ಟಣದ ಹೊರವಲಯಗಳಲ್ಲಿ ಆಗಿಂದಾಗ್ಗೆ ಹುಲಿ ಕಾಣಿಸಿಕೊಂಡು ಜನರಲ್ಲಿ ಭಯ ಹುಟ್ಟಿಸಿದೆ ಎಂದು ರೈತ ಲೋಕೇಶ್ ತಿಳಿಸಿದರು.
ಈ ಸಂಬಂಧ ರೈತರು ಆರ್‌ಎಫ್‌ಒ ಪೂಜಾ ಅವರ ಗಮನಕ್ಕೆ ವಿಚಾರ ತಂದಿದ್ದರು ಹುಲಿ ಸೆರೆಹಿಡಿಯಲು ವಿಫಲವಾಗಿದ್ದಾರೆ ಎಂದು ದೂರಿದರು.
ಶಾಂತಿಪುರ ಗ್ರಾಮದ ಯುವಕ ರಘು ತಮ್ಮ ಜಮೀನಿನಲ್ಲಿ ಬಾಳೆ ಬೆಳೆಗೆ ನೀರುಣಿಸಲು ಪೈಪ್‌ಗಳನ್ನು ಜೋಡಿಸುತ್ತಿದ್ದಾಗ, ಹುಲಿ ಏಕಾಏಕಿ ಮೇಲೆ ಹಾರಿತು. ರಘು ಅವರ ಚೀರಾಟ ಕೇಳಿದ ನಂತರ ಹುಲಿ ಸ್ಥಳದಿಂದ ಓಡಿಹೋಯಿತು. ಇದರಿಂದ ಯುವಕ ಪ್ರಾಣಾಪಾಯದಿಂದ ತಪ್ಪಿಸಿಕೊಳ್ಳುವಂತಾಯಿತು ಎಂದು ಸ್ಮರಿಸಿದರು.
ಅಲ್ಲದೆ 15 ದಿನಗಳ ಹಿಂದೆ ಹೆಬ್ಬಾಳ ಮತ್ತು ಸ್ಟೇಡಿಯಂ ಬಡಾವಣೆ ಹತ್ತಿರದ ಜಮೀನಿನಲ್ಲಿ ಹುಲಿ ಕಾಣಿಸಿಕೊಂಡಿತ್ತು. ನಾಗಮ್ಮ ಬಸವರಾಜು ಅವರ ಜಮೀನಿನಲ್ಲಿ ಜಮೀನು ನೋಡಿಕೊಳ್ಳುತ್ತಿದ್ದ ಚಂದ್ರು ಅವರ ಮೇಲೆ ದಾಳಿ ಮಾಡಲು ಹುಲಿ ಮುಂದಾಗಿದ್ದರೂ, ತಂತಿ ಬೇಲಿಯ ಹಿನ್ನೆಲೆೆಯಲ್ಲಿ ದಾಳಿಯಿಂದ ಚಂದ್ರು ಪಾರಾದರು.
ಘಟನೆ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಮಹೇಂದ್ರ ಮತ್ತು ಭೀಮ ಆನೆಗಳನ್ನು ಕಾರ್ಯಾಚರಣೆಗೆ ಬಳಸಿಕೊಂಡರೂ, ಹುಲಿ ತಪ್ಪಿಸಿಕೊಂಡಿತು. ನಂತರ ಕಾರ್ಯಾಚರಣೆ ಸ್ಥಗಿತಗೊಳಿಸಲಾಯಿತು. ಆದರೆ ಕಳೆದ ಎರಡು ದಿನಗಳಿಂದ ಶಾಂತಿಪುರ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಮತ್ತೆ ಹುಲಿ ಕಾಣಿಸಿಕೊಂಡಿದ್ದು, ರೈತರಿಗೆ ಭೀತಿ ಉಂಟುಮಾಡುತ್ತಿದೆ ಎಂದು ಪ್ರತಿಭಟನಾನಿರತರು ತಿಳಿಸಿದರು.
ಆಧಿಕಾರಿಗಳಿಗೆ ಧಿಕ್ಕಾರ ಘೋಷಣೆ ಕೂಗಿ ಹುಲಿಯನ್ನು ತಕ್ಷಣ ಸೆರೆ ಹಿಡಿಯುವಂತೆ ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ರೈತರು ಹಾಗೂ ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು. ಪ್ರತಿಭಟನೆಯಲ್ಲಿ ಪುರಸಭೆ ಸದಸ್ಯ ರಾಜು, ಲೋಕೇಶ್, ರೈತ ಸಂಘದ ಉಪಾಧ್ಯಕ್ಷ ಮಾದೇವಯ್ಯ, ಚಾಕಳ್ಳಿ ಕೃಷ್ಣ, ಸಂತೋಷ್, ಸಾಧಿಕ್, ಸಿಕಂದರ್, ಶಫಿ, ಕಲಂದರ್, ಅಬ್ದುಲ್ ರೆಹಮಾನ್, ದೊರೆರಾಜು, ಚೆನ್ನನಾಯಕ, ಶಿವರಾಜು, ಬೈರನಾಯಕ, ಮಂಜುನಾಯಕ, ಸಣ್ಣಸ್ವಾಮಿ, ಸುರೇಶ್, ರಾಜು, ಪ್ರವೀಣ, ಅಜಾರುದ್ದೀನ್, ಶಿವಮೂರ್ತಿ, ಸೀಗನಾಯಕ, ಅಭಿನಾಶ್, ಆನಂದ, ಪ್ರತಾಪ್ ಇತರರು ಇದ್ದರು.