ಹಸುವಿನ ಮೇಲೆ ಹುಲಿ ದಾಳಿ ನಡೆಸಿರುವ ಬಗ್ಗೆ ಅರಣ್ಯ ಇಲಾಖೆ ಪರಿಶೀಲನೆ ನಡೆಸಿತು. 
ಜಿಲ್ಲೆ

ಹುಲಿ ದಾಳಿಗೆ ಹಸು ಬಲಿ

Kodagu

ಗೋಣಿಕೊಪ್ಪ:
ಘಟನೆ ನಿಟ್ಟೂರು-ಕಾರ್ಮಾಡು ಗ್ರಾಮದ ಬೆಂಡೆಕುತ್ತಿಯಲ್ಲಿ ಗುರುವಾರ ಹಸುವಿನ ಮೇಲೆ ಹುಲಿ ದಾಳಿ ನಡೆಸಿ ಕೊಂದುಹಾಕಿದೆ. ಸ್ಥಳದಲ್ಲಿದ್ದ ಮಾಲೀಕ ಕೂಗಿಕೊಂಡಾಗ ಹುಲಿ ತೋಟ ಸೇರಿಕೊಂಡಿದೆ. ಅರಣ್ಯ ಇಲಾಖೆ ತಂಡ ಸ್ಥಳಕ್ಕೆ ಆಗಮಿಸಿ ಕ್ರಮಕ್ಕೆ ಮುಂದಾಗಿದೆ.

ವಕ್ಕಲಿಗರ ರಾಜು ಎಂಬುವರು 13 ಹಸುಗಳನ್ನು ಗದ್ದೆಯಲ್ಲಿ ಮೇಯಿಸುತ್ತಿದ್ದಾಗ ಹುಲಿ ದಾಳಿ ಮಾಡಿದೆ. ಒಂದು ಹಸು ಸ್ಥಳದಲ್ಲಿಯೇ ಸಾವಿಗೀಡಾಗಿದ್ದು, ಹುಲಿ ಬೇರೆ ಹಸುಗಳ ಮೇಲೆಯೂ ದಾಳಿಗೆ ಮುಂದಾಗಿತ್ತು. ಈ ಸಂದರ್ಭ ರಾಜು ಕೂಗಿಕೊಂಡ ಕಾರಣ ಹುಲಿ ಸ್ಥಳದಿಂದ ಕಾಲ್ಕಿತ್ತಿದೆ. ಸ್ಥಳಕ್ಕೆ ನಾಗರಹೊಳೆ ಎಸಿಎಫ್ ಗೋಪಾಲ್, ಕಲ್ಲಳ್ಳ ವಲಯ ಅಧಿಖಾರಿ ಚೌಗುಲೆ, ಪಶು ವೈದ್ಯಾಧಿಕಾರಿ ಡಾ. ಭವಿಷ್ಯಕುಮಾರ್ ಆಗಮಿಸಿ ಪರಿಶೀಲನೆ ನಡೆಸಿದರು. ಸ್ಥಳದಲ್ಲಿ ಕ್ಯಾಮರಾ ಅಳವಡಿಸಿದ್ದು, ಇಡೀ ಗ್ರಾಮ ಭಯದ ವಾತಾವರಣ ಸೃಷ್ಟಿಯಾಗಿದೆ. ನಿಟ್ಟೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಕಾಟಿಮಾಡ ಶರೀನ್ ಮುತ್ತಣ್ಣ, ಉಪಾಧ್ಯಕ್ಷೆ ಕವಿತಾ ಪ್ರಭು ಕ್ರಮಕ್ಕೆ ಒತ್ತಾಯಿಸಿದರು.