ಜಿಲ್ಲೆ

ಹುಮ್ನಾಬಾದ್ ಕ್ಷೇತ್ರದಲ್ಲಿ ಯುವ ಹವಾ

ವಿಜಯವಾಣಿ ವಿಶೇಷ ಹುಮನಾಬಾದ್

ಹುಮನಾಬಾದ್ ಕ್ಷೇತ್ರದಲ್ಲಿ ಈಗ ಯುವ ಹವಾ ಸೃಷ್ಟಿಯಾಗಿದೆ. ಇಂಥದ್ದೊಂದು ಹವಾ ಕ್ರಿಯೇಟ್ ಗೆ ಕಾರಣರಾದವರು ಯುವ ಉತ್ಸಾಹಿ ಅಭಿಷೇಕ ಪಾಟೀಲ್. ಶಾಸಕ ರಾಜಶೇಖರ ಪಾಟೀಲ್ ಅವರ ಹಿರಿಯ ಪುತ್ರರಾಗಿರುವ ಅಭಿಷೇಕ ಅವರು ತಮ್ಮ ಕ್ರಿಯಾಶೀಲ ವ್ಯಕ್ತಿತ್ವ, ಜನ ಸೇವೆ ತುಡಿತ, ನಿರಂತರ ಸಾಮಾಜಿಕ ಚಟುವಟಿಕೆಗಳ ಮೂಲಕ ಎಲ್ಲರ ನೆಚ್ಚಿನ ಯುವ ನಾಯಕರಾಗಿ ಗುರುತಿಸಿಕೊಂಡಿದ್ದಾರೆ.

ಹುಮನಾಬಾದ್ ರಾಜಕೀಯದಲ್ಲಿ ಪಾಟೀಲ್ (ಗೌಡರ) ಪರಿವಾರ ಹಿಡಿತ ಹೊಂದಿದೆ. ಕಳೆದ ಐದು ದಶಕಗಳಿಂದ ಕ್ಷೇತ್ರದ ಅಭಿವೃದ್ಧಿ, ಜನಪರ ಸೇವೆ ಮುಖಾಂತರ ತನ್ನದೇ ಛಾಪು ಮೂಡಿಸಿಕೊಂಡಿದೆ. ಅನೇಕ ಸವಾಲು, ಅಡತಡೆಗಳು ಬಂದರೂ ಎಲ್ಲವೂ ಸಮರ್ಥವಾಗಿ ಎದುರಿಸಿ ಪ್ರಾಬಲ್ಯವನ್ನು ಮೆರೆದಿದೆ. ಇಂಥ ಪರಿವಾರದಿಂದ ಬಂದ ಅಭಿಷೇಕ ಅವರು ಸಹಜವೇ ರಾಜಕೀಯ ಸೆಳೆತಕ್ಕೆ ಒಳಗಾಗಿದ್ದಾರೆ. ತಾತ ದಿ. ಬಸವರಾಜ ಪಾಟೀಲ್, ತಂದೆ ರಾಜಶೇಖರ ಪಾಟೀಲ್ ಅವರಿಂದ ಪ್ರಭಾವಿತರಾಗಿ, ಅವರ ಮಾರ್ಗದರ್ಶನದಲ್ಲಿ ಹೆಜ್ಜೆ ಹಾಕುವ ಮೂಲಕ ಜನಮಾನಸದಲ್ಲಿ ಹೊಸ ಭರವಸೆ ಮೂಡಿಸಿದ್ದಾರೆ.

