ಜಿಲ್ಲೆ

ಹುಲಿ ಕೊಂದು ಕೆರೆಗೆ ಹಾಕಿದ್ದವನ ಬಂಧನ

Chamarajanagar

ಗುಂಡ್ಲುಪೇಟೆ: ತಾಲೂಕಿನ ಕೆಬ್ಬೆಪುರ ಗ್ರಾಮದ ಬಳಿ ಕೆರೆಯಲ್ಲಿ ಹುಲಿ ಕಾಲಿಗೆ ಕಲ್ಲುಕಟ್ಟಿ ಬೀಸಾಡಿದ್ದ ಆರೋಪಿಯನ್ನು ಅರಣ್ಯ ಇಲಾಖೆ ಬಂಧಿಸಿದೆ.
ಗ್ರಾಮದ ರೇಚಪ್ಪ ಬಂಧಿತ ಆರೋಪಿ. ಗ್ರಾಮದ ಮಲ್ಲಯ್ಯನಕಟ್ಟೆಯಲ್ಲಿ ಫೆ. 7ರಂದು ಹುಲಿ ಕಳೇಬರ ಪತ್ತೆಯಾಗಿತ್ತು. ಅದನ್ನು ಮೇಲೆತ್ತಿದಾಗ ಕಾಲು ಹಾಗೂ ಕುತ್ತಿಗೆಗೆ ತಂತಿಯಿಂದ ಕಲ್ಲು ಕಟ್ಟಿ ನೀರಿಗೆ ಮುಳುಗಿಸಿದ್ದು ಕಂಡುಬಂತು. ಈ ಹಿನ್ನೆಲೆಯಲ್ಲಿ ಇಲಾಖೆ ತನಿಖೆ ನಡೆಸಿದಾಗ ಹುಲಿ ಹತ್ಯೆ ರಹಸ್ಯೆ ಬಯಲಾಗಿದೆ.
ಆರೋಪಿ ರೇಚಪ್ಪ ತಮ್ಮ ಜಮೀನಿನ ಬೇಲಿಗೆ ಅಕ್ರಮವಾಗಿ ಹರಿಸಿದ್ದ ವಿದ್ಯುತ್ ತಗುಲಿ ಹುಲಿ ಸಾವಿಗೀಡಾಗಿತ್ತು. ಅದನ್ನು ಮುಚ್ಚಿಹಾಕುವ ಸಲುವಾಗಿ ಕಳೇಬರವನ್ನು ಕೆರೆಗೆ ತಂದು ಎಸೆದಿರುವುದಾಗಿ ಒಪ್ಪಿಕೊಂಡಿದ್ದಾನೆ. ಈತನಿಗೆ ಸಹಕರಿಸಿದ ಇತರರು ತಲೆಮರೆಸಿಕೊಂಡಿದ್ದು, ಕೂಡಲೇ ಬಂಧಿಸಲಾಗುವುದು. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಗುಂಡ್ಲುಪೇಟೆ ಉಪವಿಭಾಗದ ಎಸಿಎಫ್ ರವೀಂದ್ರ ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಕುಂದಕೆರೆ ವಲಯಾರಣ್ಯಾದಿಕಾರಿ ಶ್ರೀನಿವಾಸ್, ಎಸ್‌ಟಿಪಿಎಫ್ ಆರ್‌ಎಫ್‌ಒ ಎನ್.ಪಿ.ನವೀನಕುಮಾರ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.