ಚಾಮರಾಜನಗರ: ತಾಲೂಕಿನ ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯ ಪ್ರದೇಶದಲ್ಲಿ ಬೇರೊಂದು ಹುಲಿಯೊಂದಿಗೆ ಕಾದಾಡಿ ಗಾಯಗೊಂಡಿದ್ದ ಹೆಣ್ಣು ಹುಲಿ ಆಹಾರಕ್ಕಾಗಿ ಸೋಲಿಗ ಮಹಿಳೆ ಬಲಿಯನ್ನು ಪಡೆದಿದೆ. ಮತ್ತೋರ್ವನ ಮೇಲೆ ದಾಳಿ ಮಾಡಿ ಗಂಭೀರ ಗಾಯಗೊಳಿಸಿದೆ. ತಕ್ಷಣ ಕಾರ್ಯಾಚರಣೆಗಿಳಿದ ಅರಣ್ಯ ಇಲಾಖೆ ಹುಲಿಯನ್ನು ಸೆರೆ ಹಿಡಿದಿದೆ.
ಬೇಡಗುಳಿ ಅರಣ್ಯ ಪ್ರದೇಶದಲ್ಲಿ 9-10 ವರ್ಷದ ಹೆಣ್ಣು ಹುಲಿ ದಾಳಿಗೆ ರಾಮಯ್ಯನಪೋಡಿನಲ್ಲಿ ವಾಸವಿದ್ದ ರಂಗಮ್ಮ(55) ಮೃತಪಟ್ಟಿದ್ದು, ಇದೇ ಹಾಡಿಯ ರವಿ(48) ತೀವ್ರಗಾಯಗೊಂಡಿದ್ದಾನೆ. ಈ ಪೋಡಿನೊಳಗೆ ಸುಮಾರು 6-7 ಕುಟುಂಬ ವಾಸವಿದೆ. ರವಿ ಸೋಮವಾರ ರಾತ್ರಿ ಪಕ್ಕದಲ್ಲಿರುವ ಸಂಬಂಧಿಕರ ಮನೆಗೆ ಬಂದು ಬಹಿರ್ದೆಸೆಗಾಗಿ ಹೊರಗೆ ಹೋದಾಗ ಹುಲಿ ದಾಳಿ ಮಾಡಿದೆ. ತಲೆ, ಕಾಲಿನ ಭಾಗದಲ್ಲಿ ಗಂಭೀರ ಪೆಟ್ಟಾಗಿದೆ. ತಕ್ಷಣ ಇವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಈ ಕುರಿತು ರವಿ ತಾಯಿ ಜಯಮ್ಮ ಮಾತನಾಡಿ, ಒಂದು ತಿಂಗಳಿನಿಂದ ಹುಲಿ ಓಡಾಡುತ್ತಿತ್ತು. ರಾತ್ರಿ ಸಂಬಂಧಿಕರ ಮನೆಗೆ ಹೋಗಿದ್ದ ರವಿ ಬಹಿರ್ದೆಸೆಗಾಗಿ ಹೊರಗೆ ಹೋದಾಗ ಹುಲಿ ದಾಳಿ ಮಾಡಿದೆ. ಸಂಬಂಧಿಕರು ಕಿರುಚಿಕೊಂಡಾಗ ಓಡಿ ಹೋಯಿತು ಎಂದಿದ್ದಾರೆ. ಇನ್ನು ಮಂಗಳವಾರ ಬೆಳಗ್ಗೆ ಬಹಿರ್ದೆಸೆಗೆ ತೆರಳಿದ್ದ ವೇಳೆ ರಂಗಮ್ಮನ ಮೇಲೆ ಹುಲಿ ದಾಳಿ ಮಾಡಿದೆ. ರಂಗಮ್ಮ ಸ್ಥಳದಲ್ಲೇ ಮೃತಪಟ್ಟಳು.
ಬಲಿಪಡೆದ ಹುಲಿ ಸೆರೆ:
ರಂಗಮ್ಮ ಮತ್ತು ರವಿ ಮೇಲೆ ದಾಳಿ ಮಾಡಿದ ಹುಲಿಯನ್ನು ಅರಣ್ಯ ಇಲಾಖೆ ಬೆಳಗ್ಗೆ ಕಾರ್ಯಾಚರಣೆ ಮಾಡಿ ಸಂಜೆಯೊಳಗೆ ಸೆರೆ ಹಿಡಿದಿದೆ. ಭೀಮ ಮತ್ತು ಗಜೇಂದ್ರ, ಶ್ರೀಕಂಠ ಮತ್ತು ಇನ್ನೊಂದು ಸಾಕಾನೆಗಳನ್ನು ಬಳಸಿ ಬೇಡಗುಳಿ ಕ್ರಾಸ್ ಬಳಿ ಹುಲಿಯನ್ನು ಸೆರೆ ಹಿಡಿಯಲಾಗಿದೆ. ಕಾರ್ಯಾಚರಣೆಯಲ್ಲಿ 85-90 ಸಿಬ್ಬಂದಿ ಪಾಲ್ಗೊಂಡಿದ್ದರು.
