ಮೈಸೂರು: ಹುಲಿ ದಾಳಿಯಿಂದ ಮೃತಪಟ್ಟ ರಾಜಶೇಖರ್ ಅವರ ಕುಟುಂಬ ಹಾಗೂ ರೈತ ಮುಖಂಡರು ಮೈಸೂರು ಸರ್ಕಾರಿ ವೈದ್ಯಕೀಯ ಕಾಲೇಜಿನ ಶವಾಗಾರದ ಎದುರು ಸೋಮವಾರ ಪ್ರತಿಭಟನೆ ನಡೆಸಿದರು. ಈ ವೇಳೆ ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಸಚಿವ ಈಶ್ವರ ಖಂಡ್ರೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸರಗೂರು ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಂಚಿನ ನುಗು ವನ್ಯಜೀವಿ ವಲಯ ಅರಣ್ಯದಂಚಿನ ಬೆಣ್ಣೆಗೆರೆ ಗ್ರಾಮದಲ್ಲಿ ಹುಲಿ ದಾಳಿಯಿಂದ ರೈತ ರಾಜಶೇಖರ್ ಭಾನುವಾರ ಮೃತಪಟ್ಟಿದ್ದರು. ಮರಣೋತ್ತರ ಪರೀಕ್ಷೆಗಾಗಿ ನಗರಕ್ಕೆ ತರಲಾಗಿತ್ತು. ಈ ಸಂದರ್ಭದಲ್ಲಿ ರೈತ ಮುಖಂಡರು ಪ್ರತಿಭಟನೆ ನಡೆಸಿದರು.
ಹುಲಿ ದಾಳಿಗೆ ಅರಣ್ಯಾಧಿಕಾರಿಗಳ ನಿರ್ಲಕ್ಷ್ಯವೇ ಕಾರಣ. ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಕಾಡಿನಲ್ಲಿ ಅಕ್ರಮ ರೆಸಾರ್ಟ್ ತಲೆ ಎತ್ತಿರುವುದರಿಂದ ಪ್ರಾಣಿಗಳು ನಾಡಿಗೆ ನುಗ್ಗಲು ಕಾರಣವಾಗಿದೆ. ಹುಲಿ ದಾಳಿಯಾಗದಂತೆ ಶಾಶ್ವತ ಕ್ರಮ ಕೈಗೊಳ್ಳುತ್ತಿಲ್ಲ ಏಕೆ ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು. ಈ ವೇಳೆ ಪೊಲೀಸರು ಹಾಗೂ ರೈತರ ನಡುವೆ ತಳ್ಳಾಟ ನಡೆಯಿತು.
ಈಚೆಗೆ ಸರಗೂರು ತಾಲೂಕಿನಲ್ಲಿ ಹುಲಿ ದಾಳಿ ಆದಾಗ ನಮ್ಮೂರಿಗೂ ಬಂದು ಹುಲಿ ಹೆಜ್ಜೆಗಳನ್ನು ಪರಿಶೀಲಿಸಿದರು. ಆದರೆ ಬೋನು ಇಡದೆ ನಿರ್ಲಕ್ಷ್ಯ ಮಾಡಲಾಗಿದೆ. ಜನರ ಆಕ್ರೋಶದ ಭಯಕ್ಕೆ ಸರಗೂರಿನಲ್ಲಿ ಮರಣೋತ್ತರ ಪರೀಕ್ಷೆ ಮಾಡದೆ ಮೈಸೂರಿಗೆ ಮೃತದೇಹ ತಂದಿದ್ದಾರೆ. ವಲಯ ಅರಣ್ಯ ಅಧಿಕಾರಿ ಹಾಗೂ ಸಿಸಿಎಫ್‌ರನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.
ಮೃತರ ಕುಟುಂಬಕ್ಕೆ 20 ಲಕ್ಷ ರೂಪಾಯಿಯೊಂದಿಗೆ ಹೆಚ್ಚುವರಿಯಾಗಿ 10 ಲಕ್ಷ ರೂ. ಪರಿಹಾರ, ಅವರ ಕುಟುಂಬ ಸದಸ್ಯರೊಬ್ಬರಿಗೆ ಸರ್ಕಾರಿ ಉದ್ಯೋಗ, ಮನೆ ಕಟ್ಟಿಸಿಕೊಡಬೇಕು ಎಂದು ಆಗ್ರಹಿಸಿದರು.
