?????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????? 
ಜಿಲ್ಲೆ

ಹುಲಿ ಸಂರಕ್ಷಿತ ಪ್ರದೇಶ ಘೋಷಣೆ ಕೈ ಬಿಡಲಿ

ಹನೂರು: ಮಲೆಮಹದೇಶ್ವರ ವನ್ಯಜೀವಿ ಧಾಮವನ್ನು ಹುಲಿ ಸಂರಕ್ಷಿತ ಅರಣ್ಯ ಪ್ರದೇಶ ಘೋಷಿಸುವುದನ್ನು ಕೈ ಬಿಡಬೇಕು. ರೈತರಿಗೆ ನೀರಾವರಿ, ಗ್ರಾಮಗಳಿಗೆ ಮೂಲಸೌಕರ್ಯ ಒದಗಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು ಎಂದು ರೈತ ಸಂಘದ ತಾಲೂಕು ಅಧ್ಯಕ್ಷ ಅಮ್ಜಾದ್‌ಖಾನ್ ಎಚ್ಚರಿಸಿದರು.

ಪಟ್ಟಣದ ಲೋಕೋಪಯೋಗಿ ಇಲಾಖೆಯ ಅತಿಥಿಗೃಹದ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ರೈತ ಮುಖಂಡರ ಸಭೆಯಲ್ಲಿ ಮಾತನಾಡಿ, ಹನೂರು ತಾಲೂಕು ಜಿಲ್ಲೆಯಲ್ಲಿಯೇ ಹೆಚ್ಚು ವಿಸ್ತೀರ್ಣವನ್ನು ಹೊಂದಿದ್ದು ಕಾಡಂಚಿನಿಂದ ಕೂಡಿದೆ. ಆದರೆ, ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಕೆಲವೊಂದು ಗ್ರಾಮಗಳಲ್ಲಿ ಅಗತ್ಯ ಮೂಲಸೌಕರ್ಯವಿಲ್ಲ. ಜತೆಗೆ ಜಲಾಶಯಗಳಿದ್ದರೂ ಕೃಷಿಗೆ ಸಮರ್ಪಕ ನೀರಾವರಿ ಸೌಕರ್ಯವಿಲ್ಲ. ಸಮಸ್ಯೆಗಳನ್ನು ಬಗೆಹರಿಸುವಂತೆ ಹಲವು ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಅ.6 ರಂದು ತಾಲೂಕಿನ ರಾಮಾಪುರದಿಂದ ಚಾ.ನಗರ ಜಿಲ್ಲಾಡಳಿತ ಕಚೇರಿಗೆ ಬೈಕ್ ರ‌್ಯಾಲಿ ಮೂಲಕ ತೆರಳಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ. ಆದ್ದರಿಂದ ಪ್ರತಿಭಟನೆಗೆ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಭಾಗವಹಿಸುವಂತೆ ಮನವಿ ಮಾಡಿದರು.

ಉಡುತೊರೆ ಹಾಗೂ ಕೀರೆಪಾತಿ ಜಲಾಶಯಕ್ಕೆ ನೀರು ತುಂಬಿಸುವ ಯೋಜನೆಗೆ ಡಿಪಿಆರ್ ಸಿದ್ಧವಾಗಿದೆ. ಅನುಮೋದನೆಯಷ್ಟೇ ಬಾಕಿ ಇದೆ. ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈ ಬಗ್ಗೆ ಗಮನಹರಿಸಿ ಜಲಾಶಯಗಳಿಗೆ ನೀರು ತುಂಬಿಸುವುದರ ಜತೆಗೆ ಕೃಷಿಗೆ ಏತ ನೀರಾವರಿ ಸೌಕರ್ಯವನ್ನು ಒದಗಿಸಬೇಕು. ಮಿನ್ನತ್ತುಹಳ್ಳ ಜಲಾಶಯಕ್ಕೂ ನೀರು ತುಂಬಿಸಬೇಕು. ವಿದ್ಯುತ್ ಸಮಸ್ಯೆ ಎದುರಿಸುತ್ತಿರುವ ಹೂಗ್ಯಂನಲ್ಲಿ ಪವರ್ ಸ್ಟೇಷನ್ ಸ್ಥಾಪಿಸಬೇಕು. ಗೋಪಿನಾಥಂ ಗ್ರಾಪಂ ವ್ಯಾಪ್ತಿಯ ಗ್ರಾಮಗಳಿಗೆ ಅಗತ್ಯ ಸೌಕರ್ಯವನ್ನು ಒದಗಿಸಿ ಸಮಸ್ಯೆ ಬಗೆಹರಿಸಬೇಕು. ಇಲ್ಲವಾದಲ್ಲಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ಪ್ರತಿಭಟಿಸುವುದಾಗಿ ತಿಳಿಸಿದರು.

ಟೈಗರ್ ಪ್ರಾಜೆಕ್ಟ್ ಬೇಡ:

ಮಲೆಮಹದೇಶ್ವರ ವನ್ಯಜೀವಿ ಧಾಮದ ವ್ಯಾಪ್ತಿಯ ಅರಣ್ಯ ಹಾಗೂ ಕಾಡಂಚಿನ ಗ್ರಾಮಗಳಲ್ಲಿ ಜನರು ಹಲವು ದಶಕಗಳಿಂದ ವಾಸಿಸುತ್ತಿದ್ದಾರೆ. ಈವರೆಗೂ ಸಮರ್ಪಕ ಮೂಲಸೌಕರ್ಯವಿಲ್ಲ. ಮ.ಬೆಟ್ಟಕ್ಕೆ ಹೆಚ್ಚಿನ ಭಕ್ತರು ಕಾಲ್ನಡಿಗೆಯಲ್ಲಿ ತೆರಳುತ್ತಾರೆ. ಸರ್ಕಾರ ಮಲೆಮಹದೇಶ್ವರ ವನ್ಯಜೀವಿ ಧಾಮವನ್ನು ಹುಲಿ ಸಂರಕ್ಷಿತ ಅರಣ್ಯ ಪ್ರದೇಶವಾಗಿ ಘೋಷಿಸಲು ಮುಂದಾಗಿದೆ. ಒಂದು ವೇಳೆ ಟೈಗರ್ ಪ್ರಾಜೆಕ್ಟ್ ಜಾರಿಯಾದರೆ ತುಂಬಾ ತೊಂದರೆಯಾಗಲಿದೆ. ಆದ್ದರಿಂದ ಸರ್ಕಾರ ಹುಲಿ ಯೋಜನೆಯನ್ನು ಕೈ ಬಿಡಬೇಕು ಎಂದು ಒತ್ತಾಯಿಸಿದರು. ಸಂಘದ ಜಿಲ್ಲಾ ಉಪಾಧ್ಯಕ್ಷ ಲೋಕೇಶ್‌ಗೌಡ, ಕಾರ್ಯದರ್ಶಿ ಪೂಂಗುಡಿ, ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ರಾಜಮಣಿ, ಜಿಲ್ಲಾ ಸಂಘದ ಕಾಯಂ ಸದಸ್ಯ ನಾಗರಾಜು, ಪದಾಧಿಕಾರಿಗಳಾದ ಪಳನಿಸ್ವಾಮಿ, ಕೂಡಲೂರು ವೆಂಕಟೇಶ್, ಶಾಂತಿ, ಸೌಮ್ಯಾ ಇದ್ದರು.