ಜಿಲ್ಲೆ

ಹುಲಿ ದಾಳಿಗೆ ಹಸು ಸಾವು

ಮೂಡಿಗೆರೆ: ಪಟ್ಟಣ ಸಮೀಪದ ಕುನ್ನಳ್ಳಿಯಲ್ಲಿ ಭಾನುವಾರ ರಾತ್ರಿ ಹಸುವೊಂದನ್ನು ಹುಲಿ ಕೊಂದು ಹಾಕಿರುವುದು ಬೆಳಕಿಗೆ ಬಂದಿದೆ.

ಕುನ್ನಳ್ಳಿ ಕೃಷಿಕ ಕೆ.ಆರ್.ಶಿವಾನಂದ ಅವರ ಭತ್ತದ ಗದ್ದೆಯಲ್ಲಿ ಗ್ರಾಮದ ಕೆ.ಸಿ.ಪ್ರದೀಪ್ ಅವರ ಸಿಂಧಿ ಹಸುವಿನ ಕಳೇಬರ ಪತ್ತೆಯಾಗಿದೆ. ಸ್ಥಳದಲ್ಲಿ ಹುಲಿ ಹೆಜ್ಜೆ ಹೋಲುವ ಗುರುತುಗಳು ಪತ್ತೆಯಾಗಿದ್ದರಿಂದ ಅನುಮಾನಗೊಂಡ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಪಶುವೈದ್ಯರು ಸ್ಥಳ ಪರಿಶೀಲಿಸಿದಾಗ ಹುಲಿ ಹೆಜ್ಜೆ ಎಂಬುದು ಖಚಿತವಾಗಿದೆ. ಹುಲಿ ದಾಳಿಯಿಂದ ಹಸು ಮೃತಪಟ್ಟಿರುವುದನ್ನು ಅಧಿಕಾರಿಗಳ ತಂಡ ದೃಢಪಡಿಸಿದೆ. ಹಸುವಿನ ಕುತ್ತಿಗೆ ಭಾಗದಲ್ಲಿ ಹುಲಿ ದಾಳಿ ಮಾಡಿರುವ ಗಾಯದ ಗುರುತು ಪತ್ತೆಯಾಗಿದೆ. ಪಶುವೈದ್ಯರು ಹಸುವಿನ ಮರಣೋತ್ತರ ಪರೀಕ್ಷೆ ನಡೆಸಿದರು. ಸ್ಥಳದಲ್ಲಿ ಅರಣ್ಯ ಇಲಾಖೆಯಿಂದ ಕ್ಯಾಮರಾ ಅಳವಡಿಸಿ ಹುಲಿಯ ಚಲನವಲನದ ಮೇಲೆ ನಿಗಾ ಇಡಲಾಗಿದೆ.

ಮೂಡಿಗೆರೆ ವಲಯ ಅರಣ್ಯಾಧಿಕಾರಿ ಕಾವ್ಯಾ, ಉಪ ವಲಯ ಅರಣ್ಯಾಧಿಕಾರಿ ಅಶ್ವತ್ಥ್, ಬೀಟ್ ಫಾರೆಸ್ಟರ್ ಸುಮಂತ್, ಶಿವಶಂಕರ್, ರವಿ ಕುನ್ನಳ್ಳಿ ಇದ್ದರು.