ಕಾಡು ಪ್ರಾಣಿಗಳಿಂದ ಉಂಟಾದ ಬೆಳೆ ನಷ್ಟಕ್ಕೆ ವೈಜ್ಞಾನಿಕ ಪರಿಹಾರ ನೀಡಬೇಕು. ಕಾಡಿನ ಒಳಗಡೆ ನಡೆಯುತ್ತಿರುವ ಸಫಾರಿ ನಿಷೇಧಕ್ಕೆ ಕ್ರಮ ತೆಗೆದುಕೊಳ್ಳಬೇಕು. ಅಕ್ರಮ ರೆಸಾರ್ಟ್‌ಗಳನ್ನು ತೆರವು ಮಾಡಬೇಕು. ಕಾಡಿನಿಂದ ನಾಡಿಗೆ ಬರುವ ವನ್ಯಪ್ರಾಣಿಗಳ ತಡೆಯಲು ಎತ್ತರವಾಗಿ ಫೆನ್ಸಿಂಗ್ ನಿರ್ಮಿಸಲು ವಿಶೇಷ ಪ್ಯಾಕೇಜ್ ಘೋಷಿಸಬೇಕು. ಅರಣ್ಯ ಅಧಿಕಾರಿಗಳು, ಸಿಬ್ಬಂದಿ ಗಸ್ತು ಸಮರ್ಪಕವಾಗಿ ನಿರ್ವಹಿಸಲು ಸೂಚನೆ ನೀಡಬೇಕು ಎಂದು ಆಗ್ರಹಿಸಿದರು.
ಹುಲಿ, ಆನೆ ನಾಡಿಗೆ ಬಂದ ತಕ್ಷಣ ಸೆರೆ ಹಿಡಿಯಲು ವಿಶೇಷ ತಜ್ಞರ ತಂಡ ರಚಿಸಬೇಕು. ರೈತರ ವಿರುದ್ಧ ಅರಣ್ಯ ಇಲಾಖೆ ದಾಖಲಿಸಿರುವ ಪ್ರಕರಣಗಳನ್ನು ವಾಪಸ್ ಪಡೆಯಬೇಕು. ಅರಣ್ಯದೊಳಗೆ ಅಕ್ರಮ ಚಟುವಟಿಕೆಗಳ ತಡೆಗೆ ಶಿಸ್ತು ಕ್ರಮ ಕೈಗೊಳ್ಳಬೇಕು. ಈ ಎಲ್ಲ ವಿಚಾರಗಳ ಬಗ್ಗೆ ರಾಜ್ಯ ಮತ್ತು ಕೇಂದ್ರ ಸರ್ಕಾರ ಜಂಟಿಯಾಗಿ ವಿಶೇಷ ಕ್ರಮ ಕೈಗೊಂಡು ರೈತರ ರಕ್ಷಣೆಗೆ ಮುಂದಾಗಬೇಕು ಎಂದರು.
ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಮುಖಂಡರಾದ ಮಂಜು ಕಿರಣ್, ಹಳ್ಳಿಕೆರೆ ಬಸವರಾಜು, ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಹಳ್ಳಿಕೆರೆ ಹುಂಡಿ ಭಾಗ್ಯರಾಜ್, ಅಂಡುವಿನಹಳ್ಳಿ ಎಚ್.ಎಸ್.ರಾಜ್, ಕೆರೆಹುಂಡಿ ರಾಜಣ್ಣ, ಮುದ್ದಳ್ಳಿ ಮಧು ಇತರರು ಪ್ರತಿಭಟನೆಯಲ್ಲಿದ್ದರು.
ಶವಾಗಾರಕ್ಕೆ ಭೇಟಿ ನೀಡಿದ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿ, ರಾಜಶೇಖರ್ ಮೃತದೇಹಕ್ಕೆ ಅಂತಿಮ ನಮನ ಸಲ್ಲಿಸಿದರು.
