ಗುಂಡ್ಲುಪೇಟೆ ತಾಲೂಕಿನ ಜಕ್ಕಹಳ್ಳಿ ಗ್ರಾಮದ ತಮ್ಮ ಜಮೀನಿನಲ್ಲಿ ಚಿತ್ರನಟ ಗಣೇಶ್ ಕಟ್ಟಡ ನಿರ್ಮಾಣ ಮಾಡುತ್ತಿರುವುದು. 
ಜಿಲ್ಲೆ

ಹುಲಿ ಸಂರಕ್ಷಿತ ಪ್ರದೇಶದಲ್ಲಿ ದೊಡ್ಡ ಕಟ್ಟಡ

ಗುಂಡ್ಲುಪೇಟೆ : ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಪರಿಸರ ಸೂಕ್ಷ್ಮ ವಲಯದ ತಮ್ಮ ಜಮೀನಿನಲ್ಲಿ ಚಿತ್ರನಟ ಗಣೇಶ ಅವರು ದೊಡ್ಡ ಕಟ್ಟಡ ನಿರ್ಮಿಸುತ್ತಿದ್ದು, ಕ್ರಮ ಕೈಗೊಳ್ಳಲು ನಿರ್ದೇಶನ ಕೋರಿ ಅರಣ್ಯ ಸಂರಕ್ಷಣಾಧಿಕಾರಿಗಳು ಸೂಕ್ಷ್ಮಪರಿಸರ ಸಮಿತಿ ಅಧ್ಯಕ್ಷರಿಗೆ ಪತ್ರ ಬರೆದಿದ್ದಾರೆ.

ಹುಲಿ ಯೋಜನೆಯ ಕುಂದಕೆರೆ ವಲಯದ ಕಾಡಂಚಿನ ಜಕ್ಕಹಳ್ಳಿ ಗ್ರಾಮದ ಸರ್ವೆ ನಂಬರ್ 105 ರಲ್ಲಿ 1 ಎಕರೆ 24 ಗುಂಟೆ ಜಮೀನನ್ನು ಗಣೇಶ ಕಿಶನ್ ಕಳೆದ ಎರಡು ವರ್ಷಗಳ ಹಿಂದೆ ಖರೀದಿಸಿದ್ದರು. 2023ರ ಮಾರ್ಚ್ 15ರಂದು ವಾಸ ಹಾಗೂ ಕೃಷಿ ಉಪಕರಣಗಳನ್ನು ಇರಿಸಲು ಮನೆ ನಿರ್ಮಿಸಲು ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಸ್ವಂತ ಉಪಯೋಗಕ್ಕೆ ಮನೆ ನಿರ್ಮಿಸಲು ಬಂಡೀಪುರ ನಿರ್ದೇಶಕರು ಅನುಮತಿ ನೀಡಿದ್ದರು. ಅನುಮತಿ ಪಡೆದಿದ್ದಕ್ಕಿಂತ ಹೆಚ್ಚು ಸ್ಥಳದಲ್ಲಿ ಮನೆ, ವಾಣಿಜ್ಯ ಉದ್ದೇಶದ ಕಟ್ಟಡ ನಿರ್ಮಿಸುವಂತಿಲ್ಲ ಎಂಬ ಷರತ್ತನ್ನೂ ಹಾಕಲಾಗಿತ್ತು.

ಆದರೂ ಗಣೇಶ್ ಜಮೀನಿನಲ್ಲಿ ಯಾವುದೇ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳದಿದ್ದರೂ ದೊಡ್ಡ ಪ್ರಮಾಣದಲ್ಲಿ ಟ್ರ್ಯಾಕ್ಟರ್ ಹಾಗೂ ಟಿಪ್ಪರ್ ಬಳಸಿ ಭೂಮಿಯನ್ನು ಸಮತಟ್ಟು ಮಾಡಿ ಬೃಹತ್ ಕಟ್ಟಡ ನಿರ್ಮಾಣ ಕೈಗೊಂಡಿದ್ದರು. ಇದು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಪರಿಸರ ಸೂಕ್ಷ್ಮ ವಲಯದಲ್ಲಿದ್ದು ಈ ಪ್ರದೇಶದಲ್ಲಿ ಕಣಿಯನಪುರ ಆನೆ ಕಾರಿಡಾರ್ ಹಾದು ಹೋಗುತ್ತಿದ್ದರೂ ಗಣೇಶ್ ತಮ್ಮ ಜಮೀನಿನಲ್ಲಿ ಬೃಹತ್ ಕಟ್ಟಡ ನಿರ್ಮಾಣ ಮಾಡುತ್ತಿದ್ದಾರೆ. ಕಾಡಂಚಿನ ಗ್ರಾಮಗಳ ಜನರು ಮನೆಕಟ್ಟಲು ಅನುಮತಿ ಕೋರಿದರೆ ಸತಾಯಿಸುವ ಅರಣ್ಯ ಇಲಾಖೆ ಪರಿಸರ ಸೂಕ್ಷ್ಮ ವಲಯ ಹಾಗೂ ಆನೆ ಕಾರಿಡಾರ್ ಸಂರಕ್ಷಿಸಬೇಕಾದ ಮಾನಿಟರಿಂಗ್ ಕಮಿಟಿ ಸೆಲೆಬ್ರಿಟಿಗಳು ದೊಡ್ಡ ದೊಡ್ಡ ಕಟ್ಟಡ ನಿರ್ಮಿಸಲು ಅವಕಾಶ ನೀಡಿದೆ. ಇತ್ತಿಚೀನ ದಿನಗಳಲ್ಲಿ ಪ್ರಭಾವಿ ವ್ಯಕ್ತಿಗಳಿಗೆ ಪರಿಸರ ಸೂಕ್ಷ್ಮ ವಲಯದಲ್ಲಿ ಕಟ್ಟಡ ನಿರ್ಮಾಣ ಮಾಡಿಕೊಳ್ಳಲು ಅರಣ್ಯ ಇಲಾಖೆ ಅನುಮತಿ ನೀಡುತ್ತಿರುವುದರಿಂದ ಮಾನವ ವನ್ಯಜೀವಿ ಸಂಘರ್ಷ ಹೆಚ್ಚುತ್ತಿದ್ದು ಇದರಿಂದ ರೈತರಿಗೆ ತೊಂದರೆ ಉಂಟಾಗುತ್ತಿದೆ. ಆದ್ದರಿಂದ, ಮುಂದೆ ಯಾವುದೇ ರೀತಿಯಲ್ಲಿ ಅನುಮತಿ ನೀಡಬಾರದು ಎಂದು ಪರಿಸರವಾದಿಗಳು ಆಕ್ರೋಶ ವ್ಯಕ್ತಪಡಿಸಿದ್ದರು.

ಈ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾದ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲು ನಿರ್ದೇಶನ ಕೋರಿ ಅರಣ್ಯ ಸಂರಕ್ಷಣಾಧಿಕಾರಿ ಡಾ.ರಮೆಶ್ ಕುಮಾರ್ ಸೂಕ್ಷ್ಮಪರಿಸರ ಸಮಿತಿ ಅಧ್ಯಕ್ಷರಾದ ಮೈಸೂರಿನ ಪ್ರಾದೇಶಿಕ ಆಯುಕ್ತರಿಗೆ ಪತ್ರ ಬರೆದಿದ್ದಾರೆ.