ಅಭಿಷೇಕ ಅವರು ಪಕ್ಕಾ ಸ್ನೇಹಜೀವಿ. ಸದಾ ಲವಲವಿಕೆಯೊಂದಿಗೆ ನಗುಮೊಗದೊಂದಿಗೆ ಇರುವ ವ್ಯಕ್ತಿತ್ವವುಳ್ಳ ಸ್ವಭಾವ. ಬಾಲ್ಯದಿಂದಲೇ ಅಪ್ಪಟ ಪ್ರತಿಭಾವಂತರೂ ಹೌದು. ಲಂಡನ್‌ನ ಯುನಿವರ್ಸಿಟಿ ಆಫ್ ಬೆಡ್ ಫೋರ್ ಶೈರ್ ನಿಂದ ಎಂಬಿಎ ಪದವಿ ಪಡೆದ ಬಳಿಕ (2014ರಲ್ಲಿ) ತವರಿಗೆ ಮರಳಿ ಜನ ಸೇವೆಗೆ ಸೈ ಎಂದಿದ್ದಾರೆ. ನಿರಂತರ ವಿವಿಧ ಚಟುವಟಿಕೆ ನಡೆಸುತ್ತ, ಜನರೊಂದಿಗೆ ಬೆರೆತು ಕೆಲಸ ಮಾಡುತ್ತ ಅಲ್ಪ ಅವಧಿಯಲ್ಲೇ ದೊಡ್ಡ ಟೀಮ್ ಕಟ್ಟಿದ್ದಾರೆ. ತಮ್ಮದೇ ಆದ ನೆಟ್ ವಕ್೯ ಮಾಡಿದ್ದಾರೆ. ಕ್ಷೇತ್ರದಲ್ಲಿ ಫುಲ್ ಟೈಮ್ ಕೊಟ್ಟು ಸಕ್ರಿಯ ತೊಡಗಿರುವುದು ಜನ ಮೆಚ್ಚುಗೆಗೆ ಕಾರಣವಾಗಿದೆ. ಯುವ ಸಮೂಹಕ್ಕಂತೂ ಫುಲ್ ಜೋಶ್ ನೀಡಿದೆ.

ಕಡಿಮೆ ಅವಧಿಯಲ್ಲಿ ರಾಜಕೀಯದ ವಿವಿಧ ಪಟ್ಟುಗಳನ್ನು ಚೆನ್ನಾಗಿ ಅರಿತಿರುವುದು ಅಭಿಷೇಕ ಅವರಿಗೆ ಈ ಕ್ಷೇತ್ರದಲ್ಲಿರುವ ಆಸಕ್ತಿ, ಅಭಿರುಚಿ ತೋರಿಸುತ್ತದೆ. ಕಳೆದ ಎರಡು ವಿಧಾನಸಭೆ ಚುನಾವಣೆಗಳಲ್ಲಿ ತಂದೆಯ ಭರ್ಜರಿ ಗೆಲುವಿನ ಹಿಂದೆ ಇವರ ನೇತೃತ್ವದ ತಂಡದ ಕೆಲಸ ಸಹ ಸಾಕಷ್ಟು ಮಹತ್ವದ್ದಾಗಿತ್ತು. ತಂದೆಯವರು ಸಭೆ, ಅಧಿವೇಶನ, ಸಮಾರಂಭ ಇತರೆ ಕೆಲಸಗಳಿಂದಾಗಿ ಬೇರೆಡೆ ಹೋಗಿದ್ದರೆ ಸ್ಥಳೀಯವಾಗಿ ಇದ್ದುಕೊಂಡು ಅಭಿಷೇಕ ಅವರು ಈ ಜಾಗ ಯಶಸ್ವಿಯಾಗಿ ತುಂಬುತ್ತಿದ್ದಾರೆ. ನಾನಾ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ. ಜನರ ಗೋಳು ಆಲಿಸುತ್ತಿದ್ದಾರೆ. ಅವುಗಳಿಗೆ ಪರಿಹಾರ ಒದಗಿಸುತ್ತಿದ್ದಾರೆ. ಜನರೊಂದಿಗೆ ಬೆರೆವ ಗುಣದ ಕಾರಣ ಕ್ರಮೇಣ ಜನರು ಎಲ್ಲ ಕಾರ್ಯಕ್ರಮಗಳಿಗೆ ಇವರನ್ನು ಆತ್ಮೀಯವಾಗಿ ಆಹ್ವಾನಿಸುತ್ತಿದ್ದಾರೆ. ಭರವಸೆಯ ಯುವ ಮುಖಂಡರಾಗಿ ಹೊರಹೊಮ್ಮಿದ್ದಾರೆ.