ರೈತನ ಮೃತದೇಹವನ್ನು ಮೈಸೂರಿಗೆ ಏಕೆ ತಂದರು ಎಂಬುದು ನನಗೆ ಗೊತ್ತಿಲ್ಲ. ನಾನು ಅಂತಿಮ ದರ್ಶನ ಪಡೆಯಲು ಮೈಸೂರಿಗೆ ತಂದಿದ್ದಾರೆ ಎಂಬುದು ಸುಳ್ಳು. ಈ ಬಗ್ಗೆ ಅಧಿಕಾರಿಗಳ ಬಳಿ ವಿವರಣೆ ಕೇಳುತ್ತೇನೆ ಎಂದು ಮಾಧ್ಯಮದವರ ಪ್ರಶ್ನೆಗೆ ಸಚಿವರು ತಡವರಿಸುತ್ತಾ ಉತ್ತರಿಸಿದರು.
ಮೃತರ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರಧನ ನೀಡಿದ್ದು, ಅದನ್ನು ಹೆಚ್ಚಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಆಶ್ವಾಸನೆ ನೀಡಿದರು.
ಅರಣ್ಯ ಒತ್ತುವರಿ, ಅಕ್ರಮ ರೆಸಾರ್ಟ್‌ಗಳಿಂದ ಕಾಡು ಪ್ರಾಣಿಗಳು ನಾಡಿಗೆ ಬಂದು ಸಾವುಗಳು ಆಗುತ್ತಿವೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವರು, ಈ ಕುರಿತು ಮಾಹಿತಿ ಕಲೆ ಹಾಕಲು ತಿಳಿಸಿದ್ದು, ಈ ಬಗ್ಗೆ ಸಭೆ ಮಾಡಲಾಗುವುದು. ಹುಲಿ ದಾಳಿ ತೀವ್ರ ನೋವು ತಂದಿದೆ. ಇಂತಹ ಘಟನೆಗಳು ಮರುಕಳಿಸದಂತೆ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಹುಲಿಯ ಓಡಾಟದ ಬಗ್ಗೆ ದೂರು ಬಂದಿದ್ದರೂ ಬೋನು ಅಳವಡಿಸುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ. ಎಚ್.ಡಿ.ಕೋಟೆ, ಸರಗೂರಿನಲ್ಲೇ ಮರಣೋತ್ತರ ಪರೀಕ್ಷೆ ನಡೆಸಲು ಅವಕಾಶ ಇದ್ದರೂ, ಮೈಸೂರಿಗೆ ಏಕೆ ತಂದರು ಎಂಬ ಬಗ್ಗೆ ತನಿಖೆ ಮಾಡಿಸಿ ಕ್ರಮ ತೆಗೆದುಕೊಳ್ಳಲಾಗುವುದು. ಅರಣ್ಯ ದಂಚಿನ ಗ್ರಾಮದ ಜನರು ವನ್ಯಜೀವಿಗಳೊಂದಿಗೆ ಸಹಬಾಳ್ವೆ ನಡೆಸುವುದು ಅಗತ್ಯವಾಗಿದೆ ಎಂದು ತಿಳಿಸಿದರು.
ಅರಣ್ಯ ಸಚಿವ ಈಶ್ವರ ಖಂಡ್ರೆ ಮತ್ತು ಅರಣ್ಯ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ರಾಜ್ಯ ರೈತ ಸಂಘದ ಮುಖಂಡ ಪಿ.ಮರಂಕಯ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದಾರೆ.
ಬೆಣ್ಣೆಗೆರೆದಲ್ಲಿ ಜಾನುವಾರುಗಳನ್ನು ಮೇಯಿಸಲು ಹೋಗಿದ್ದಾಗ ಹುಲಿ ದಾಳಿ ಮಾಡಿ ರೈತ ರಾಜಶೇಖರ್ ಮೃತಪಟ್ಟಿದ್ದಾರೆ. ಈ ಸಾವಿಗೆ ಅರಣ್ಯ ಇಲಾಖೆಯ ನಿರ್ಲಕ್ಷೃವೇ ಕಾರಣವಾಗಿದೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.