ಬಲೆಗೆ ಬಿದ್ದ ಹುಲಿಯ ಮೈ ಮೇಳೆ ಗಾಯಗಳಾಗಿವೆ. ಹಲ್ಲಿಗೆ ಪೆಟ್ಟಾಗಿದೆ. ಇದನ್ನು ಗಮನಿಸಿದ ಅರಣ್ಯ ಇಲಾಖೆ ಅಧಿಕಾರಿಗಳು, ಬೇರೊಂದು ಹುಲಿಯೊಂದಿಗೆ ಕಾಡಾಡುವಾಗ ಗಾಯಗಳಾಗಿ ಆಹಾರಕ್ಕಾಗಿ ಮನುಷ್ಯರ ಮೇಲೆ ದಾಳಿ ಮಾಡಿರಬಹುದು ಎಂದು ಅಂದಾಜಿಸಿದ್ದಾರೆ.
ಅರಣ್ಯ ಸಚಿವರಿಂದ ಸಂತಾಪ:
ಹುಲಿ ದಾಳಿಗೆ ರಂಗಮ್ಮಮೃತಪಟ್ಟಿರುವ ಬಗ್ಗೆ ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತ ರಂಗಮ್ಮ ಅವರ ಕುಟುಂಬದ ಸದಸ್ಯರಿಗೆ ನೋವು ಸಹಿಸಿಕೊಳ್ಳುವ ಶಕ್ತಿಯನ್ನು ಭಗವಂತ ನೀಡಲಿ, ಮೃತರ ಆತ್ಮಕ್ಕೆ ಶಾಂತಿ ದೊರಕಲಿ ಎಂದು ಪ್ರಾರ್ಥಿಸಿದ್ದಾರೆ. ಹುಲಿ ದಾಳಿಯಿಂದ ಗಾಯಗೊಂಡಿರುವ ರವಿ ಶೀಘ್ರ ಗುಣಮುಖರಾಗಲಿ,
ರವಿ ಅವರ ಚಿಕಿತ್ಸಾ ವೆಚ್ಚ ಭರಿಸಲು ಮತ್ತು ಮೃತರ ಹತ್ತಿರದ ಬಂಧುಗಳಿಗೆ ಪರಿಹಾರದ ಮೊತ್ತ ವಿತರಿಸುವಂತೆಯೂ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಕಾಡಿನಂಚಿನ ಜನರು ರಾತ್ರಿಯ ವೇಳೆ ಮತ್ತು ಮುಂಜಾನೆ ವನ ಪ್ರದೇಶದಲ್ಲಿ ಸಂಚರಿಸುವಾಗ ಎಚ್ಚರಿಕೆ ವಹಿಸುವಂತೆ ಮನವಿ ಮಾಡಿದ್ದಾರೆ.
ಮನುಷ್ಯರ ರಕ್ತದ ರುಚಿ ಕಂಡ ಹುಲಿ ಅಪಾಯಕಾರಿ, ಹೀಗಾಗಿ ಕೂಡಲೇ ಹುಲಿಯನ್ನು ಸೆರೆ ಹಿಡಿಯಲು ಕಾರ್ಯಾಚರಣೆ ಆರಂಭಿಸುವಂತೆ ಸೂಚಿಸಿದ್ದು, ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಹುಲಿಯನ್ನು ಸೆರೆ ಹಿಡಿದಿದ್ದಾರೆ ಎಂದು ತಿಳಿಸಿದ್ದಾರೆ.
ಶಾಸಕರಿಂದ ವೈಯಕ್ತಿಕ ಪರಿಹಾರ:
ಸಿಮ್ಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳು ರವಿಯ ಆರೋಗ್ಯ ವಿಚಾರಿಸಿದ ಶಾಸಕ ಸಿ.ಪುಟ್ಟರಂಗಶೆಟ್ಟಿ ವೈಯಕ್ತಿಕವಾಗಿ ಪರಿಹಾರ ನೀಡಿದರು. ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಬಿಂದ್ಯಾ ಆಸ್ಪತ್ರೆಗೆ ಭೇಟಿ ನೀಡಿ ರವಿ ಆರೋಗ್ಯ ವಿಚಾರಿಸಿದರು.