ಅಭಿಷೇಕ ಅವರು ಕಳೆದ ನವೆಂಬರ್ ನಲ್ಲಿ ಟಿಎಪಿಸಿಎಂಎಸ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಮಾದರಿ ಟಿಎಪಿಸಿಎಂಎಸ್ ಮಾಡುವ ಸಂಕಲ್ಪದಿಂದ ಕೆಲಸ ಮಾಡುತ್ತಿದ್ದಾರೆ. ಇಲ್ಲಿನ ವಿಎಸ್ಎಸ್ಎನ್ ನಿರ್ದೇಶಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಅನೇಕ ನಾಯಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ನಮ್ಮ ಟೀಮ್ ಲೀಡರ್ ಗೆ ಮುಂದೆ ಒಳ್ಳೆಯ ಭವಿಷ್ಯವಿದೆ ಎಂದು ವಿಶ್ವಾಸದಿಂದ ಹೇಳುತ್ತಾರೆ ಯುವಕರು.

ಸಮಸ್ಯೆಗಳನ್ನು ಕೇಳ್ತಾರೆ
ಪರಿಹಾರ ಒದಗಿಸ್ತಾರೆ

ಅಭಿಷೇಕ ಅವರ ಸರಳ ಸ್ವಭಾವ ಅವರನ್ನು ದಿನೇ ದಿನೆ ಜನಪ್ರೀಯತೆ ಕೊಡುತ್ತಿದೆ. ತಮ್ಮ ಭೇಟಿಗೆ ಬಂದವರೊಂದಿಗೆ ಆತ್ಮೀಯತೆ, ಪ್ರೀತಿ, ಸೌಜನ್ಯದಿಂದ ವರ್ತಿಸುವ ಸ್ವಭಾವ ಎಲ್ಲರಿಗೂ ಹಿಡಿಸಿದೆ. ಶಾಂತವಾಗಿ ಜನರ ಸಮಸ್ಯೆ ಆಲಿಸಿ, ಅವುಗಳಿಗೆ ಪರಿಹಾರ ಒದಗಿಸುತ್ತಾರೆ. ಅನೇಕ ಸಮಸ್ಯೆಗಳಿಂದ ಫಟಾಫಟ್ ಪರಿಹಾರ ಒದಗಿಸುವುದು ಇವರ ವಿಶೇಷ ಗುಣ. ಹೀಗಾಗಿ ವಿವಿಧೆಡೆಯಿಂದ ಬರುವ ಜನರು ಈಗ ಸಣ್ಣ ಗೌಡುರ್ ಎಲ್ಲಿ ಎಂದು ಕೇಳುತ್ತಿದ್ದಾರೆ. ಅಭಿಷೇಕ ಅವರು ಕನ್ನಡ, ಇಂಗ್ಲಿಷ್, ಹಿಂದಿ, ಮರಾಠಿ ಭಾಷೆಯಲ್ಲಿ ಹಿಡಿತ ಹೊಂದಿದ್ದಾರೆ. ಉತ್ತಮ ವಾಗ್ಮಿಯಾಗಿದ್ದಾರೆ. ಭಾಷಣದಲ್ಲಿ ಅರ್ಥಪೂರ್ಣ ವಿಚಾರ ಮಂಡಿಸಿ ಜನರ ಗಮನ ಸೆಳೆಯುತ್ತಾರೆ. ಇಂದಿನ ರಾಜಕೀಯ, ಆಗಾಗ್ಗೆ ಬದಲಾಗುತ್ತಿರುವ ಸನ್ನಿವೇಶಗಳ ಬಗ್ಗೆ ಸಾಕಷ್ಟು ಮಾಹಿತಿ ಹೊಂದಿ ಅದಕ್ಕನುಗುಣ ಹೆಜ್ಜೆಯಿಡುತ್ತಾರೆ.

ಕಷ್ಟದಲ್ಲಿದ್ದವರಿಗೆ ನೆರವು
ಕಷ್ಟದಲ್ಲಿದ್ದವರಿಗೆ ಕೈಲಾದಷ್ಟು ನೆರವು ನೀಡುವ ಉದಾರ ಮನಸ್ಸು ಅಭಿಷೇಕ ಹೊಂದಿದ್ದಾರೆ. ಕರೊನಾ ಸಂದರ್ಭದಲ್ಲಿ ಜನರು ಸಂಕಷ್ಟಕ್ಕೆ ಸಿಲುಕಿದಾಗ ಕ್ಷೇತ್ರದೆಲ್ಲೆಡೆ ಯುವ ಟೀಮ್ ಜತೆಗೆ ಸುತ್ತಾಡಿ ನೆರವಿಗೆ ಧಾವಿಸಿದ್ದಾರೆ. ಕಷ್ಟದಲ್ಲಿದ್ದವರ ಜತೆಗೆ ನಿಂತು 30 ಸಾವಿರಕ್ಕೂ ಹೆಚ್ಚು ಕುಟುಂಬಗಳಿಗೆ ಫುಡ್ ಕಿಟ್ ವಿತರಿಸಿ ಆತ್ಮಸ್ಥೈರ್ಯ ತುಂಬಿದ್ದಾರೆ. ಯಾವುದೇ ಜಾತಿ, ಮತ, ಪಂಥ, ಪಕ್ಷದ ಭೇದ ಮಾಡದೆ ಕಷ್ಟದಲ್ಲಿದ್ದವರ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುವುದು ಇವರ ದೊಡ್ಡ ಗುಣ.

ಸರಳವಾಗಿ ಜನ್ಮ ದಿನ
ಶುಕ್ರವಾರ ಅಭಿಷೇಕ ಪಾಟೀಲ್ ಅವರಿಗೆ ಅವರಿಗೆ 33ನೇ ಜನ್ಮ ದಿನದ ಸಂಭ್ರಮ. ಕೋವಿಡ್ ಹಿನ್ನಲೆಯಲ್ಲಿ ಸಾರ್ವಜನಿಕ ಸಮಾರಂಭ ನಡೆಸದೆ ಸರಳ ಹಾಗೂ ಯಾವುದೆ ಆಡಂಬರವಿಲ್ಲದೆ ಪಟ್ಟಣದಲ್ಲಿ ಜನ್ಮ ದಿನ ಆಚರಿಸಲಾಗುತ್ತಿದೆ. ಪಟ್ಟಣದ ಆರಾಧ್ಯದೈವ ಶ್ರೀ ವೀರಭದ್ರೇಶ್ವರ ದೇವರ ದರ್ಶನ ಪಡೆಯುವುದು, ನಂತರ ರಾಜರಾಜೇಶ್ವರಿ ದೇವಾಲದಯಲ್ಲಿ ವಿಶೇಷ ಪೂಜೆ ನೆರವೇರಲಿದೆ. ಅಂಧ ಮಕ್ಕಳೊಂದಿಗೆ ಹುಟ್ಟು ಹಬ್ಬ ಆಚರಿಸುವ ಸರಳ ಕಾರ್ಯಕ್ರಮ ಜರುಗಲಿದೆ. ಕರೊನಾ ಕಾರಣ ಜನಾರೋಗ್ಯ ಗಮನದಲ್ಲಿಟ್ಟುಕೊಂಡು ಜನರಿಗೆ ಆಹ್ವಾನಿಸದೆ ಸರಳವಾಗಿ ಕಾರ್ಯಕ್ರಮ ನಡೆಯಲಿದೆ ಎಂದು ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ಉಮೇಶ ಜಮಗಿ ತಿಳಿಸಿದ್ದಾರೆ.